»   » ಟಿವಿ ಪತ್ರಕರ್ತೆಯಾಗಿ ಮುಂಗಾರು ಮಳೆ ಹುಡುಗಿ!

ಟಿವಿ ಪತ್ರಕರ್ತೆಯಾಗಿ ಮುಂಗಾರು ಮಳೆ ಹುಡುಗಿ!

Posted By:
Subscribe to Filmibeat Kannada

ಬರೀ ಅಂದಚೆಂದವನ್ನಷ್ಟೇ ನೆಚ್ಚಿಕೊಳ್ಳದೆ ಅಭಿನಯ ಸಾಮರ್ಥ್ಯವನ್ನು ಪ್ರದರ್ಶಿಸುವ ಎಲ್ಲ ವಿಧದ ಪಾತ್ರಗಳಲ್ಲೂ ಪೂಜಾಗಾಂಧಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿಕೊಂಡ 'ಅನು' ಚಿತ್ರದ ಪಾತ್ರ ತುಂಬಾ ಖುಷಿ ಕೊಟ್ಟಿದೆಯಂತೆ. 'ಅನು' ಮುಂದಿನ ತಿಂಗಳು ಬಿಡುಗಡೆಯಾಗುತ್ತಿದ್ದು ಈ ಕುರಿತು ಪತ್ರಿಕಾಗೋಷ್ಠಿ ಕರೆಯಲಾಗಿತ್ತು. ಅನು ಚಿತ್ರತಂಡ ಸುದ್ದಿಗಾರರ ಮುಂದೆ ತಮ್ಮ ಚಿತ್ರೀಕರಣದ ಅನುಭವಗಳನ್ನು ಕೊಂಚಕೊಂಚವಾಗಿ ಬಿಚ್ಚಿಟ್ಟರು. ಪೂಜಾಗಾಂಧಿ, ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಬಾಲು, ನಿರ್ದೇಶಕ ಶಿವ ಗಣಪತಿ, ಚಿತ್ರದ ಮತ್ತೊಬ್ಬ ನಾಯಕಿ 'ದುನಿಯಾ' ಖ್ಯಾತಿಯ ರಶ್ಮಿ ಸಹ ಪಾಲ್ಗೊಂಡಿದ್ದರು.

''ಚಿತ್ರದಲ್ಲಿ ನಾನು ಟಿವಿ ಪತ್ರಕರ್ತೆಯಾಗಿ ನಟಿಸಿದ್ದೇನೆ. ಕೆಲವೊಂದು ರಹಸ್ಯ ಘಟನೆಗಳು ನನ್ನ ಕಣ್ಣೆದುರಿಗೇ ನಡೆಯುತ್ತಿರುತ್ತವೆ. ಇವು ಕೊನೆಯತನಕ ಬಗೆಹರಿಯುವುದೆ ಇಲ್ಲ. ತೆಲುಗಿನ 'ಅನಸೂಯ' ಚಿತ್ರದ ರೀಮೇಕ್ ಇದು. ತೆಲುಗಿನಲ್ಲಿ ರವಿಬಾಬು ನಿರ್ದೇಶಿಸಿದ್ದ ಚಿತ್ರದಲ್ಲಿ ಭೂಮಿಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಆ ಪಾತ್ರವನ್ನು ನಾನು ಕನ್ನಡದಲ್ಲಿ ನಿರ್ವಹಿಸಿದ್ದೇನೆ. ನಿಜಕ್ಕೂ ನನಗೆ ಖುಷಿ ಕೊಟ್ಟ ಪಾತ್ರ'' ಎಂದರು ಪೂಜಾ ಗಾಂಧಿ.

ಉತ್ತಮ ವೃತ್ತಿಪರರು ಹಾಗೂ ಬಹಳಷ್ಟು ಯುವಕರನ್ನು ಹೊಂದಿದ್ದ ಚಿತ್ರತಂಡ ಉತ್ಸಾಹದ ಬುಗ್ಗೆಯಂತಿತ್ತು. ನಿರ್ಮಾಪಕ ಬಾಲು ಮತ್ತು ನಿರ್ದೇಶಕ ಶಿವ ಗಣಪತಿ ತುಂಬು ಉತ್ಸಾಹದಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ ಎಂದು ಪೂಜಾ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

ಚಿತ್ರದ ಡಬ್ಬಿಂಗ್ ಕಾರ್ಯ ಮುಗಿದಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ 'ಅನು' ಉತ್ತಮ ಗುಣಮಟ್ಟದ ಚಿತ್ರ. ತೆಲುಗಿನ ಅನಸೂಯ ಚಿತ್ರಕ್ಕ್ಕಿಂತ ಭಿನ್ನವಾಗಿ ಮೂಡಿಬಂದಿರುವುದಾಗಿ ನಿರ್ಮಾಪಕ ಬಾಲು ಹೇಳಿದರು. ಚಿತ್ರದಲ್ಲಿನ ಎಲ್ಲ ಕಲಾವಿದರೂ ಉತ್ತಮ ಅಭಿನಯವನ್ನು ಪ್ರದರ್ಶಿಸಿದ್ದಾರೆ ಎಂಬುದು ನಿರ್ದೇಶಕ ಶಿವ ಗಣಪತಿ ಅವರ ಅಭಿಪ್ರಾಯ. ಚಿತ್ರದ ನಾಯಕಿಯರಲ್ಲಿ ಒಬ್ಬರಾದ ರಶ್ಮಿ ಮಾತನಾಡುತ್ತಾ, ಚಿತ್ರೀಕರಣ ನಡೆಯುತ್ತಿದ್ದಷ್ಟು ಕಾಲ ಪೂಜಾಗಾಂಧಿ ನನಗೆ ಒಳ್ಳೆಯ ಕಂಪನಿ ಕೊಟ್ಟರು ಎಂದಷ್ಟೇ ಹೇಳಿದರು.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada