»   » ಎಕ್ಸ್‌ಕ್ಯೂಸ್‌ ಮಿ ಗ್ಯಾರಂಟಿ ನೂರು ದಿನ ಓಡುತ್ತೆ- ಪಟ್ನಾಯಕ್‌

ಎಕ್ಸ್‌ಕ್ಯೂಸ್‌ ಮಿ ಗ್ಯಾರಂಟಿ ನೂರು ದಿನ ಓಡುತ್ತೆ- ಪಟ್ನಾಯಕ್‌

Posted By:
Subscribe to Filmibeat Kannada
  • ವಿಶಾಖ ಎನ್‌.
ಎಕ್ಸ್‌ಕ್ಯೂಸ್‌ ಮಿ !

ಹಾಗಂತ ತಮ್ಮ ಚಿತ್ರದ ಹೆಸರು ಹೇಳುವುದರ ಮೂಲಕವೇ ಕೈಮುಂದೆ ತಂದವರು ಯುವ ನಿರ್ದೇಶಕ ಪ್ರೇಮ್‌. ನಾನು ಪ್ರೊಡ್ಯೂಸರ್‌ ಅಂತ ಮುಖದಲ್ಲಿ ನಗೆ ತುಂಬಿಕೊಂಡವರು ಸುರೇಶ್‌. ಅವರಿಬ್ಬರ ಸಂತೋಷ ಹಂಚಿಕೊಂಡು, ಸುದ್ದಿಗಾರರ ಜೊತೆ ಹರಟಲು ಹೈದರಾಬಾದಿನಿಂದ ಬಂದಿದ್ದವರು ಯುವ ಸಂಗೀತ ನಿರ್ದೇಶಕ ಆರ್‌.ಪಿ.ಪಟ್ನಾಯಕ್‌.

ಬುಧವಾರ ಸಂಜೆ (ಅ. 15) ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ‘ಎಕ್ಸ್‌ಕ್ಯೂಸ್‌ ಮಿ’ ಸಿನಿಮಾ ಸಂತೋಷ ಕೂಟ. ಸಿನಿಮಾ ನೋಡಿದ ತಕ್ಷಣ ಹಿಂದೂ ಮುಂದೂ ನೋಡದೆ ಸೆನ್ಸಾರ್‌ ಸಮಿತಿಯೂ ಸರ್ಟಿಫಿಕೇಟ್‌ ಕೊಟ್ಟಿದ್ದಕ್ಕೆ, ಡಿಟಿಎಸ್‌ಗೆ ಅಳವಡಿಸಿದ ನಂತರ ಚಿತ್ರದ ಮೊದಲ ಕಾಪಿಗೆ ಶಹಭಾಸ್‌ಗಿರಿ ಸಿಕ್ಕಿದ್ದಕ್ಕೆ, ಚಿತ್ರ ನೂರು ದಿನ ಓಡೋದು ಗ್ಯಾರಂಟಿ ಅಂತ ಸಿನಿಮಾ ಪಂಡಿತರು ಭವಿಷ್ಯ ನುಡಿದಿದ್ದಕ್ಕೆ ಪ್ರೇಮ್‌ ಹಾಗೂ ಸುರೇಶ್‌ ಆನಂದತುಂದಿಲರಾಗಿದ್ದರು.

ನನಗೆ ರೀರೆಕಾರ್ಡಿಂಗ್‌ ಟೈಮಲ್ಲಿ ನಿರ್ದೇಶಕ- ನಿರ್ಮಾಪಕರ ಮೂತಿ ನೋಡಿದರೇ ಸಿನಿಮಾ ಬಂಡವಾಳ ಏನು ಅಂತ ಗೊತ್ತಾಗುತ್ತೆ. ‘ಜಯಂ’ ತೆಲುಗು ಸಿನಿಮಾ ನೂರು ದಿನ ಓಡುತ್ತೆ ಅಂದಿದ್ದೆ. 175 ದಿನ ಓಡ್ತು. ಇವತ್ತು ಹೇಳ್ತಿದೀನಿ- ಎಕ್ಸ್‌ಕ್ಯೂಸ್‌ ಮಿ ಕನಿಷ್ಠ ನೂರು ದಿನ ಓಡುತ್ತೆ. ನಾನು ಸಿನಿಮಾ ಇಷ್ಟೊಂದು ಅದ್ಭುತವಾಗಿ ಬರುತ್ತೆ ಅಂತ ಅಂದುಕೊಂಡೇ ಇರಲಿಲ್ಲ. ಸುರೇಶ್‌ ಮೋಡದ ಮೇಲೆ ತೇಲುತ್ತಿದ್ದಾರೆ. ಅವರನ್ನು ಹಿಡಿಯುವುದೇ ಕಷ್ಟವಾಗಿದೆ. ಕನ್ನಡಕ್ಕೆ ಅವರು ಒಳ್ಳೆಯ ಕೊಡುಗೆ. ಅವರಿಂದ ಇನ್ನಷ್ಟು ಚಿತ್ರಗಳು ಬರಲಿ ಎಂದು ಆರ್‌.ಪಿ.ಪಟ್ನಾಯಕ್‌ ನಕ್ಕರು.

ಹೊಸತು ಹೊಸತು, ವಿತರಕರೂ ಕೂಡ : ಪಕ್ಕಾ ಬ್ಯುಸಿನೆಸ್‌ಮನ್‌ ಆದ ಸುರೇಶ್‌ ಸಿನಿಮಾ ಮಾಡೋಕೆ ಮುಂಚೆಯೇ ಸಾಕಷ್ಟು ಮಾರುಕಟ್ಟೆ ಸಮೀಕ್ಷೆ ನಡೆಸಿದ್ದಾರೆ. ಸಿನಿಮಾ ವಿಷಯದಲ್ಲಿ ಬರಭೂಮಿ ಎನಿಸಿರುವ ಮಲೆನಾಡಿನ ಮೊದಲೂರು ಶಿವಮೊಗ್ಗೆಯಲ್ಲಿ ಸ್ನೇಹಿತ ವ್ಯಾಪಾರಿಯಾಬ್ಬನನ್ನು ವಿತರಕನನ್ನಾಗಿಸಿದ್ದಾರೆ. ವಿನೈಲ್‌ ಹೋರ್ಡಿಂಗ್‌ಗಳನ್ನು ಕಾಣದ ಶಿವಮೊಗ್ಗೆಯ ಆಯಕಟ್ಟಿನ ಜಾಗೆಗಳಲ್ಲಿ ನಾಲ್ಕು ‘ ಎಕ್ಸ್‌ಕ್ಯೂಸ್‌ ಮಿ’ ವಿನೈಲ್‌ ಹೋರ್ಡಿಂಗ್‌ಗಳು ನಿಂತಿವೆ. ಮೈಸೂರಲ್ಲಿ ಶಿವಪ್ರಸಾದ್‌ ಎಂಬ ಗೆಳೆಯ ವಿತರಣೆಯ ಹೊಣೆ ಹೊತ್ತು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ತಮ್ಮ ಚಿತ್ರಕ್ಕೆ ವಿತರಕರನ್ನು ಹುಟ್ಟುಹಾಕಿರುವ ವಿವರಗಳನ್ನು ಕೊಡುತ್ತಾ , ಸಿನಿಮಾ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ಸುರೇಶ್‌ ಬೀಗಿದರು.

ರಾಮ್‌ಗೋಪಾಲ್‌ ವರ್ಮಾ ಆಗುವಾಸೆ : ಹಸನ್ಮುಖಿ ಪ್ರೇಮ್‌ ಮುಖವಂತೂ ಮೊರದಗಲವಾಗಿತ್ತು. ರೀ-ರಿಲೀಸ್‌ ಆಗಿ ಹೌಸ್‌ಫುಲ್‌ ಓಡುತ್ತಿರುವ ತಮ್ಮ ಚೊಚ್ಚಲ ನಿರ್ದೇಶನದ ಚಿತ್ರ ‘ಕರಿಯಾ’ ನೆನಪಲ್ಲೇ ಇವರ ಹಾಯಿದೋಣಿ ಇನ್ನೂ ಸಾಗುತ್ತಿದೆ. ‘ಕರಿಯಾ’ದಂಥ ರೌಡಿಗಳ ಚಿತ್ರ ಮಾಡಿದ ನಾನು ‘ಎಕ್ಸ್‌ಕ್ಯೂಸ್‌ ಮಿ’ಯಂಥಾ ಲವ್‌ ಥ್ರಿಲ್ಲರ್‌ ಮಾಡಿರುವುದನ್ನು ಅನೇಕರಿಗೆ ಜೀರ್ಣಿಸಿಕೊಳ್ಳೋಕೇ ಆಗುತ್ತಿಲ್ಲ. ಚೇಂಜ್‌ ಅನ್ನೋದು ನನ್ನ ಮೂಲ ಮಂತ್ರ. ನಿರ್ಮಾಪಕರಿಗೆ ಮೊದಲೇ ಭರ್ತಿ ಸ್ವಾತಂತ್ರ್ಯ ಕೊಡಿ ಅಂತ ಕೇಳೋದು ಜಾಯಮಾನ. ಸುರೇಶ್‌ ನಾನು ಕೇಳಿದ್ದನ್ನೆಲ್ಲ ಕೊಟ್ಟರು. ಪಟ್ನಾಯಕ್‌ ಬೇಕು ಅಂದೆ, ಕರೆ ತಂದರು. ಹೊಸಬರನ್ನೇ ಹಾಕಿ ಅಂತ ಪಟ್ನಾಯಕ್‌ ಕೊಟ್ಟ ಸಲಹೆಯನ್ನು ನಾನು ಅನುಮೋದಿಸಿದ್ದಕ್ಕೂ ತಲೆದೂಗಿದರು. ಕ್ಲೈಮ್ಯಾಕ್ಸ್‌ ಹಾಡನ್ನು ರಾಜೇಶ್‌ ಕೈಲಿ ಹಾಡಿಸಲಾಗಿತ್ತು. ಯಾಕೋ ನನಗೆ ಇನ್ನೂ ಹೆಚ್ಚು ಪಿಚ್‌ ಇರುವ ಗಾಯಕ ಬೇಕು ಅನ್ನಿಸಿತು. ಶಂಕರ್‌ ಮಹದೇವನ್‌ ಅವರನ್ನ ಕರೆಸಿ ಅಂದೆ. ಅದಕ್ಕೂ ಕಾಸು ಕೊಟ್ಟು, ಡಬ್ಬಲ್‌ ಕೆಲಸವನ್ನು ತಾಳ್ಮೆಯಿಂದ ನೋಡಿದರು...ಚಿತ್ರದಲ್ಲಿ ಯೋಧ ಇದ್ದಾನೆ, ಸಂಗೀತವಿದೆ, ಪ್ರೇಮಕ್ಕೆ ಜೈ ಎಂಬ ಜಾಗತಿಕ ಮಂತ್ರವಿದೆ. ನವೆಂಬರ್‌ ತಿಂಗಳ ಎರಡನೇ ವಾರ ಬಹುಶಃ ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗುತ್ತೆ ...

ಮಾತುಮಾತಲ್ಲೇ ಮನೆ ಕಟ್ಟುವಷ್ಟು ಉತ್ಸಾಹಭರಿತರಾಗಿದ್ದ ಪ್ರೇಮ್‌ಗೆ ಒಳಗೊಳಗೇ ಮಣಿರತ್ನಂ ಮತ್ತು ರಾಮ್‌ಗೋಪಾಲ್‌ ವರ್ಮಾ ಆಗುವ ಕನಸಿದೆ. ಗಾಂಧಿನಗರಿಯ ಕಾಲೆಳೆಯುವ ಪರಿಸರದಲ್ಲೂ ಏಣಿ ಹತ್ತುವುದು ಸಾಧ್ಯ ಅನ್ನೋದು ಆತ ಮಾಡಿಕೊಂಡಿರುವ ಸಂಕಲ್ಪ.

‘ಎಕ್ಸ್‌ಕ್ಯೂಸ್‌ ಮಿ’ ಪ್ರತಿಶತ 90ರಷ್ಟು ತಂತ್ರಜ್ಞರ ಚಿತ್ರ. 5 ಪ್ರತಿಶತ ಕ್ರೆಡಿಟ್ಟು ಪ್ರೊಡ್ಯೂಸರ್‌ ಆದ ನನಗೆ ಸಲ್ಲಬೇಕು. ಇನ್ನೈದು ಪ್ರತಿಶತ ಶಹಭಾಸ್‌ಗಿರಿ ತಾರಾಬಳಗಕ್ಕೆ. ಅನೇಕರು ಪೀಚು ಅಂತ ಲೇವಡಿ ಮಾಡಿದ ಸುನಿಲ್‌ ರಾವ್‌ ಈ ಚಿತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ. ಕೊನೆಯದಾಗಿ ಪ್ರೇಮ್‌ ಹಾಗೂ ಪಟ್ನಾಯಕ್‌ಗೆ ಜೈ ಎಂದು ಸುರೇಶ್‌ ಇನ್ನೊಮ್ಮೆ ನಕ್ಕರು.

ಕ್ಯಾಸೆಟ್‌ ಖುಷಿ : ಅಶ್ವಿನಿ ಆಡಿಯೋ ಹೊರತಂದಿರುವ ‘ಎಕ್ಸ್‌ಕ್ಯೂಸ್‌ ಮಿ’ ಆಡಿಯೋಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಎಷ್ಟು ಕ್ಯಾಸೆಟ್ಟುಗಳ ಖರ್ಚಾದವು ಎಂಬ ಬಗ್ಗೆ ಅಶ್ವಿನಿ ಆಡಿಯೋದ ರಾಮ್‌ಪ್ರಸಾದ್‌ ಪಕ್ಕಾ ಅಂಕಿ- ಅಂಶ ಕೊಡಲಿಲ್ಲ. ಅದು ಅವರ ಮಾರುಕಟ್ಟೆಯ ಗುಟ್ಟು. ಈ ಗುಟ್ಟು ರಟ್ಟಾಗಲಿ ಎಂದೇ ಪಟ್ನಾಯಕ್‌ ಫೋನ್‌ ಮಾಡಿ ರಾಮ್‌ಪ್ರಸಾದ್‌ ಅವರನ್ನು ಕರೆಸಿದ್ದು ಫಲಕಾರಿಯಾಗಲಿಲ್ಲ.

ಪಟ್ನಾಯಕ್‌ ಸಲಹೆ ಜಾರಿಗೆ ಬಂದದ್ದು : ಹೊಸಬರನ್ನು ಹಾಕಿಕೊಂಡು ಪ್ರೊಡಕ್ಷನ್‌ ಖರ್ಚನ್ನು ಉಳಿಸಿ. ಉಳಿಸಿದ ಹಣವನ್ನು ಪ್ರಚಾರಕ್ಕೆ ತೊಡಗಿಸಿ. ಮೊದಲ ದಿನದ ನಾಲ್ಕೂ ಷೋಗಳು ಭರ್ತಿಯಾಗಿ ಓಡಿದರೆ, ಮರುದಿನ ಜನರೇ ಪ್ರಚಾರಕರ್ತರಾಗುತ್ತಾರೆ. ಸಿನಿಮಾ ಓಡೇ ಓಡುತ್ತೆ. ಈ ಮಾತನ್ನು ಸುರೇಶ್‌ಗೆ ಹೇಳಿದೆ ಅವರು ಕೇಳಿದರು. ಅವರಿಗೆ ಒಳ್ಳೆಯದಾಗುತ್ತೆ ಎಂದ ಪಟ್ನಾಯಕ್‌ ಸದ್ಯಕ್ಕೆ ಪೂರ್ತಿ ಬಿಡುವಾಗಿದ್ದಾರೆ.

ಪಟ್ನಾಯಕ್‌ ಈಗ ಇಂಗ್ಲಿಷ್‌ ನಿರ್ದೇಶಕ : ಹೀಗೆ ಬಿಡುವಾಗಲು ಅವರು ನಿರ್ದೇಶನದತ್ತ ವಾಲಲು ಸಿದ್ಧರಾಗುತ್ತಿರುವುದೇ ಕಾರಣ. ತೆಲುಗಿನ ಹಾಗೂ ಕನ್ನಡದ ಅನೇಕ ಚಿತ್ರಗಳಿಗೆ ಮಟ್ಟು ಹಾಕುವ ಆಫರ್‌ಗಳನ್ನು ಪಟ್ನಾಯಕ್‌ ಒಪ್ಪಿಕೊಳ್ಳುತ್ತಿಲ್ಲ. ಇದೇನು, ತುಂಬಾ ಪ್ರೀತಿಸುವ ಸಂಗೀತವನ್ನೇ ಬಿಡೋದಾ ಅಂತ ಕೆಣಕಿದರೆ, ‘ಸಂಗೀತಾನಾ ನಾನು ಬಿಡುವ ಮಾತೇ ಇಲ್ಲ. ಅಮೆರಿಕೆಯಲ್ಲಿ ಒಂದು ಇಂಗ್ಲಿಷ್‌ ಸಿನಿಮಾ ನಿರ್ದೇಶಿಸುವ ಆಫರ್‌ ಸಿಕ್ಕಿದೆ. ಇಂಥಾ ಅವಕಾಶ ಜೀವನದಲ್ಲಿ ಒಮ್ಮೆ ಮಾತ್ರ ಸಿಗುತ್ತೆ. ಆ ಚಿತ್ರವನ್ನು ಅಚ್ಚುಕಟ್ಟಾಗಿ ಮಾಡುವುದು ನನ್ನ ಸದ್ಯದ ಏಕೈಕ ಕನಸು. ಸಿನಿಮಾ ಮುಗಿಯಲಿ, ಮತ್ತೆ ಸಂಗೀತ ಲೋಕಕ್ಕೆ ಮರಳೋಣಂತೆ. ಮುಂದಿನ ಪ್ರೇಮ್‌ ನಿರ್ದೇಶನದ ಚಿತ್ರಕ್ಕೆ ನಾನೇ ಸ್ವಾಮಿ ಮ್ಯೂಸಿಕ್‌ ಡೈರೆಕ್ಟರ್ರು’ ಅಂತ ಪಟ್ನಾಯಕ್‌ ಪುಟ್ಟ ಕಣ್ಣುಗಳನ್ನು ಇನ್ನಷ್ಟು ಅರಳಿಸಿದರು. ಸಿಕ್ಕ ಕಾಂಪ್ಲಿಮೆಂಟಿಗೆ ಮತ್ತೆ ಪ್ರೇಮ್‌ ಮೊಗ ಮೊರದಗಲವಾಯಿತು.

Post your views

ಇದನ್ನೂ ಓದಿ-
‘ಎಕ್ಸ್‌ಕ್ಯೂಸ್‌ ಮಿ’ ಅನ್ನುತ್ತಾ ಕನ್ನಡಕ್ಕೆ ಬಂದರು ಪಟ್ನಾಯಕ್‌


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada