»   » 'ಶಿವಮಣಿ' ಎಂಬ ಮತ್ತೊಂದು ಭಾರಿ ಬಜೆಟ್ ಚಿತ್ರ

'ಶಿವಮಣಿ' ಎಂಬ ಮತ್ತೊಂದು ಭಾರಿ ಬಜೆಟ್ ಚಿತ್ರ

Posted By:
Subscribe to Filmibeat Kannada

ಕೇವಲ ಎರಡೇ ಎರಡು ಹಿಟ್ ಚಿತ್ರಗಳನ್ನು ಕೊಟ್ಟಿರುವ ನಟ ಶ್ರೀಮುರಳಿಗೆ ಮತ್ತೊಂದು ಭಾರಿ ಬಜೆಟ್ ಚಿತ್ರದಲ್ಲಿ ನಟಿಸುವ ಸುಯೋಗ ಒದಗಿಬಂದಿದೆ. 'ಚಂದ್ರ ಚಕೋರಿ' ಹಾಗೂ 'ಕಂಠಿ' ಚಿತ್ರಗಳನ್ನು ಬಿಟ್ಟರೆ ಉಳಿದ ಚಿತ್ರಗಳು ಬಾಕ್ಸಾಫೀಸಲ್ಲಿ ಪಲ್ಟಿ ಹೊಡೆದು ನಿರ್ಮಾಪಕರನ್ನು ತಿಪ್ಪರಲಾಗ ಹಾಕಿಸಿವೆ. ಹಾಗಾಗಿ ಶ್ರೀಮುರಳಿಯೊಂದಿಗೆ ಭಾರಿ ಬಜೆಟ್ ಚಿತ್ರ ಎಂದರೆ ನಿರ್ಮಾಪಕರಿಗೆ ಎದೆ ಧಸಕ್ ಎನ್ನುತ್ತದೆ, ಹಣೆ ಮೇಲೆ ಬೆವರು ಸಾಲುಗಟ್ಟುತ್ತದೆ.

ಈಗಾಗಲೇ ಶ್ರೀಮುರಳಿ ಹಾಗೂ ವಿಜಯ ರಾಘವೇಂದ್ರ ನಟಿಸಿದ 'ಮಿಂಚಿನ ಓಟ'ನಿರ್ಮಾಪಕ ಎ ಎಂಆರ್ ರಮೇಶ್ ಅವರಿಗೆ ಅನಿರೀಕ್ಷಿತ ಆಘಾತ ಉಂಟು ಮಾಡಿದೆ. ಅವರು ಗಾಂಧಿನಗರದಿಂದ 'ಮಿಂಚಿನ ಓಟ'ದಲ್ಲಿ ಮರೆಯಾಗುವ ಎಲ್ಲ ಸಾಧ್ಯತೆಗಳಿವೆ! ಇಷ್ಟೆಲ್ಲಾ ಇತಿಹಾಸ ತಿಳಿದಿದ್ದರೂ ಮತ್ತೊಬ್ಬ ನಿರ್ಮಾಪಕ ಅಜಯ್ ಪೈ ಗುಂಡಿಗೆ ಗಟ್ಟಿ ಮಾಡಿಕೊಂಡು ಶ್ರೀಮುರಳಿ ಮೇಲೆ ಕೋಟ್ಯಾಂತರ ಬಂಡವಾಳ ಹಾಕಲು ಧೈರ್ಯ ಮಾಡಿದ್ದಾರೆ.

ಇದೇ ಮೊದಲ ಬಾರಿಗೆ ಪೈ ಗ್ರೂಪ್ ನವರು 4 ಕೋಟಿ ಬಂಡವಾಳ ಹೂಡಿ ಚಿತ್ರ ನಿರ್ಮಿಸುತ್ತಿದೆ. ಚಿತ್ರದ ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ 'ಶಿವಮಣಿ' ಎಂದು ಹೆಸರಿಡಲಾಗಿದೆ. 65 ದಿನಗಳ ಕಾಲದ 'ಶಿವಮಣಿ' ಚಿತ್ರೀಕರಣ ಬಹುತೇಕ ಮುಗಿದಿದ್ದು ಕೊನೆ ಘಳಿಗೆಯಲ್ಲಿ ಕೆಲವೊಂದು ಅಪಸ್ವರಗಳು ಮಿಡಿದಿವೆ. ಬೆಂಗಳೂರು ಸೇರಿದಂತೆ ದೊಡ್ಡಬಳ್ಳಾಪುರ ಬಸ್ ನಿಲ್ದಾಣ, ಜೆ ಎಸ್ ಎಸ್ ಕಾಲೇಜು, ಗಣಿ ಪ್ರದೇಶಗಳಲ್ಲಿ, ಕುಲು ಮನಾಲಿ ಮುಂತಾದ ಕಡೆ ಚಿತ್ರೀಕರಣ ಮುಗಿದಿದೆ. ಆದರೆ ಚಿಕ್ಕನಾಯಕನಹಳ್ಳಿ ಗಣಿ ಪ್ರದೇಶದಲ್ಲಿ ಸಮಸ್ಯೆ ಎದುರಾದ ಕಾರಣ ಚಿತ್ರೀಕರಣ ತಂಡ ಅಲ್ಲಿಂದ ಬೇರೆಡೆಗೆ ಸ್ಥಳಾಂತರವಾಗಿದೆ. ಒಂದು ಸಾಹಸ ಸನ್ನಿವೇಶದಲ್ಲಿ ಶ್ರೀಮುರಳಿ ಗಾಯಗೊಂಡಿದ್ದಾರೆ. ಇನ್ನೇನು ಕ್ಲೈಮ್ಯಾಕ್ಸ್ ಚಿತ್ರೀಕರಣ ಶುರುವಾಗಬೇಕು ಎನ್ನುವ ಹೊತ್ತಿಗೆ ಶ್ರೀಮುರಳಿ ಅನಾರೋಗ್ಯದ ಕಾರಣ ಹಾಸಿಗೆ ಹಿಡಿದಿದ್ದಾರೆ. ಇದೆಲ್ಲದರ ಪರಿಣಾಮ ಚಿತ್ರೀಕರಣ ಎರಡು ವಾರಗಳ ಕಾಲ ಮುಂದೂಡಲ್ಪಟ್ಟಿದೆ.

ಇದೇ ಪ್ರಥಮ ಬಾರಿಗೆ ಚಿತ್ರರಂಗಕ್ಕೆ ಅಡಿಯಿಟ್ಟ ಅಜಯ್ ಪೈ ಅವರಿಗೆ ಒಂದಿಷ್ಟು ಸಿಹಿ ಮತ್ತೊಂದಿಷ್ಟು ಕಹಿ ಅನುಭವ. ಒಟ್ಟಿನಲ್ಲಿ ಈ ಚಿತ್ರದಿಂದ ಅವರೊಂದಿಷ್ಟು ಪಾಠಗಳನ್ನು ಕಲಿತಿದ್ದಾರಂತೆ.
'ಶಿವಮಣಿ', ಯುವಕರನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಿಸಿದ ಚಿತ್ರವಾಗಿದ್ದು. ಇದಕ್ಕಾಗಿ ನಿರ್ದೇಶಕ ಅಮರನಾಥ್ ಸಾಕಷ್ಟು ಹೋಂ ವರ್ಕ್ ಸಹ ಮಾಡಿದ್ದಾರಂತೆ. ಇನ್ನು ನಿರ್ಮಾಪಕರಂತೂ ಜಿಪುಣತನ ಮಾಡದೆ ಕಲಾವಿದರ ಬೇಕು ಬೇಡಗಳನ್ನು ಅಚ್ಚುಕಟ್ಟಾಗಿ ಪೂರೈಸಿದ್ದಾರೆ. ಅದ್ಭುತ ಸಾಹಸ ದೃಶ್ಯಗಳು ಹಾಗೂ ಉತ್ತಮ ಚಿತ್ರಕಥೆ ಬಿಗಿಯಾದ ನಿರೂಪಣೆ ಇರುವ ಕಾರಣ ಈ ಚಿತ್ರ ಬಾಕ್ಸಾಫೀಸಿನಲ್ಲಿ ಪಲ್ಟಿ ಹೊಡೆಯುವುದಿಲ್ಲ ಎನ್ನುತ್ತಾರೆ ನಿರ್ದೇಶಕ ಅಮರನಾಥ್.

(ದಟ್ಸ್ ಕನ್ನಡ ಸಿನಿವಾರ್ತೆ)

ವಿಮರ್ಶೆ: ಮಿಂಚಿನ 'ಸಂಚಾರ', ಸೋದರರ ಚೀತ್ಕಾರ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X