ಪೆಕರ ನಾನಲ್ಲಾ ಅಂದ 'ಲೂಸ್ ಮಾದ' ಯೋಗೇಶ್
ಕೇವಲ 16 ನೇ ವಯಸ್ಸಿಗೇ ಚಿತ್ರರಂಗಕ್ಕೆ ಬಂದವರು ಲೂಸ್ ಮಾದ ಅಲಿಯಾಸ್ ಯೋಗೇಶ್. ನಾಯಕನಾದ ಮೊದಲ ಸಿನಿಮಾ 'ನಂದ ಲವ್ಸ್ ನಂದಿತಾ' ಸಕ್ಸಸ್ ಆಗುವುದರೊಂದಿಗೆ ಸ್ಯಾಂಡಲ್ ವುಡ್ ನಲ್ಲಿ 'ನಾಯಕ'ನಾಗಿ ಮೆರೆಯಲು ಕಾಲ ಕೂಡಿ ಬಂತು. ಸ್ಟಾರ್ ಲೆವೆಲ್ ನಲ್ಲಿದ್ದರೂ ಲೂಸ್ ಮಾದನಿಗೆ ಯಾವ 'ಇಮೇಜ್' ಹಂಗೂ ಇರಲಿಲ್ಲ. ಆದರೀಗ ಕಾಲ ಬದಲಾಗಿದೆ. ಲೂಸ್ ಮಾದನನಿಗೆ 'ಬಿಲ್ಡ್ ಅಪ್' ಬಿಲ್ಡ್ ಆಗಿದೆ.
ಇದಕ್ಕೆ ಸಾಕ್ಷಿ, 'ಪೆಕರ' ಅನ್ನೋ ತನ್ನ ಚಿತ್ರದ ಹೆಸರಿಗೆ ಯೋಗಿ ವಿರೋಧ ವ್ಯಕ್ತಪಡಿಸಿರುವುದು. ಈ ಶೀರ್ಷಿಕೆ ಇಟ್ಟು ಚಿತ್ರ ಮಾಡಲು ಹೊರಟಿದ್ದರು ನಾಗೇಂದ್ರ ಅರಸ್. ದೀಪಾವಳಿಯ ವೇಳೆಯಲ್ಲಿ ಇದರ ಬಗ್ಗೆ ಮಾಹಿತಿ ನೀಡಿ, ಪತ್ರಿಕೆಗಳಲ್ಲಿ ಜಾಹೀರಾತನ್ನೂ ಪ್ರಕಟಿಸಿದ್ದರು. ಅಮೂಲ್ಯಾ ಯೋಗಿಗೆ ನಾಯಕಿಯಾಗುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದಿದ್ದರು. ಯೋಗಿಯ ಇಮೇಜ್‌ಗೆ ತಕ್ಕ ಹೆಸರು ಮಾತ್ರ ಪಾತ್ರ ಎಂಬ ಅಭಿಪ್ರಾಯ ಎಲ್ಲಾ ಕಡೆ ವ್ಯಕ್ತವಾಗಿತ್ತು.
ಆದರೆ ಈಗ ಎಲ್ಲವೂ ಉಲ್ಟಾ-ಪಲ್ಟಾ ಆಗಿದೆ. 'ಪೆಕರ' ಪ್ರಾಜೆಕ್ಟ್ ನಿಂತು ಹೋಗಿದೆ. ಕಾರಣ ಅದೇ ಲೂಸ್ ಮಾದ. ಚಿತ್ರದ ಶೀರ್ಷಿಕೆ ಸರಿಯಿಲ್ಲ ಅನ್ನೋ ಕಾರಣಕ್ಕೆ ಚಿತ್ರದಿಂದ ಹೊರ ನಡೆದಿದ್ದಾರೆ. ತನ್ನನ್ನು ಸಂಪರ್ಕಿಸದೆ ಜಾಹೀರಾತು ನೀಡಲಾಗಿದೆ ಎಂದು ಹೇಳಿರುವ ಯೋಗಿ, ನಿರ್ದೇಶಕ ಅರಸ್ ಗೆ ಮಾತಿಗೇ ಸಿಗುತ್ತಿಲ್ಲ, ಕರೆಯನ್ನು ಸ್ವೀಕರಿಸುತ್ತಲೇ ಇಲ್ಲ. ಮತ್ತೆ ಮತ್ತೆ ಕರೆ ಮಾಡಿದರೂ, ನೋ ರಿಪ್ಲಯ್. ಈಗ ಪೆಕರ ಯಾರು ಎಂಬ ಪ್ರಶ್ನೆ ಗಾಂಧಿನಗರ ಗಲ್ಲಿ ಸುತ್ತುತ್ತಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











