'ತಾಯಿಯ ಮಡಿಲು' ಜಯಸುಧಾ ಆಸ್ಪತ್ರೆಗೆ ದಾಖಲು
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಹಿರಿಯ ನಟಿ ಜಯಸುಧಾ(53) ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರು ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದಾಗಿ ಮೂಲಗಳು ತಿಳಿಸಿವೆ.
"ಗ್ಯಾಸ್ಟ್ರಿಕ್ ಸಮಸ್ಯೆಯಿರುವ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ದಿನಗಳ ಕಾಲ ಚಿಕಿತ್ಸೆ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿರುವುದಾಗಿ" ಜಯಸುಧಾ ಅವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ. ಜಯಸುಧಾ ಅವರು ಕಾಂಗ್ರೆಸ್ ಶಾಸಕಿಯಾಗಿ ಆಯ್ಕೆಯಾದ ಮೇಲೆ ಅಷ್ಟಾಗಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ.
ಸದ್ಯಕ್ಕೆ ಜಯಸುಧಾ ಅವರು ತೆಲುಗಿನ 'ಶ್ರೀರಾಮರಾಜ್ಯಂ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವೈ ಎಸ್ ಜಗಮೋಹನ್ ರೆಡ್ಡಿ ಅವರನ್ನು ಬೆಂಬಲಿಸುತ್ತಿರುವ ಜಯಸುಧಾ ಅವರನ್ನು ದಿವಂಗತ ವೈ ಎಸ್ ರಾಜಶೇಖರ ರೆಡ್ಡಿ ಅವರು ರಾಜಕೀಯಕ್ಕೆ ಕರೆತಂದಿದ್ದರು.
ಎಪ್ಪತ್ತು, ಎಂಬತ್ತರ ದಶಕದಲ್ಲಿ ತೆಲುಗು ಚಿತ್ರರಸಿಕರ ಮನಸೂರೆಗೊಂಡ ನಾಯಕಿ ಜಯಸುಧಾ. ತೆಲುಗಿನಲ್ಲಿ ಆಕೆ ಅಭಿನಯದ ಪ್ರೇಮಾಭಿಷೇಕಂ ಹಾಗೂ ಅಡವಿ ರಾಮುಡು ಚಿತ್ರಗಳು ಖ್ಯಾತಿಯ ಉತ್ತುಂಗಕ್ಕೇರುವಂತೆ ಮಾಡಿದವು. ಕನ್ನಡದ ತಾಯಿಯ ಮಡಿಲು ಚಿತ್ರದಲ್ಲಿ ಜಯಸುಧಾ ಅಭಿನಯಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











