ಚಿತ್ರ ನಿರ್ಮಾಣಕ್ಕೆ ಮುಖೇಶ್ ಅಂಬಾನಿ ದಾಂಗುಡಿ
ಬಾಲಿವುಡ್ ನ ಯಶಸ್ವಿ ಚಿತ್ರ ನಿರ್ಮಾಪಕ ಯಶ್ ಚೋಪ್ರ ಚಿತ್ರಗಳೆಂದರೆ ರಿಲಯನ್ಸ್ ಇಂಡಸ್ಟ್ರೀಸ್ ನ ಒಡೆಯ ಮುಖೇಶ್ ಅಂಬಾನಿಗೆ ಎಲ್ಲಿಲ್ಲದ ಅಕ್ಕರೆ. ಅವರ ಚಿತ್ರಗಳನ್ನು ನೋಡುತ್ತಾ ಬೆಳೆದವರು ಮುಖೇಶ್. ಈಗ ಅವರೊಂದಿಗೆ ಕೈಜೋಡಿಸಿ ಚಿತ್ರವೊಂದನ್ನು ನಿರ್ಮಿಸುವ ಸಾಹಸಕ್ಕೆ ಮುಖೇಶ್ ಮುಂದಾಗಿದ್ದಾರೆ. ಈ ಮೂಲಕ ಅವರು ಚಿತ್ರ ನಿರ್ಮಾಪಕನಾಗಿ ಬಾಲಿವುಡ್ ಗೆ ಅಡಿಯಿಡುವ ದಿನಗಳು ದೂರವಿಲ್ಲ.
"ಬಾಲಿವುಡ್ ಚಿತ್ರಗಳನ್ನು ವೀಕ್ಷಿಸುವುದೆಂದರೆ ನನಗೆ ತುಂಬ ಇಷ್ಟ. ಹಾಗೆಯೇ ಯಶ್ ಚೋಪ್ರಾ ನನ್ನ ಮೆಚ್ಚಿನ ನಿರ್ಮಾಪಕ. ಅವರ ಕೈಯಲ್ಲಿ ಚಿತ್ರಗಳು ಚಿನ್ನದ ಸ್ಪರ್ಶ ಪಡೆಯುತ್ತವೆ ಎಂಬುದು ನನ್ನ ನಂಬಿಕೆ" ಎಂದಿದ್ದಾರೆ ಮುಖೇಶ್. ಮೂಲಗಳ ಪ್ರಕಾರ ಇಬರಿಬ್ಬರು ಮಾರ್ಚ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದರು. ಆಗಲೆ ಯಶ್ ಚೋಪ್ರಾ ಜೊತೆ ಚಿತ್ರವೊಂದನ್ನು ನಿರ್ಮಿಸುವ ಸಂಬಂಧ ಮಾತುಕತೆ ನಡೆದಿತ್ತು.
ಕೇಲವ ಚಿತ್ರವೊಂದನ್ನು ನಿರ್ಮಿಸುವುದಷ್ಟೆ ಅಲ್ಲ ಯಶ್ ಚೋಪ್ರ ಜೊತೆ ಟಿವಿ ಧಾರಾವಾಹಿಗಳನ್ನು ನಿರ್ಮಿಸುವ ಬಗ್ಗೆ ಮುಖೇಶ್ ಮುಂದಡಿಯಿಟ್ಟಿದ್ದಾರೆ. ಮುಖೇಶ್ ಒಡೆತನದ ಮಾಲ್ ಗಳಲ್ಲಿ ಮಲ್ಟಿಫೆಕ್ಸ್ ಗಳನ್ನು ನಿರ್ಮಿಸುವ ಬಗ್ಗೆಯೂ ಚಿಂತಿಸಲಾಗಿದೆ. ಒಟ್ಟಿನಲ್ಲಿ ಮನರಂಜನಾ ಕ್ಷೇತ್ರಕ್ಕೆ ಮುಖೇಶ್ ಅಂಬೆಗಾಲಿಡಲು ವೇದಿಕೆ ಸಜ್ಜಾಗಿದೆ.
ಯಶ್ ಚೋಪ್ರ ಜೊತೆಗಿನ ಜಂಟಿ ನಿರ್ಮಾಣಕ್ಕೆ ಮುಖೇಶ್ ರ.200 ಕೋಟಿ ಬಂಡವಾಳ ಹೂಡಲಿದ್ದಾರೆ. ಸದ್ಯಕ್ಕೆ ಮಾತುಕತೆ ನಡೆಯುತ್ತಿದ್ದು ಎಲ್ಲವೂ ಒಂದು ಹಂತಕ್ಕೆ ಬಂದ ನಂತರವಷ್ಟೆ ಪೂರ್ಣ ವಿವರಗಳು ಲಭ್ಯವಾಗಲಿವೆ. ಅನಿಲ್ ಅಂಬಾನಿ ಈಗಾಗಲೆ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಈಗ ಮುಖೇಶ್ ಅಡಿಯಿಡುವ ಮೂಲಕ ಅಣ್ಣ ತಮ್ಮಂದಿರ ನಡುವೆ ಮನರಂಜನಾ ಕ್ಷೇತ್ರದಲ್ಲೂ ಸ್ಪರ್ಧೆ ನಡೆಯಲಿದೆ ಎಂದು ಚಿತ್ರೋದ್ಯಮ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











