»   » ನಟ, ನಿರ್ಮಾಪಕ ಎಂ.ಪಿ.ಶಂಕರ್ ಅಸ್ತಂಗತ

ನಟ, ನಿರ್ಮಾಪಕ ಎಂ.ಪಿ.ಶಂಕರ್ ಅಸ್ತಂಗತ

Posted By:
Subscribe to Filmibeat Kannada

ಮೈಸೂರು, ಜು.17: ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ಎಂ.ಪಿ.ಶಂಕರ್ (73) ಮೈಸೂರಿನ ವಿಜಯನಗರ ಬಡಾವಣೆಯ ತಮ್ಮ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಕೆಲ ದಿನಗಳಿಂದ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು.

ಎಂ.ಪಿ.ಶಂಕರ್ ಎಂದರೆ ಆ ತಕ್ಷಣಕ್ಕೆ ನೆನಪಾಗುವುದು 'ಸತ್ಯ ಹರಿಶ್ಚಂದ್ರ' ಚಿತ್ರದ 'ಕುಲದಲ್ಲಿ ಮೇಲ್ಯಾವುದೋ ಹುಚ್ಚಪ್ಪ ಕುಲದಲ್ಲಿ ಕೀಳ್ಯಾವುದೋ' ಎಂಬ ಹಾಡು. ಕನ್ನಡದ ಅನೇಕ ಚಿತ್ರಗಳಲ್ಲಿ ಖಳನಾಯಕನ ಪಾತ್ರಗಳಲ್ಲಿ ನಟಿಸಿದ್ದರು. ಸತ್ಯ ಹರಿಶ್ಚಂದ್ರ, ರತ್ನಮಂಜರಿ, ನಾರದ ವಿಜಯ,ಗಂಧದ ಗುಡಿ, ಬಂಗಾರದ ಮನುಷ್ಯ, ಶನಿ ಪ್ರಭಾವ, ಶಂಕರ್ ಅವರ ಕೆಲವು ಪ್ರಮುಖ ಚಿತ್ರಗಳು. ಇವರು ಪೋಷಕ ನಟರಾಗಿ ಕೂಡ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಗಂಧದ ಗುಡಿ ಚಿತ್ರವಲ್ಲದೆ, ಕಾಡು ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದ ಹಲವು ಚಿತ್ರಗಳ ನಿರ್ಮಾಪಕರು ಆಗಿದ್ದರು.

ನಟ ಎಂ.ಪಿ.ಶಂಕರ್ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ''ಪ್ರಾಣಿಪ್ರಿಯರು ಹಾಗೂ ಡಾ.ರಾಜ್‌ರ ಸಮಕಾಲೀನರಲ್ಲಿ ಒಬ್ಬರಾಗಿದ್ದ ಶಂಕರ್ 15 ದಿನಗಳ ಹಿಂದಷ್ಟೇ ವನ್ಯಜೀವಿಗಳ ಕುರಿತು ಚಿತ್ರ ತೆಗೆಯಬೇಕು ಎಂದು ಹೇಳಿದ್ದರು. ಆದರೆ ಸರ್ಕಾರದ ನೀತಿ ನಿಯಮಗಳು ಅಡ್ಡಿ ಬರುತ್ತಿವೆ ಎಂಬ ಕಾರಣಕ್ಕೆ ನೊಂದಿದ್ದರು'' ಎಂದು ಡಾ.ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ತಮ್ಮನೆನಪುಗಳನ್ನು ಹರಿಯಬಿಟ್ಟರು. ''ಅವರೊಬ್ಬ ಬರೀ ನಟನಷ್ಟೇ ಅಲ್ಲ ಉತ್ತಮ ನೃತ್ಯಪಟು ಎಂಬುದನ್ನ್ನು ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಎಂ.ಪಿ.ಶಂಕರ್ ಸಾಬೀತು ಪಡಿಸಿದ್ದಾರೆ.'' ಎಂದು ನಟ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದರು.

(ದಟ್ಸ್‌ಕನ್ನಡ ಸಿನಿವಾರ್ತೆ)

ಜಾತಿ,ಮತ ಮೀರಿದ ಈ ಹಾಡಿಗೆ ಹೆಜ್ಜೆ ಹಾಕದವರುಂಟೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada