»   » ಕನ್ನಡ ಚಿತ್ರ ನಿರ್ಮಿಸಬೇಕಾ? ‘ವೈದೀಪ್ಸ್‌ ಐಎನ್‌ಸಿ.’ ಸಂಪರ್ಕಿಸಿ

ಕನ್ನಡ ಚಿತ್ರ ನಿರ್ಮಿಸಬೇಕಾ? ‘ವೈದೀಪ್ಸ್‌ ಐಎನ್‌ಸಿ.’ ಸಂಪರ್ಕಿಸಿ

Subscribe to Filmibeat Kannada
  • ಸಿನಿಡೆಸ್ಕ್‌, ದಟ್ಸ್‌ಕನ್ನಡ
ನಾಗತಿಹಳ್ಳಿಗೆ ಹೋಗಿಬಂದಷ್ಟು ಸಲೀಸಾಗಿ ಅಮೆರಿಕಾಕ್ಕೆ ಹೋಗಿಬರುವ ನಾಗತಿಹಳ್ಳಿ ಚಂದ್ರಶೇಖರ್‌ ಅಮೆರಿಕದ ತವಕ ತಲ್ಲಣಗಳನ್ನು ಕನ್ನಡ ಚಿತ್ರದಲ್ಲಿ ಮೂಡಿಸಿದ ಮೊದಲಿಗರು. ನಾಗತಿಹಳ್ಳಿಯವರ ಅಮೆರಿಕ ನಂಟಿನಿಂದ ಕನ್ನಡ ಚಿತ್ರರಂಗಕ್ಕೆ ಮತ್ತು ಅಮೆರಿಕನ್ನಡಿಗರಿಗೆ ಯಾವ ರೀತಿಯ ಲಾಭವಾಯಿತೆನ್ನುವುದು ಬೇರೆ ವಿಷಯ. ಒಂದಂತೂ ನಿಜ, ನಾಗತಿಹಳ್ಳಿ ಅಮೆರಿಕನ್ನಡಿಗರಿಗೆ ಗಾಂಧಿನಗರದ ದಾರಿ ತೋರಿಸಿದರು. ಮನೋಮೂರ್ತಿಯಿಂದ ಹಿಡಿದು ಮೊನ್ನೆಮೊನ್ನೆಯ ಸಾಧನಾರವರೆಗಿನ ಅಮೆರಿಕನ್ನಡಿಗರಿಗೆಲ್ಲ ನಾಗತಿಹಳ್ಳಿ ತೋರಿದ ದಾರಿಯಲ್ಲೇ ಸಾಗಿಬಂದವರು.

ಹಾಡುಗಾರ ರಾಮ್‌ಪ್ರಸಾದ್‌ ಗಾಂಧಿನಗರಕ್ಕೆ ನಾಗತಿಹಳ್ಳಿ ಪರಿಚಯಿಸಿದ ಮತ್ತೊಂದು ಪ್ರತಿಭೆ. ರಾಮ್‌ಪ್ರಸಾದ್‌ ಎಂದಕೂಡಲೆ ತಕ್ಷಣ ನೆನಪಿಗೆ ಬರುವುದು ‘ನನ್ನ ಪ್ರೀತಿಯ ಹುಡುಗಿ’ ಚಿತ್ರದ ಮೂಡಲ್‌ ಕುಣಿಗಲ್‌ ಕೆರೆ ಹಾಡು. ಹಾಡು ಹಳೆಯದಾಯಿತು, ಹೊಸದೇನು ರಾಮ್‌ಪ್ರಸಾದ್‌ ಎಂದರೆ ಅವರು ಕನಸುಗಳ ಗುಚ್ಛವನ್ನೇ ಮುಂದಿಡುತ್ತಾರೆ. ಆ ಮಟ್ಟಿಗೆ ರಾಮ್‌ಪ್ರಸಾದ್‌ ಕನ್ನಡ ಚಿತ್ರರಂಗದ ಕನಸುಗಾರ, ನಂ.2. ಸದ್ಯಕ್ಕೆ ನಾವು ಹೇಳಹೊರಟಿರುವುದು ರಾಮ್‌ಪ್ರಸಾದ್‌ ಯೋಜನೆಗಳ ಕಥನವನ್ನು.

ಗೆಳೆಯರೊಂದಿಗೆ ಸೇರಿಕೊಂಡು, ಕೋಡ್ಲು ರಾಮಕೃಷ್ಣ ನಿದೇಶನದಲ್ಲಿ ‘ಮಿಸ್‌ ಕ್ಯಾಲಿಫೋರ್ನಿಯ’ ಎನ್ನುವ ಚಿತ್ರದ ನಿರ್ಮಾಣದಲ್ಲಿ ರಾಮ್‌ ತೊಡಗಿರುವುದು ದಟ್ಸ್‌ಕನ್ನಡ ಓದುಗರಿಗೆ ಗೊತ್ತು . ಈ ಚಿತ್ರಕ್ಕೆ ನಾಯಕಿಯನ್ನು ಹುಡುಕುವ ಪ್ರಕಟಣೆ ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿತ್ತು . ಆಮೇಲೆ?

ಮಿಸ್‌ ಕ್ಯಾಲಿಫೋರ್ನಿಯಾ ಶೂಟಿಂಗ್‌ ಬಹುತೇಕ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ತೊಡಗಿಕೊಂಡಿರುವಾಗಲೇ ರಾಮ್‌ ಮನಸ್ಸಿನಲ್ಲಿ ಇನ್ನಷ್ಟು ಯೋಜನೆಗಳು ಹರಿದಾಡುತ್ತಿವೆ. ಅವುಗಳಲ್ಲಿ ಮುಖ್ಯವಾದುದು ಕನ್ನಡ ಚಿತ್ರಗಳಲ್ಲಿ ಅಮೆರಿಕನ್ನಡಿಗರು ಬಂಡವಾಳ ತೊಡಗಿಸಲು ಅವಕಾಶ ಮಾಡಿಕೊಡುವುದು.

ಅನೇಕ ಅಮೆರಿಕನ್ನಡಿಗರಿಗೆ ಕನ್ನಡ ಚಿತ್ರಗಳನ್ನು ನಿರ್ಮಿಸುವ ಆಸೆಯಿದೆ. ಆದರೆ ದಾರಿ ಗೊತ್ತಿಲ್ಲ . ಅಲ್ಲದೆ ತೊಡಗಿಸಿದ ಹಣ ಅಪವ್ಯಯವಾದರೆ? ಆದರೆ ಅಮೆರಿಕದ ಪೌರತ್ವವನ್ನು ಹೊಂದಿರುವ ಹಾಗೂ ಬೆಂಗಳೂರಿನಲ್ಲೂ ನೆಲೆ ಹೊಂದಿರುವ ವ್ಯಕ್ತಿಯಾಬ್ಬ ವ್ಯವಹಾರಗಳನ್ನು ನೇರವಾಗಿ ನೋಡಿಕೊಳ್ಳುವಂತಾದರೆ ಹಣ ಹೂಡುವುದು ಸಲೀಸು, ಅಲ್ಲವೇ? ಈ ಹಿನ್ನೆಲೆಯಲ್ಲಿ ರಾಮ್‌ಪ್ರಸಾದ್‌ ‘ವೈದೀಪ್ಸ್‌ ಐಎನ್‌ಸಿ.’ ಎನ್ನುವ ಸಂಸ್ಥೆ ಪ್ರಾರಂಭಿಸಿದ್ದಾರೆ. ರಾಮ್‌ ಮಕ್ಕಳಾದ ವೈಭವ ಹಾಗೂ ದೀಪಿಕಾ ಹೆಸರಿನಲ್ಲಿ ‘ವೈದೀಪ್ಸ್‌ ಐಎನ್‌ಸಿ.’ ರೂಪುಗೊಂಡಿದೆ. ಈ ಸಂಸ್ಥೆಯ ಉದ್ದೇಶ ಅಮೆರಿಕನ್ನಡಿಗರು ಹಾಗೂ ಕನ್ನಡ ಚಿತ್ರೋದ್ಯಮದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುವುದು.

‘ವೈದೀಪ್ಸ್‌ ಐಎನ್‌ಸಿ.’ ಅಮೆರಿಕಾದಲ್ಲಿ ನೋಂದಾಯಿತವಾಗಿರುವ ಸಂಸ್ಥೆ . ಹಾಗಾಗಿ ಹಣ ಹೂಡುವುದು ಹಾಗೂ ಇತರ ಲೆಕ್ಕಾಚಾರಗಳು ಸಂಪೂರ್ಣ ಪಾರದರ್ಶಕವಾಗಿರುತ್ತವೆ. ತೆರಿಗೆ ಹಾಗೂ ಇನ್ನಿತರ ವ್ಯವಹಾರಗಳೂ ಸುಲಭ. ಆಸಕ್ತ ಅನಿವಾಸಿ ಭಾರತೀಯರು ತಮ್ಮ ಹಣವನ್ನು ಈ ಸಂಸ್ಥೆಯ ಮೂಲಕ ಚಿತ್ರೋದ್ಯಮದಲ್ಲಿ ನೇರವಾಗಿ ತೊಡಗಿಸಬಹುದಾಗಿದೆ. ಚಿತ್ರಗಳನ್ನು ನಿರ್ಮಿಸಬಹುದಾಗಿದೆ.

‘ವೈದೀಪ್ಸ್‌ ಐಎನ್‌ಸಿ.’ಯ ಮೊದಲ ಯೋಜನೆಯಾಗಿ ಈಗಾಗಲೇ ಚಿತ್ರವೊಂದರ ನಕಾಶೆ ಸಿದ್ಧವಾಗಿದೆ. ಇಂದ್ರಜಿತ್‌ ಲಂಕೇಶ್‌ ನಿರ್ದೇಶಿಸಲಿರುವ ಈ ಚಿತ್ರಕ್ಕೆ ಕಾರ್‌ ಕಾರ್‌ ಖ್ಯಾತಿಯ ಮನೋಮೂರ್ತಿ ಸಂಗೀತ ನೀಡುವರು. ಚಿತ್ರದ ಬಗೆಗಿನ ಪೂರ್ಣ ವಿವರಗಳು ಸದ್ಯದಲ್ಲೇ ಹೊರಬೀಳಲಿವೆ.

ಅಂದಹಾಗೆ, ರಾಮ್‌ಪ್ರಸಾದ್‌-ಇಂದ್ರಜಿತ್‌ ಜೋಡಿಯ ಹೊಸ ಚಿತ್ರಕ್ಕೆ ಎನ್‌ಆರ್‌ಐ ನಾಯಕಿ ಬೇಕಾಗಿದ್ದಾಳೆ. 18-20 ವಯೋಮಾನದ ಯುವತಿಯರು ಅವಕಾಶಕ್ಕಾಗಿ ಸಂಪರ್ಕಿಸಬಹುದು. ಆಸಕ್ತರು ವಿವಿಧ ಭಂಗಿಗಳಲ್ಲಿನ ಭಾವಚಿತ್ರಗಳು, ಸ್ವವಿವರ, ತರಬೇತಿಯ ವಿವರಗಳನ್ನು ಕಳಹಿಸಬಹುದು. ಪೋಷಕರ ಅನುಮತಿ ಅಗತ್ಯ. ಚಿತ್ರಕ್ಕೆ ಆಯ್ಕೆಯಾಗುವ ನಾಯಕಿ ಚಿತ್ರೀಕರಣಕ್ಕಾಗಿ ಭಾರತಕ್ಕೆ 20 ದಿನಗಳ ಮಟ್ಟಿಗೆ ಬರಬೇಕಾಗುವುದು. ಏಪ್ರಿಲ್‌ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ರಾಮ್‌ಪ್ರಸಾದ್‌ರ ಸಂಪರ್ಕ ವಿಳಾಸ :
ಇಮೇಲ್‌- singer_ram@yahoo.com.
ದೂರವಾಣಿ- 08026614325. ಸೆಲ್‌-20122636.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada