ಪೋಲೀಸಾಗಿ ಶಿವಣ್ಣ, ಲಾಯರಾಗಿ ಪದ್ಮಪ್ರಿಯಾ
ಅಗ್ನಿ ಶ್ರೀಧರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ತಮಸ್ಸು' ಚಿತ್ರದಲ್ಲಿನ ಪದ್ಮಪ್ರಿಯಾ ಪಾತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಶೀಘ್ರದಲ್ಲೇ ತಮ್ಮ ಪಾತ್ರಕ್ಕೆ ಪದ್ಮಪ್ರಿಯಾ ಡಬ್ಬಿಂಗ್ ಹೇಳಲಿದ್ದಾರೆ. ಈ ಬಗ್ಗೆ ಪದ್ಮಪ್ರಿಯಾ ಪ್ರತಿಕ್ರಿಯಿಸುತ್ತಾ, ನನ್ನ ಪಾಲಿನ ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ನಾನೂ ಒಂದು ಭಾಗವಾಗಿರುವುದಕ್ಕೆ ತುಂಬ ಸಂತೋಷವಾಗುತ್ತಿದೆ ಎಂದಿದ್ದಾರೆ.
'ತಮಸ್ಸಿ'ನಲ್ಲಿ ಪದ್ಮಪ್ರಿಯಾ ಅವರು ನ್ಯಾಯವಾದಿಯಾಗಿ ಕಾಣಿಸಲಿದ್ದಾರೆ. ಕಾನೂನನ್ನು ಗೌರವಿಸುವ ಅಹಿಂಸೆಯನ್ನು ಬೆಂಬಲಿಸುವ ಪಾತ್ರ ಅವರದು. ಇಬ್ಬರು ವ್ಯಕ್ತಿಗಳ ನಡುವಿನ ಭಿನ್ನ ಸ್ವಭಾವ, ಸಂಘರ್ಷ ತಕಾಲಾಟಗಳ ನಡುವೆ ಕತೆ ಸಾಗುತ್ತದೆ. ಪದ್ಮಪ್ರಿಯಾ ನ್ಯಾಯವಾದಿಯಾದರೆ ಚಿತ್ರದ ನಾಯಕ ನಟ ಶಿವರಾಜ್ ಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್.
ಅಗ್ನಿ ಶ್ರೀಧರ್ ಚಿತ್ರ ಎಂದರೆ ಮುಖ್ಯವಾಗಿ ಗಮನಸೆಳೆಯುವುದು ಸಂಭಾಷಣೆ. ಹಾಗಾಗಿ ಈ ಚಿತ್ರದಲ್ಲೂ ಪ್ರೇಕ್ಷಕರ ಪಂಚಿಂಗ್ ಡೈಲಾಗ್ ಗಳನ್ನು ನಿರೀಕ್ಷಿಸಬಹುದು. ಸದ್ಯಕ್ಕೆ ಪದ್ಮಪ್ರಿಯಾ ತಮಿಳು, ತೆಲುಗಿನ ತಲಾ ಒಂದೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಬಾಲಿವುಡ್ ನಲ್ಲೂ ಮಗ್ನರಾಗಿದ್ದಾರೆ.


Click it and Unblock the Notifications











