»   » ಸಂಕ್ರಾಂತಿಗೆ ಸರ್ಕಸ್; ಈಗ ಗೀತಸಂಭ್ರಮ

ಸಂಕ್ರಾಂತಿಗೆ ಸರ್ಕಸ್; ಈಗ ಗೀತಸಂಭ್ರಮ

Posted By: *ಜಯಂತಿ
Subscribe to Filmibeat Kannada

ಕೆಲಸದ ವಿಷಯದಲ್ಲಿ ದಯಾಳ್ ರಾಕ್ಷಸ,ಗಣೇಶ್
ತಂತ್ರಜ್ಞರನ್ನು ಗೌರವಿಸುವ ವಿಷಯದಲ್ಲಿ ದಯಾಳ್ ಮಾದರಿ,ರಾಕ್‌ಲೈನ್ ವೆಂಕಟೇಶ್

Circus Audio launch function
ದಯಾಳ್ ಖುಷಿಯಾಗಿದ್ದರು. ಅವರ ಮಹತ್ವಾಕಾಂಕ್ಷೆಯ 'ಸರ್ಕಸ್" ಚಿತ್ರ ತೆರೆಗೆ ಸಿದ್ಧವಾಗಿರುವ ಖುಷಿಯಿದು. ಮನಸ್ಸಿನಲ್ಲಿ ಅಂದುಕೊಂಡದ್ದು ಯಥಾವತ್ತಾಗಿ ಸಿನಿಮಾದಲ್ಲಿ ಮೂಡಿರುವ ಸಂಭ್ರಮವದು. ಇದಿನ್ನೂ ಸಂಭ್ರಮದ ಆರಂಭ. ಸರ್ಕಸ್ ತೆರೆಕಾಣುವುದು ಸಂಕ್ರಾಂತಿಗೆ. ಆ ಸುಗ್ಗಿ ಸರ್ಕಸ್‌ಗೆ ಮುನ್ನುಡಿಯಾಗಿ ಧ್ವನಿಸುರುಳಿ ಹೊರಬಂದಿದೆ- ದಯಾಳ್ ಖುಷಿಯ ಆಲಾಪಗಳಂತೆ!

ರಾಜಿಯ ಮಾತೇ ಇಲ್ಲ. ನನಗೆ ದುಡ್ಡು ಬೇಕು, ಹೆಸರೂ ಬೇಕು. ಹಾಗೆಂದು ದಯಾಳ್ ಕ್ಷಣ ಮೌನವಾದರು. ತಮ್ಮ ಮಾತುಗಳಲ್ಲಿ ಅಹಂ ಇಣುಕುತ್ತಿಲ್ಲವೆನ್ನುವುದನ್ನು ಖಚಿತಪಡಿಸಿಕೊಂಡವರಂತೆ ಮತ್ತೆ ಮಾತಿಗೆ ಕುದುರಿಕೊಂಡರು. 'ನನ್ನ ಚಿತ್ರವನ್ನು ಇತರ ಚಿತ್ರಗಳ ಜೊತೆ ಗುರ್ತಿಸಲು ಅಥವಾ ಹೋಲಿಸಲು ನಾನು ಬಯಸುವುದಿಲ್ಲ. ನಾನೊಬ್ಬ ಸಾಂಪ್ರದಾಯಿಕ ಉದ್ಯಮಿಯೂ ಅಲ್ಲ. ಇದು ನನ್ನದೇ ಸೃಷ್ಟಿ. ಅಂತೆಯೇ ನಿರ್ದೇಶಕನಾಗಿ ನನ್ನ ಸಿನಿಮಾ ಸೃಷ್ಟಿಯ ಬಗ್ಗೆ ಬೀಗಲಾರೆ. ಆದರೆ ನಿರ್ಮಾತೃವಾಗಿ ಹಾಗೂ ಓರ್ವ ವ್ಯವಸ್ಥಾಪಕನಾಗಿ ಚಿತ್ರದ ಬಗ್ಗೆ ಬೀಗುತ್ತೇನೆ" ಎಂದರು.

ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಗಳ ಸಂಖ್ಯೆ ದೊಡ್ಡದಿತ್ತು. ಕಾರ್ಯಕ್ರಮದ ಕೇಂದ್ರದಲ್ಲಿ ನಾಯಕ ನಟ ಗಣೇಶ್ ಇದ್ದರು. ಕಾರ್ಯಕ್ರಮಕ್ಕೆ ಚೈತನ್ಯದ ರೂಪದಲ್ಲಿ ಪುನೀತ್ ರಾಜಕುಮಾರ್, ಸ್ಫೂರ್ತಿಯ ರೂಪದಲ್ಲಿ ಯೋಗರಾಜಭಟ್ ಹಾಜರಿದ್ದರು. ಎಲ್ಲರ ಮಾತುಗಳಲ್ಲೂ ದಯಾಳ್ ಬಣ್ಣನೆ, 'ಸರ್ಕಸ್" ಬಗ್ಗೆ ಕೌತುಕ.

ಔಪಚಾರಿಕ ಕಾರ್ಯಕ್ರಮಕ್ಕೂ ಮುನ್ನ ಸಿನಿಮಾಗೆ ದುಡಿದ ತಂತ್ರಜ್ಞರು ದಯಾಳ್ ಗೌರವಿಸಿದರು. 'ಇದೊಂದು ಒಳ್ಳೆಯ ಸಂಪ್ರದಾಯ" ಎಂದು ಪುನೀತ್ ಹೊಗಳಿದರು. 'ಸರ್ಕಸ್ ತಂತ್ರಜ್ಞರ ಸಿನಿಮಾ ಎನ್ನುವುದನ್ನು ಈ ಗೌರವ ಸೂಚಿಸುತ್ತದೆ" ಎಂದು ವಿಶ್ಲೇಷಿಸಿದರು.

ದಯಾಳ್ ಸಿನಿಮಾ ಗೆಲ್ಲಲಿ ಎಂದ ರಾಕ್‌ಲೈನ್ ಮಾತುಗಳಲ್ಲಿ 2008ರಲ್ಲಿ ಉದ್ಯಮ ಕಂಡ ಸೋಲಿನ ಕಹಿಯಿತ್ತು. 2009ರಲ್ಲಾದರೂ ಕನ್ನಡ ಚಿತ್ರಗಳು ಹೆಚ್ಚಿನ ಪ್ರಮಾಣದಲ್ಲಿ ಗೆಲ್ಲಲಿ ಎನ್ನುವುದು ಅವರ ಬಯಕೆ ಹಾಗೂ ಹಾರೈಕೆ.

ಗಣೇಶ್ ಹೆಚ್ಚು ಮಾತನಾಡಲಿಲ್ಲ. ಇದೊಂದು ಪ್ರೇಮಕಥೆಯ ಥ್ರಿಲ್ಲರ್ ಎಂದು ಚಿತ್ರವನ್ನು ಬಣ್ಣಿಸಿದ ಅವರು, ಕೆಲಸದ ವಿಷಯದಲ್ಲಿ ದಯಾಳ್ ರಾಕ್ಷಸ ಎಂದರು. ಸಂಗೀತ ನಿರ್ದೇಶಕ ಎಮಿಲ್ ಮತ್ತು ಛಾಯಾಗ್ರಾಹಕ ಶೇಖರ್‌ಚಂದ್ರು ಅವರ ನೈಪುಣ್ಯವನ್ನು ಗಣೇಶ್ ಮೆಚ್ಚಿಕೊಂಡರು.

ನಾಯಕಿ ಅರ್ಚನಾ ಗುಪ್ತಾ, ನಗೆನಟ ಸಾಧು ಕೋಕಿಲ, ಗೀತರಚನೆಕಾರ ಕವಿರಾಜ್ ಶುಭಕೋರಿದವರ ಪಟ್ಟಿಯಲ್ಲಿ ಎದ್ದುಕಂಡವರು.

ಪೂರಕ ಓದಿಗೆ
ಸಕ್ಸಸ್ ಗಾಗಿ ಪದ್ಮನಾಭನ್ ದಯಾಳ್ ಸರ್ಕಸ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada