ತೆರೆಯ ಮೇಲೆ ಪುಟ್ಟಕ್ಕನ ಹೈವೇ ಬವಣೆ ನೋಡ ಬನ್ನಿ
ಡ್ಯುಯೆಟ್ ಮೂವೀಸ್ ಮತ್ತು ಮೀಡಿಯಾಹೌಸ್ ಲಾಂಛನದಲ್ಲಿ ಪ್ರಕಾಶ್ ರೈ ಹಾಗೂ ಶೈಲಜಾನಾಗ್ ನಿರ್ಮಿಸಿರುವ 'ಪುಟ್ಟಕ್ಕನ ಹೈವೇ' ಚಿತ್ರ ಶುಕ್ರವಾರ (ಮೇ.20)ಬಿಡುಗಡೆಯಾಗುತ್ತಿದೆ. ಶ್ರುತಿ ಪುಟ್ಟಕ್ಕನ ಪಾತ್ರದಲ್ಲಿ ಅಭಿನಸಿದ್ದಾರೆ. ಪ್ರಕಾಶ್ ರೈ, ನೀನಾಸಂ ಅಶ್ವಥ್, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್, ಸತೀಶ್ ಕ್ವಾಟ್ಳೆ, ವೀಣಾಸುಂದರ್, ಅಚ್ಯುತಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ನಾಗತಿಹಳ್ಳಿ ಚಂದ್ರಶೇಖರ್ ಅವರ 'ಪುಟ್ಟಕ್ಕನ ಮೆಡಿಕಲ್ ಕಾಲೇಜ್' ಕಥೆಯ ಸ್ಪೂರ್ತಿಯಿಂದ ಈ ಚಿತ್ರ ನಿರ್ಮಾಣವಾಗಿದೆ. ಬಿ.ಸುರೇಶ್ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಹಂಸಲೇಖ ಸಂಗೀತ ನೀಡಿದ್ದಾರೆ. ಎಚ್.ಎಂ.ರಾಮಚಂದ್ರ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋ.ನಿ.ಹರ್ಷರ ಸಂಕಲನವಿದೆ.
ಹೆದ್ದಾರಿಯ ಅಗತ್ಯ ಎಷ್ಟಿದೆಯೋ ಅದರಿಂದ ನೆಲ ಕಳಕೊಂಡವರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ. ಸರ್ಕಾರ ನೀಡುವ ಪರಿಹಾರಗಳು ಫಲಾನುಭವಿಗಳಿಗೆ ದೊರೆಯುವುದಕ್ಕಿಂತ ಮಧ್ಯವರ್ತಿಗಳಿಗೆ ತಲುಪುವುದೇ ಹೆಚ್ಚು. ಹೀಗೆ ಹೆದ್ದಾರಿಗಾಗಿ ನೆಲ ಕಳಕೊಳ್ಳುವ ಪುಟ್ಟಕ್ಕ, ತನ್ನ ನೆಲ ಮತ್ತು ಅದೇ ನೆಲದಲ್ಲಿ ಚಿರನಿದ್ರೆಯಲ್ಲಿರುವ ತನ್ನ ಗಂಡನ ಗೂಡನ್ನು ಉಳಿಸಿಕೊಳ್ಳಲು ಮಾಡುವ ಹೋರಾಟ ಈ ಚಿತ್ರದ ಕತೆ. (ದಟ್ಸ್‌ಕನ್ನಡ ವಾರ್ತೆ)


Click it and Unblock the Notifications











