»   » ಹೃದಯಗಳಲ್ಲಿ ಸದಾ ನೆಲೆಸಿಹ ಒಬ್ಬನೇ ಒಬ್ಬ ರಾಜಣ್ಣ ನಮಗೆ ಸಾಕು

ಹೃದಯಗಳಲ್ಲಿ ಸದಾ ನೆಲೆಸಿಹ ಒಬ್ಬನೇ ಒಬ್ಬ ರಾಜಣ್ಣ ನಮಗೆ ಸಾಕು

Subscribe to Filmibeat Kannada
  • ಮಲ್ಲಿ ಸಣ್ಣಪ್ಪನವರ್‌, ಕೊಲಂಬಿಯಾ
    sannams@hotmail.com
‘ಅಣ್ಣಾವ್ರು ಹೋಗಿಬಿಟ್ಟ್ರು...’ ಈ ಎರಡು ಶಬ್ಧಗಳು ವಿಶ್ವದ ಸಮಸ್ತ ಕನ್ನಡಿಗರ ಹೃದಯಗಳನ್ನು ಕೆಲ ನಿಮಿಷಗಳ ಕಾಲ ಸ್ತಬ್ಧವಾಗಿ ನಿಲ್ಲಿಸಿಬಿಟ್ಟವು, ಅಣ್ಣಾವ್ರು... ನಮ್ಮ ನಿಮ್ಮೆಲ್ಲರ ಹೆಮ್ಮೆಯ ರಾಜಣ್ಣ, ಒಡಹುಟ್ಟಿದ ಅಣ್ಣನಲ್ಲದಿದ್ದರೂ, ಅಣ್ಣಾವ್ರು ಅಂದ ತಕ್ಷಣ ಕನ್ನಡಿಗರ ಕಣ್ಣುಗಳ ಮುಂದೆ ಪ್ರತ್ಯಕ್ಷನಾಗುವ ಧ್ರುವತಾರೆ. ಕನ್ನಡನಾಡಿನಲ್ಲಿ 50 ವರ್ಷಗಳ ಸುವರ್ಣಯುಗದಲ್ಲಿ ಪ್ರಕಾಶಮಾನವಾಗಿ ಪ್ರಜ್ವಲಿಸಿದ ಕರ್ನಾಟಕ ರತ್ನ ಈಗ ನಮ್ಮನ್ನೆಲ್ಲಾ ಬಿಟ್ಟು ನಮಗೆಲ್ಲಾ ಎಟುಕದ ಸ್ವರ್ಗದ ಶಾಂತಿ ಸಾಗರದ ಆಳದ ತಳ ಸೇರಿದೆ. ನಮಗೆ ಅರಿವಿಲ್ಲದಂತೆ ನಮ್ಮ ದಿನ ನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿ ಹೋಗಿದ್ದ ರಾಜಣ್ಣನ ಅಂತಿಮ ಯಾತ್ರೆ ಕನ್ನಡಿಗರನ್ನೆಲ್ಲಾ ತಬ್ಬಲಿಗಳನ್ನಾಗಿ ಮಾಡಿದೆ.

ನಾನು ಚಿಕ್ಕವನಿದ್ದಾಗ ನನ್ನಮ್ಮ ನನಗೆ ಜೋಗುಳ ಹಾಡಿರಬಹುದು, ಅದು ನನಗೆ ನೆನಪಿಲ್ಲಾ, ನನ್ನ ಬಾಲ್ಯದ ಅತ್ಯಂತ ಹಳೆಯದಾದ ನೆನಪೆಂದರೆ ನಾನು ಇನ್ನೂ ಬೆಳಿಗ್ಗೆ ಹಾಸಿಗೆಯಲ್ಲಿ ಮಲಗಿರುತ್ತಿದ್ದಾಗ ಆಕಾಶವಾಣಿ ಧಾರವಾಡದಲ್ಲಿ ಬರುತ್ತಿದ್ದ ರಾಜಣ್ಣನ ‘ನಾನಿರುವುದೇ ನಿಮಗಾಗಿ....’ ಮಯೂರ ಚಿತ್ರದ ಹಾಡನ್ನು ಕೇಳುತ್ತಿದ್ದ ನೆನಪು. ಬುಧವಾರ ಬೆಳಿಗ್ಗೆ ಅಣ್ಣಾವ್ರು ಹೋದ ವಿಷಯ ತಿಳಿದ ತಕ್ಷಣ ನನಗೆ ಕೇಳಬೇಕೆನಿಸಿದ್ದು ಮತ್ತೆ ಅದೇ ಹಾಡು, ಈ ಬಾರಿ ಆ ಹಾಡು ಕೇಳುತ್ತಾ ಕೇಳುತ್ತಾ ನನಗರಿವಿಲ್ಲದೆ ನನ್ನೊಳಗಿನ ದುಃಖಭರಿತ ಕನ್ನಡಿಗನ ಕಣ್ಣೀರಿನ ಕಟ್ಟೆಯೊಡೆಯಿತು.

ಒಂದು ವೇಳೆ ದೇವರೇನಾದರು ನಿಮ್ಮ ಮುಂದೆ ಪ್ರತ್ಯಕ್ಷನಾಗಿ, ಕನ್ನಡಕ್ಕೆ ಇನ್ನೊಬ್ಬ ರಾಜಣ್ಣ ಬೇಕೆ? ಎಂದು ನಿಮಗೇನಾದರು ಕೇಳಿದರೆ, ‘ದಯವಿಟ್ಟು ಬೇಡ ನಮ್ಮ ಈ ಕನ್ನಡನಾಡಲ್ಲಿ ಬದುಕಿ ಬಾಳಿದ ಹಾಗೂ ಕನ್ನಡಿಗರ ಹೃದಯಗಳಲ್ಲಿ ಸದಾ ಅಮರನಾಗಿರುವ ಒಬ್ಬನೇ ಒಬ್ಬ ರಾಜಣ್ಣ ನಮಗೆ ಸಾಕು’ ಅಂದು ಬಿಡಿ, ಏಕೆಂದರೆ ಅವನು ಕೊಟ್ಟಾಗ ಆಗುವ ಹತ್ತು ಪಟ್ಟು ಖುಷಿಗಿಂತ, ಕಸಿದುಕೊಳ್ಳುವಾಗ ಆಗುವ ನೂರುಪಟ್ಟು ದುಃಖ ತಡೆದುಕೊಳ್ಳುವ ಶಕ್ತಿ ನಮ್ಮ ಕನ್ನಡಿಗರಿಗೆ ಉಳಿದಿಲ್ಲಾ.

ನಮ್ಮ ನಟಸಾರ್ವಭೌಮನನ್ನು ಸರಿಗಟ್ಟಿ ನಿಲ್ಲುವ ಇನ್ನೊಬ್ಬ ನಟ ಬರಬಹುದು, ನಮ್ಮ ಗಾನಗಂಧರ್ವನನ್ನು ಸರಿಗಟ್ಟಿ ನಿಲ್ಲುವ ಇನ್ನೊಬ್ಬ ಗಾಯಕ ಬರಬಹುದು, ನಮ್ಮ ಕನ್ನಡದ ಕಣ್ಮಣಿಯನ್ನು ಸರಿಗಟ್ಟಿ ನಿಲ್ಲುವ ಇನ್ನೊಬ್ಬ ಆಧ್ಯಾತ್ಮಿಕ ಯೋಗಿ ಬರಬಹುದು, ನಮ್ಮ ಕರ್ನಾಟಕ ರತ್ನವನ್ನು ಸರಿಗಟ್ಟಿ ನಿಲ್ಲುವ ಇನ್ನೊಬ್ಬ ಸರಳ ಸುಂದರ ಹೃದಯವಂತ ಬರಬಹುದು, ಆದರೆ ಇವೆಲ್ಲಾ ಗುಣಗಳನ್ನು ಒಟ್ಟಿಗೆ ಹೊಂದಿರುವ ಇನ್ನೊಬ್ಬ ಕನ್ನಡಿಗರ ಪ್ರೀತಿಯ ಅಣ್ಣ ಜನ್ಮವೆತ್ತಿ ಬರುವುದು ಸಾಧ್ಯ- ಅಸಾಧ್ಯಗಳಿಗೆ ನಿಲುಕದ ಮಾತು.

‘ಅಣ್ಣಾವ್ರು ಎಲ್ಲಿಗೂ ಹೋಗಿಲ್ಲಾ, ಕನ್ನಡಿಗರ ಹೃದಯದಲ್ಲಿ ಹಚ್ಚ ಹಸಿರಾಗಿ ಇದ್ದಾರೆ, ಎಂದೆಂದಿಗೂ ಹಾಗೆ ಇರುತ್ತಾರೆ, ನಮ್ಮ ಮನೆಯಲ್ಲಿರುವ ಡಿವಿಡಿ, ವಿಸಿಡಿ, ಕ್ಯಾಸೆಟ್‌ ಮತ್ತು ಟಿವಿಗಳಲ್ಲಿ ಅಣ್ಣಾವ್ರು ಇನ್ನೂ ಜೀವಂತವಾಗಿದ್ದಾರೆ’ ಎಂದು ನನ್ನ ಮನಸ್ಸಿಗೆ ಏಷ್ಟೇ ತಿಳಿಸಿ ಹೇಳಿದರೂ, ಕೇಳೋದಿಲ್ಲಾ ನೋಡಿ ಚಂಚಲ ಮನಸ್ಸು ಮತ್ತೆ ಮಮ್ಮಲ ಮರುಗುತ್ತಾ ಅನ್ನುತ್ತದೆ...‘ಛೇ! ಅಣ್ಣಾವ್ರು ಹೋಗಿಬಿಟ್ಟ್ರು...’.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada