ದುಂಬಿ ಆದರ್ಶ - ತಂಗಿ ರಾಧಿಕಾ ನಡುವೆ ಲವ್ವು
ದುಂಬಿ ಆದರ್ಶನಿಗೂ 'ತವರಿಗೆ ಬಾ ತಂಗಿ"ಯ ಆದರ್ಶ ತಂಗಿ ರಾಧಿಕಾಗೂ ಪ್ರೇಮಾಂಕುರವಾಗಿದೆಯಾ?
ಹಾಗಂತ ರಾಧಿಕಾ ಎದುರು ನಿಂತು ಕೇಳಿದರೆ ಆಕೆಯ ಕೆನ್ನೆ ಕೆಂಪಾಗುತ್ತದೆ. ಸಕಲ ಕಲಾವಲ್ಲಭ ಆದರ್ಶನನ್ನು ಕೇಳಿದರೆ, ಆತನ ಮುಖದ ತುಂಬಾ ಲವ್ ಮಾರ್ಕು ಇಣುಕುತ್ತದೆ. ಗಾಂಧಿನಗರಕ್ಕಂತೂ ಈ ಪ್ರಣಯ ಪ್ರಸಂಗ ಜೀರ್ಣವಾಗುತ್ತಿಲ್ಲ.
ದುಂಬಿ ಸಿನಿಮಾ ತೆರೆಕಂಡ ಕೆಲವೇ ದಿನದಲ್ಲಿ ಆದರ್ಶನ ಹುಟ್ಟುಹಬ್ಬವಿತ್ತು . ಪ್ರಾಯಶಃ ಆದರ್ಶ ಇಂಥ ಜನುಮ ದಿನವನ್ನು ಈ ಹಿಂದೆ ಅನುಭವಿಸಿರಲಿಕ್ಕಿಲ್ಲ . ಆದರ್ಶನಿಗೆ ಖುದ್ದು ರಾಧಿಕ ಪತ್ರಿಕೆಗಳಲ್ಲಿ ಶುಭ ಕಾಮನೆಗಳನ್ನು ಪ್ರಕಟಿಸಿದ್ದರು. ಅದೇ ವೇಳೆಗೆ ಚಿತ್ರ ವಿಮರ್ಶಕರು ಆದರ್ಶನ 'ದುಂಬಿ" ಸಂಭಾಷಣೆಯನ್ನು ಹಾಡಿ ಹೊಗಳಿದ್ದರು. ದೊಡ್ಡಾತಿದೊಡ್ಡ ನಟರಿಗೇ ಈ ಪರಿಯ ಶುಭಾಶಯ ಕೋರದ ರಾಧಿಕಾ, ಆದರ್ಶನಿಗೆ ವಿಶೇಷ ಆದ್ಯತೆ ಕೊಟ್ಟದ್ದು ಯಾಕೆ ಅಂತ ಪ್ರಶ್ನೆ ಹುಟ್ಟಿದ್ದೇ ಆಗ. ಈ ಪ್ರಶ್ನೆ ಹುಟ್ಟಿದ ಕೆಲವೇ ದಿನಗಳಲ್ಲಿ ಗಾಂಧಿನಗರದ ಸಿನಿಮಾ ಅಡ್ಡೆಗಳಲ್ಲಿ ರಾಧಿಕ- ಆದರ್ಶನ ಮದುವೆಯ ಸುದ್ದಿ ದಟ್ಟೈಸಿದೆ.
ಹೀಗೆ ಆಯಿತು ಪ್ರೇಮಾಂಕುರ...
ಆದರ್ಶ 'ದಂಡ ಪಿಂಡ" ಅಲ್ಲ ಅಂತ ರಾಧಿಕಾಗೆ 'ತವರಿಗೆ ಬಾ ತಂಗಿ" ಶೂಟಿಂಗ್ ವೇಳೆಯಲ್ಲೇ ಗೊತ್ತಾಯಿತು. ಚಿತ್ರದಲ್ಲಿ ಶಿವಣ್ಣನ ತಂಗಿ ರಾಧಿಕ ಗಂಡನಾಗಿ ನಟಿಸಿರುವುದು ಇದೇ ಆದರ್ಶ. ಶೂಟಿಂಗ್ ವೇಳೆಯಲ್ಲಿ ಸಾಕಷ್ಟು ಹರಟೆ ಕೊಚ್ಚುತ್ತಿದ್ದ ರಾಧಿಕ- ಆದರ್ಶ ದಿನೇದಿನೇ ಹತ್ತಿರಾಗಿದ್ದಾರೆ. ಪರಿಣಾಮ ಇಬ್ಬರ ನಡುವೆ ಸ್ನೇಹ ಬಲವಾಗಿದೆ. ಇದೇ ಸ್ನೇಹ ಪ್ರೇಮಕ್ಕೆ ತಿರುಗಿದೆ ಅನ್ನುವುದು ಈಗ ಇಣುಕುತ್ತಿರುವ ಅನುಮಾನ.
'ತಂಗಿ"ಯ ಗಲ್ಲಾಪೆಟ್ಟಿಗೆ ಈಗ ಸಾಕಷ್ಟು ತುಂಬಿರುವುದರಿಂದ ಹಾಗೂ ತನ್ನ ದುಂಬಿಗೆ ಶಹಭಾಸ್ ಹೇಳಿ ಅನೇಕರು ಪ್ರಶಂಶಿಸಿರುವುದರಿಂದ ಆದರ್ಶನ ತಲೆ ಗಿರಗಿರನೆ ತಿರುಗುತ್ತಿದೆ. 'ತವರಿಗೆ ಬಾ ತಂಗಿ"ಯಲ್ಲಿ ತಾನು ಅದ್ಭುತವಾಗಿ ನಟಿಸಿದ್ದರೂ, ಕ್ರೆಡಿಟ್ಟೆಲ್ಲಾ ಶಿವಣ್ಣನಿಗೆ ಹೋಗುತ್ತಿದೆ. ಹಾಗೆ ನೋಡಿದರೆ ತಾನೇ ಚಿತ್ರದ ಹೀರೋ ಅಂತ ಹೇಳಿಕೊಳ್ಳುತ್ತಿರುವ ಆದರ್ಶ ಸುದ್ದಿಯಲ್ಲಿರಲು ಏನು ಮಾಡಬೇಕೋ ಎಲ್ಲವನ್ನೂ ಇಂಚಿಂಚೂ ಮಾಡುತ್ತಿದ್ದಾರೆ.
ನಮೂನೆಗೆ ನೋಡಿ-
ದುಂಬಿ ಚಿತ್ರಕ್ಕೆ ಪ್ರೇಕ್ಷಕರು ಒಲಿಯದಿದ್ದರೂ ಸಿನಿಮಾ ಮಂದಿಯಿಂದ ಪ್ರಶಂಸೆಯ ಮಹಾಪೂರ ಹರಿದದ್ದೇ ತಡ ಚಿತ್ರದ ಮುಖ್ಯ ನಿರ್ಮಾಪಕ ತಮಗೆ ಒಂದೂವರೆ ಲಕ್ಷ ರುಪಾಯಿಗೆ ಉಂಡೆನಾಮ ತಿಕ್ಕಿದರು ಅಂತ ಹೇಳಿ ಆದರ್ಶ ದೂರುತ್ತಿದ್ದಾರೆ. ವಾಸ್ತವವಾಗಿ ಈ ಚಿತ್ರದ ನಿರ್ಮಾಪಕ ತಾವೇ ಅನ್ನೋದು ವಾಲ್‌ಪೋಸ್ಟರ್‌ಗಳಲ್ಲೇ ರಾರಾಜಿಸುತ್ತಿದ್ದರೂ ಆದರ್ಶ ಆಗುತ್ತಿರುವ ನಷ್ಟವನ್ನು ಭರಿಸಿಕೊಳ್ಳಲು ಮಾಡುತ್ತಿರುವ ಕುತಂತ್ರ ಇದು ಅನ್ನೋದು ಸಹ-ನಿರ್ಮಾಪಕರ ಹೇಳಿಕೆ.
ಈಗಾಗಲೇ ಒಮ್ಮೆ ಮದುವೆಯಾಗಿ, ಆ ಗಂಡ ಸತ್ತರೂ ಕಮಕ್ ಕಿಮಕ್ ಅನ್ನದ ರಾಧಿಕಾ ತನ್ನ ಚೊಚ್ಚಲ ಚಿತ್ರ ಬಿಡುಗಡೆಯಾಗುವ ಮುಂಚಿನಿಂದಲೂ ಸೆನ್ಸೇಷನಲ್ ಹುಡುಗಿ. ಸತ್ಯ ಹಾಗೂ ಗಾಸಿಪ್ಪು- ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತಾ ಪೆದ್ದು ನಗೆ ನಗುವ ಮಂಗಳೂರು ಬಾಲೆ. ಸದ್ಯಕ್ಕೆ ಕನ್ನಡ ಸಿನಿಮಾ ಉದ್ದಿಮೆಯಲ್ಲಿ ಮುಂಚೂಣಿಯಲ್ಲಿರುವ ಕೆಲವೇ ನಾಯಕಿಯರ ಪೈಕಿ ಒಬ್ಬಳು ಅನ್ನುವುದೂ ನಿಜ.
ತನ್ನನ್ನು ತಾನೇ ಜಗಜ್ಜಾಣ ಎಂದು ಕರೆದುಕೊಳ್ಳುವ ಆದರ್ಶ ತನಗೆ ಜೋಡಿಯಾದರೆ ಕೆರಿಯರ್ರು ಇನ್ನೂ ಜೋರಾಗಬಹುದು ಅನ್ನುವುದು ರಾಧಿಕಾ ನಂಬುಗೆಯಂತೆ. ಮೊದಲು ರಾಧಿಕಾಳನ್ನು ಹಾಕಿಕೊಂಡು ಒಂದು ಚಿತ್ರ ತೆಗೆದು, ಆಮೇಲೆ ಮದುವೆಯಾಗೋದು ಆದರ್ಶನ ಬಯಕೆಯಂತೆ. ಅಲ್ಲಿಯವರೆಗೆ ಮದುವೆ ಸುದ್ದಿ ತಣ್ಣಗೇ ಇರಲಿದೆಯಂತೆ.
ಅಂದಹಾಗೆ, ಆದರ್ಶನ ಸಂಭಾವನೆ ಸದ್ಯಕ್ಕೆ 50 ಸಾವಿರ ರುಪಾಯಿ. ರಾಧಿಕಾ ಕಾಲ್‌ಷೀಟ್‌ಗೆ 4-5 ಲಕ್ಷ ರುಪಾಯಿ. ರಾಧಿಕಾ ರೇಟನ್ನು ನೋಡಿಯೇ ಆದರ್ಶ ಗಾಳ ಹಾಕಿದ್ದಾನೆ ಅನ್ನೋದು ಕುಹಕದ ಮಾತೋ ಅಲ್ಲವೋ ಅನ್ನೋದು ಗೊತ್ತಾಗೋಕೆ ಇನ್ನೂ ಕೆಲವು ತಿಂಗಳು ಕಾಯಬೇಕು !


Click it and Unblock the Notifications











