ಮೆಜೆಸ್ಟಿಕ್ ಪ್ರದೇಶದಲ್ಲಿ ಕನ್ನಡಚಿತ್ರದ ಕಾವಲುಗಾರರು

ಮೆಜಿಸ್ಟಿಕ್ ಪ್ರದೇಶದಲ್ಲಿರುವ ಒಟ್ಟು 13 ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳೆಂದರೆ ಮೇನಕಾ, ಸ್ವಪ್ನ, ನರ್ತಕಿ, ಸಂತೋಷ್, ಸಾಗರ್, ತ್ರಿವೇಣಿ, ಅಪರ್ಣ, ಕಪಾಲಿ. ಈ ಚಿತ್ರಮಂದಿರಗಳಲ್ಲೂ ಬೇರೆ ಭಾಷೆಯ ಚಿತ್ರಗಳು ಬಿಡುಗಡೆಗೊಂಡಿವೆ ಇಲ್ಲವೆಂದಲ್ಲ. ಆದರೂ ಕನ್ನಡಕ್ಕೆ ಈ ಚಿತ್ರಮಂದಿರಗಳಲ್ಲಿ ಮೊದಲ ಆದ್ಯತೆ. ಇನ್ನು ಉಳಿದ ಚಿತ್ರಮಂದಿರಗಳು ತೆಲುಗು ಮತ್ತು ಹಿಂದಿ ಎಲ್ಲೋ ಕೆಲವೊಮ್ಮೆ ಇಂಗ್ಲಿಷ್ ಚಿತ್ರಗಳಿಗೆ ಮೀಸಲು.
ಏಳೆಂಟು ವರ್ಷಗಳ ಹಿಂದೆ ಬೆಂಗಳೂರು ಕೆಂಪೇಗೌಡ ರಸ್ತೆಯಲ್ಲಿ ಸಂಚರಿಸಿದ ಫ್ಲ್ಯಾಶ್ ಬ್ಯಾಕ್ ನೀವು ಒಂದ್ಸಲ ಮೆಲುಕು ಹಾಕಿದರೆ ಅಲ್ಲಿ ಕನ್ನಡ ಹೊರತಾಗಿ ಬೇರೆ ಭಾಷೆಯ ಚಿತ್ರಗಳ ಪ್ರದರ್ಶನಗಳೇ ಇರುತ್ತಿರಲಿಲ್ಲ. ಕೆಂಪೇಗೌಡ, ಕಲ್ಪನಾ, ಮೇನಕ, ಅಲಂಕಾರ್, ಸ್ವಪ್ನ, ನರ್ತಕಿ, ಸಂತೋಷ್, ಮೆಜಿಸ್ಟಿಕ್, ಸಾಗರ್, ಸ್ಟೇಟ್ಸ್ (ಈಗಿನ ಭೂಮಿಕ), ತ್ರಿವೇಣಿ, ಅಪರ್ಣ, ಕೈಲಾಶ್, ಕಪಾಲಿ, ಮೂವಿಲ್ಯಾಂಡ್, ತ್ರಿಭುವನ್, ಅಭಿನಯ್ ಹೀಗೆ 17 ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳೇ ಪ್ರದರ್ಶನ ಕಾಣುತ್ತಿದ್ದವು.
ನಂತರದ ದಿನಗಳಲ್ಲಿ ಕೆಂಪೇಗೌಡ, ಕಲ್ಪನಾ, ಅಲಂಕಾರ್, ಮೆಜಿಸ್ಟಿಕ್ ಚಿತ್ರಗಳು ನೆಲಸಮಗೊಂಡುವು. ಹಾಗಾಗಿ ಕೆ ಜಿ ರಸ್ತೆಯಲ್ಲಿ ಉಳಿದಿರುವ ಒಟ್ಟು 13 ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಾಣುತ್ತಿರುವ ಸಂಖ್ಯೆ ಕ್ರಮೇಣ ಇಳಿಯಲಾರಂಭಿಸಿತು. ಮೊದಲಿಗೆ ಪರಭಾಷೆ ಪ್ರದರ್ಶನ ಆರಂಭ ಮಾಡಿದ್ದು ಬಹುಷಃ ಮೂವಿಲ್ಯಾಂಡ್ ಚಿತ್ರಮಂದಿರ. ಖಾಯಂ ಆಗಿ ತೆಲುಗು ಚಿತ್ರ ಪ್ರದರ್ಶನಕ್ಕೆ ಈ ಚಿತ್ರರಂಗ ಮೀಸಲಾಗಿದೆ. ಅಪ್ಪಿತಪ್ಪಿ ಕನ್ನಡ ಚಿತ್ರಪ್ರದರ್ಶನ ಮಾಡಿದ ಉದಾಹಾರಣೆಗಳೇ ಇಲ್ಲ.
ನಂತರದ ಸರದಿ ಅಭಿನಯ್ ಚಿತ್ರಮಂದಿರ. ಎಲ್ಲೋ ಕೆಲವೊಮ್ಮೆ ಆಪರೂಪಕ್ಕೆ ಕನ್ನಡ ಪ್ರದರ್ಶನ ಕಾಣುತ್ತಿದ್ದ ಈ ಚಿತ್ರಮಂದಿರದಲ್ಲಿ ಈಗಂತೂ ಖಾಯಂ ಹಿಂದಿ ಚಿತ್ರಗಳದ್ದೇ ಕಾರುಬಾರು. ಮುಂದೆ ಕೈಲಾಶ್ ಮಿನಿ ಚಿತ್ರಮಂದಿರ, ಇಲ್ಲೂ ಹಿಂದಿ ಚಿತ್ರಗಳೇ, ಅಥವಾ ಎಲ್ಲೋ ಅಪರೂಪಕ್ಕೆ ತ್ರಿಭುವನ್ ಚಿತ್ರಮಂದಿರದಲ್ಲಿ ಕನ್ನಡ ಚಿತ್ರ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿರುವ ಮಧ್ಯೆ ಬೇರೆ ಭಾಷೆಯ ಚಿತ್ರಗಳಿಗೆ ಬಿಟ್ಟು ಕೊಡಬೇಕಾದ ಪರಿಸ್ಥಿತಿ ಬಂದಾಗ ಈ ಮಿನಿ ಚಿತ್ರಮಂದಿರದಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಂಡ ಕೆಲ ಅಪರೂಪದ ಉದಾಹರಣೆ ನೀಡಬಹುದು.
ಕೆಲವು ತಿಂಗಳಿನಿಂದ ಪರಭಾಷಾ ಚಿತ್ರಕ್ಕೆ ಮೀಸಲಾಗುತ್ತಿರುವ ಇನ್ನೊಂದು ಚಿತ್ರಮಂದಿರವೆಂದರೆ ಭೂಮಿಕಾ. ಸ್ಟೇಟ್ಸ್ ಚಿತ್ರಮಂದಿರವಿದ್ದಾಗ ದೇವರ ಚಿತ್ರಕ್ಕೆ ಅಥವಾ ಮಾಡರ್ನ್ ಶೈಲಿಯಲ್ಲಿ ಹೇಳಬಹುದಾದರೆ ನೀಲಿ ಚಿತ್ರಕ್ಕೆ ಮೀಸಲಾಗಿದ್ದ ಈ ಚಿತ್ರಮಂದಿರ ನಂತರ ನವೀಕರಣಗೊಂಡು ಭೂಮಿಕಾ ಎಂದು ಬದಲಾಯಿತು. ಹೈಪ್ ಇರುವ ತೆಲುಗು ಚಿತ್ರಗಳು ಇಲ್ಲಿ ಏಕಕಾದಲ್ಲಿ ಈಗ ಬಿಡುಗಡೆಗೊಳ್ಳುತ್ತಿದೆ. ಸದ್ಯ ಇಲ್ಲಿ ಮಹೇಶ್ ಬಾಬು ಅಭಿನಯದ ಬ್ಯುಸಿನೆಸ್ ಮ್ಯಾನ್ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ತ್ರಿಭುವನ್ ಚಿತ್ರಮಂದಿರವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಪರಭಾಷೆ ಪ್ರದರ್ಶನ ಗೊಳ್ಳುತ್ತಿರುವ ಚಿತ್ರಮಂದಿರ ಲೆಕ್ಕ ಐದು ಹಾಕಬಹುದು.
2011ರ ಬ್ಲಾಕ್ ಬಸ್ಟರ್ 'ಸಾರಥಿ' ಚಿತ್ರ ನರ್ತಕಿ ಚಿತ್ರಮಂದಿರದಿಂದ ಎತ್ತಂಗಡಿಯಾಗಿದೆ. ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆಗಳಿಂದಾಗಿ ಈ ಚಿತ್ರವನ್ನು ಮೇನಕಾ ಚಿತ್ರಮಂದಿರಕ್ಕೆ ವರ್ಗಾಯಿಸಲಾಗಿದೆ. ಅಲ್ಲಿ ಕೋ. ಕೋ ಚಿತ್ರ ಪ್ರದರ್ಶನವಾಗುತ್ತಿದೆ. ಸಾರಥಿ ಶತದಿನದ ನಂತರವೂ ಉತ್ತಮ ಗಳಿಕೆ ಕಾಣುತ್ತಿತ್ತು.
ಇದು ಹೀಗೆ ಮುಂದುವರಿದರೆ 'ಕನ್ನಡ ರಾಜ್ಯೋತ್ಸವದ' ದಿನದಂದು ಮಾತ್ರ ಮೆಜೆಸ್ಟಿಕ್ ನಲ್ಲಿ ಕನ್ನಡ ಚಿತ್ರ ಪ್ರದರ್ಶನ ಗೊಳ್ಳುವ ದಿನದೂರವಿಲ್ಲ.


Click it and Unblock the Notifications











