»   » ಸದಭಿರುಚಿಯ ‘ಬೇರು’ಗಳು ಮತ್ತಷ್ಟು ಗಟ್ಟಿಯಾಗಲಿ!

ಸದಭಿರುಚಿಯ ‘ಬೇರು’ಗಳು ಮತ್ತಷ್ಟು ಗಟ್ಟಿಯಾಗಲಿ!

Posted By:
Subscribe to Filmibeat Kannada
 • ಮಲೆನಾಡಿಗ

 • naanu_nimmavanu@rediffmail.com
  ಕನ್ನಡ ಅಭಿಮಾನಿಗಳ ಅಂತಾರಾಷ್ಟ್ರೀಯ ವೇದಿಕೆಯಾದ ‘ಈ-ಕವಿ’ ಯ ಸಾಂಸ್ಕೃತಿಕ ವಿಭಾಗ ಭಾನುವಾರ(ನ.13) ‘ಬೇರು’ ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು.

  ನಗರದ ಶ್ರೀಗಂಧ ಚಿತ್ರ ಮಂದಿರದಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕನ್ನಡದ ಅರ್ಥಪೂರ್ಣ ಚಿತ್ರಗಳಿಗೆ ಬೆಂಬಲ ನೀಡಲು ಮಾಡಿದ ಈ ಪ್ರಯತ್ನ ಶ್ಲಾಘನೀಯ.

  ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಬೇಕಿದ್ದ ಮೊದಲ ಪ್ರದರ್ಶನ ಕಾರಣಾಂತರದಿಂದ ತುಸು ನಿಧಾನವಾಯಿತು. ಇಷ್ಟನ್ನು ಬಿಟ್ಟರೆ ಪ್ರದರ್ಶನ ಅಚ್ಚುಕಟ್ಟಾಗಿತ್ತು. ‘ಬೇರು’ ಚಿತ್ರದ ಮೂರೂ ಪ್ರದರ್ಶನಗಳು ಜನರ ಮೆಚ್ಚುಗೆಗೆ ಪಾತ್ರವಾದವು.

  ಚಿತ್ರದ ಮಧ್ಯಾಹ್ನದ ಪ್ರದರ್ಶನಕ್ಕೆ ವಿಶೇಷ ಅತಿಥಿಯಾಗಿ ನಟ ಸುಚೇಂದ್ರಪ್ರಸಾದ್‌, ಕನ್ನಡವೇ ಸತ್ಯ ಖ್ಯಾತಿಯ ಗ್ಲೋಬಲ್‌ ಕನ್ಸಲ್ಟೆನ್ಸಿಯ ಮುಖ್ಯಸ್ಥರಾದ ರಂಗನಾಥ್‌ ಸೇರಿದಂತೆ ವಿವಿಧ ಗಣ್ಯರು ಆಗಮಿಸಿದ್ದರು.

  ಆ ಸಂದರ್ಭದಲ್ಲಿ ನಡೆದ ಪುಟ್ಟ ಸಮಾರಂಭದಲ್ಲಿ ಮಾತನಾಡಿದ ಸುಚೇಂದ್ರಪ್ರಸಾದ್‌, ಇಂದಿನ ಕನ್ನಡ ಚಿತ್ರಗಳ ಸ್ಥಿತಿ-ಗತಿಯನ್ನು ವಿವರಿಸಿದರು.

  ಸರ್ಕಾರಿ ಕಚೇರಿಯ ಕಾರ್ಯವೈಖರಿಗೆ ‘ಬೇರು’ ಚಿತ್ರ ಕೈಗನ್ನಡಿ ಹಿಡಿದಂತಿದೆ. ಇನ್ನಿತರ ಸಮಸ್ಯೆಗಳ ಸುತ್ತ ಹೆಣೆದ ಕಥೆಯುಳ್ಳ ಚಿತ್ರಗಳನ್ನು ಪೋಷಿಸಬೇಕು. ವಾಸ್ತವಿಕತೆಗೆ ಹತ್ತಿರವಾದಂತಹ ಚಿತ್ರಗಳನ್ನು ಹೆಚ್ಚು ನಿರ್ಮಾಣ ಮಾಡುವುದು ಒಳಿತು ಎಂದರು.

  ಒಂದು ಚಿತ್ರ ನಿರ್ಮಾಣಕ್ಕೆ ಬೇಕಾಗುವ ಪರಿಶ್ರಮ ಹಾಗೂ ಅದಕ್ಕೆ ಸಿಗುವ ಪ್ರತಿಕ್ರಿಯೆ ಬಗ್ಗೆ ಪ್ರಸ್ತಾಪಿಸಿದ ಸುಚೇಂದ್ರ ಪ್ರಸಾದ್‌, ಇಂತಹ ಪ್ರದರ್ಶನಕ್ಕೆ ಕೇವಲ ಉಪಕಾರ ಮಾಡುವ ಮನೋಭಾವದಿಂದ ಬರಬೇಡಿ. ಇಂತಹ ಚಿತ್ರಗಳಿಗೆ ನಿಜವಾದ ಬೆಂಬಲವನ್ನು ನೀಡಿ ಎಂದರು.

  ಗ್ಲೋಬಲ್‌ ಕನ್ಸಲ್‌ಟಂಟ್ಸ್‌ ಸಂಸ್ಥೆಯ ರಂಗನಾಥ್‌(ರಂಗಣ್ಣ) ಮಾತನಾಡಿ, ಕನ್ನಡದ ಏಳಿಗೆಗೆ ಎಲ್ಲರ ಬೆಂಬಲವೂ ಅಗತ್ಯ. ಇಂತಹ ಚಿತ್ರಗಳನ್ನು ಮತ್ತು ಕನ್ನಡವೇ ಸತ್ಯದಂತಹ ಕಾರ್ಯಕ್ರಮಗಳನ್ನು ಬೆಂಬಲಿಸಬೇಕೆಂದು ಕೇಳಿಕೊಂಡರು.

  ‘ಈ ಕವಿ’ ಬಳಗದ ಹೇಮಂತ್‌ ಸ್ವಾಗತ ಮತ್ತು ವಂದನಾರ್ಪಣೆಯನ್ನು ನೆರವೇರಿಸಿದರು. ಮೂರೂ ಪ್ರದರ್ಶನಕ್ಕೂ ಪ್ರೇಕ್ಷಕರು ಕಿಕ್ಕಿರಿದಿದ್ದರು. ಜನರ ಬೆಂಬಲ ಕಂಡು ಆಯೋಜಕರು ಅಚ್ಚರಿಕೊಂಡರು.

  ಅಂತೂ ಇಂತಹ ಪ್ರಯತ್ನಗಳಿಗೆ ಫಲ ದೊರೆತಿದೆ. ಸದಭಿರುಚಿಯ ಚಿತ್ರಗಳನ್ನು ಉಳಿಸಿ ಬೆಳೆಸುವ ಆಸೆಯನ್ನು ಬಿತ್ತಿದ್ದಾಗಿದೆ, ಅದಕ್ಕೆ ಬೇರು ಮೂಡಿ ಚಿಗುರೊಡೆದಾಗ ಅದಕ್ಕೆ ನೀರು ಎರೆದು ಪೋಷಿಸಿ, ಬೆಳೆಸುವ ಹೊಣೆ ನಮ್ಮೆಲ್ಲರದು.

  ಚಿತ್ರಗಳಿಗೆ, ಕಲಾವಿದರಿಗೆ ಆಶ್ರಯ ನೀಡುವ ಹೆಮ್ಮರವನ್ನಾಗಿ ಚಿತ್ರರಂಗವನ್ನು ಬೆಳೆಸುವ ಬಯಕೆಯನ್ನು ಹೊಂದಿದೆ; ‘ಈ ಕವಿ’ . ಈ ಪ್ರಯತ್ನಕ್ಕೆ ಫಲ ದೊರೆಯಲಿ...

  ಕನ್ನಡ ಚಿತ್ರಂ ಗೆಲ್ಗೆ
  ಕನ್ನಡ ಚಿತ್ರಂ ಬಾಳ್ಗೆ
  ಕನ್ನಡ ಚಿತ್ರಂ ಗಲ್ಲಿ ಗಲ್ಲಿಗೆ
  ನೀವೇನಂತೀರಾ?

  ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada