ಪ್ರಜ್ವಲ್ ದೇವರಾಜ್ ಕೋಟೆಗೆ ಡಿಂಪಲ್ ಲಗ್ಗೆ
ಮುಂಬೈ ಬೆಡಗಿ ಡಿಂಪಲ್ ಮತ್ತೊಮ್ಮೆ ಕನ್ನಡದ 'ಕೋಟೆ'ಗೆ ಲಗ್ಗೆ ಹಾಕಿದ್ದಾರೆ. ಅಂದರೆ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿರುವ 'ಕೋಟೆ' ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಕೆ ಈ ಹಿಂದೆ 'ಸಿಹಿಮುತ್ತು' ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೆ ಇನ್ನೂ ಬಿಡುಗಡೆ ಮೋಕ್ಷ ಸಿಕ್ಕಿಲ್ಲ. ಸುಮಾರು ಎರಡು ಮೂರು ವರ್ಷಗಳ ಹಿಂದೆಯೇ ಶುರುವಾದ ಈ ಚಿತ್ರ ಅದ್ಯಾಕೋ ಏನೋ ಡಬ್ಬದಲ್ಲೆ ಬಂಧಿಯಾಗಿದೆ.
'ಕೋಟೆ' ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ಡಿಂಪಲ್ ಆದರೆ ಮತ್ತೊಬ್ಬರು ಕನ್ನಡದ ಹುಡುಗಿ ಗಾಯತ್ರಿ. ಈಕೆ ನಟಿ ಸುಧಾರಾಣಿ ಅವರ ಅಣ್ಣನ ಮಗಳು. ಗಾಯತ್ರಿ ಈಗಾಗಲೆ ತೆಲುಗಿನ 'ಜಾಲಿ ಬಾಯ್ಸ್ 'ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗಾಯತ್ರಿ ಕನ್ನಡದಲ್ಲಿ ನಟಿಸುತ್ತಿರುವ ಮೊದಲ ಚಿತ್ರವಿದು.
'ಕೋಟೆ' ಚಿತ್ರದ ಮುಹೂರ್ತ ಸಮಾರಂಭ ಇದೇ ಶುಕ್ರವಾರ(ಸೆ.17) ಹುಬ್ಬಳ್ಳಿಯ ಇಸ್ಕಾನ್ ದೇವಾಲಯದಲ್ಲಿ ನಡೆಯಲಿದೆ. ಈ ಚಿತ್ರಕ್ಕೆ ಶ್ರೀನಿವಾಸ್ ರಾಜ್ ನಿರ್ದೇಶನ, ರಘುದೀಕ್ಷಿತ್ ಸಂಗೀತವಿದೆ. ಚಿತ್ರಕ್ಕೆ ನಿರ್ಮಾಪಕರು ಮಂಜುನಾಥ್. ಅಂದಹಾಗೆ ಈ ಚಿತ್ರಕ್ಕೆ ಈ ಹಿಂದೆ ನಾಯಕಿಯಾಗಿ ಆಯ್ಕೆಯಾಗಿದ್ದ ರಾಗಿಣಿ ಕೈಕೊಟ್ಟಿದ್ದಾರೆ. ಅದರ ವಿವರಗಳು ಶೀಘ್ರದಲ್ಲೆ ನಿಮ್ಮ ಮುಂದೆ... ನಿರೀಕ್ಷಿಸಿ.


Click it and Unblock the Notifications











