»   » ಸೌಂದರ್ಯ ಮರೆಯಾಗಿ ಆಯಿತು ಮೂರು ವರ್ಷ!

ಸೌಂದರ್ಯ ಮರೆಯಾಗಿ ಆಯಿತು ಮೂರು ವರ್ಷ!

Subscribe to Filmibeat Kannada


ಮೊನ್ನೆಯಷ್ಟೇ ರಾಜ್‌ಕುಮಾರ್‌ರ ಮೊದಲ ಪುಣ್ಯತಿಥಿ. ಆ ಬೆನ್ನಲ್ಲಿಯೇ ಕನ್ನಡದ ಮನೆಮಗಳು ಸೌಂದರ್ಯಳ ಪುಣ್ಯತಿಥಿ. ಇಬ್ಬರಲ್ಲೂ ಇದ್ದ ಕಾಮನ್‌ ಗುಣವೆಂದರೇ; ನಿರ್ಮಲ ಕನ್ನಡ ಪ್ರೀತಿ!

  • ನಟೇಶ್‌
ರಾಜ್‌ ಜೊತೆ ಅಭಿನಯಿಸಬೇಕು ಎಂದು ಪದೇಪದೇ ಹೇಳುತ್ತಿದ್ದ ಸೌಂದರ್ಯಗೆ ಅವಕಾಶ ಕೂಡಿ ಬರಲಿಲ್ಲ. ಆ ಮಾತು ಬಿಡಿ. ನಮ್ಮ ಜನರಿಗೆ ಮರೆವು ಜಾಸ್ತಿ. ಹೀಗಾಗಿಯೇ ಪಂಚಭಾಷಾ ತಾರೆಯಾಗಿ ಮಿಂಚಿದ ಸೌಂದರ್ಯ , ಇಂದು ಯಾರಿಗೂ ನೆನಪಾಗುತ್ತಿಲ್ಲ!

ಒಂದರ್ಥದಲ್ಲಿ ಸೌಂದರ್ಯ ಮತ್ತು ಕನ್ನಡ ಚಿತ್ರಪ್ರೇಮಿಗಳ ಮಧ್ಯೆ ಅಂತಹ ಬಾಂಧವ್ಯ ಕುದುರಲೇ ಇಲ್ಲ. ಹೀಗಾಗಿ ನೆರೆರಾಜ್ಯದಲ್ಲಿ ಸೌಂದರ್ಯ, ಕೆಲಸ ಹುಡುಕುತ್ತಾ ಹೊರಟರು. ಆದರೂ ಕನ್ನಡ ಚಿತ್ರರಂಗದ ಬಗ್ಗೆ ಆಕೆಗೆ ಅಪಾರ ಅಕ್ಕರೆ.

ದುಡಿದ ದುಡ್ಡನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಬಚ್ಚಿಡುವ ನಾಯಕ ಅಥವಾ ನಾಯಕಿಯರ ಪರಂಪರೆ ಮುರಿದ ಸೌಂದರ್ಯ, ‘ದ್ವೀಪ’ದಂತಹ ಚಿತ್ರಕ್ಕೆ ನಾಯಕಿ ಮತ್ತು ನಿರ್ಮಾಪಕಿಯಾದರು. ಅವರ ಒಳತುಡಿತ ಬೇರೆಯೇ ಇತ್ತು. ಒಳ್ಳೆ ಚಿತ್ರಗಳ ನೀಡುವ ಕನಸು ಅವರ ಕಣ್ಣುಗಳಲ್ಲಿತ್ತು. ಆ ಮಧ್ಯೆಯೇ ಅವರು ಕಣ್‌ ಮುಚ್ಚಿದರು.

ಗ್ಲಾಮರ್‌ಗಿಂತಲೂ, ಸೌಂದರ್ಯರಲ್ಲಿ ಸಿನಿಮಾದ ಗ್ರಾಮರ್‌ ತುಂಬಿತುಳುಕುತ್ತಿತ್ತು. ಹೀಗಾಗಿ ಸೌಂದರ್ಯ ಅಂದರೆ ಅಭಿಮಾನಿಗಳಿಗೆ ವಿಶೇಷ ಅಕ್ಕರೆ. ವಿಶೇಷ ಗೌರವ. ವಿಶೇಷ ಭಾವ. ಸೌಂದರ್ಯ, ಪ್ರೇಕ್ಷಕರ ನಿದ್ದೆ ಕೆಡಿಸುವ ಕಾಮಿನಿಯಾಗಲಿಲ್ಲ.. ಗೆಳತಿಯಾದಳು.. ಅಮ್ಮನಾದಳು.. ತಂಗಿಯಾದಳು.. ಅಕ್ಕನಾದಳು.. ಇನ್ನು ಏನೇನೋ.. ದಟ್‌ ಈಸ್‌ ಸೌಂದರ್ಯ!

ಸೌಂದರ್ಯ ನಮ್ಮಿಂದ ದೂರಾವಾಗಿ ಮಂಗಳವಾರ(ಏ.17)ಕ್ಕೆ ಮೂರು ವರ್ಷ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡದಲ್ಲಿ ಮಿಂಚಿದ್ದ ಈ ಪಂಚಭಾಷಾ ತಾರೆಗಿದ್ದ ರಾಜಕೀಯದ ಹುಚ್ಚು, ಸಾವಿನ ಮನೆವರೆಗೆ ಕರೆದೊಯ್ದದ್ದು ನಿಜಕ್ಕೂ ನೋವಿನ ವಿಚಾರ.

ಬಿಜೆಪಿ ಕಾರ್ಯಕರ್ತೆಯಾಗಿದ್ದ ಸೌಂದರ್ಯ, ಹೈದರಾಬಾದ್‌ನ ವಿಧಾನಸಭಾ ಕ್ಷೇತ್ರವೊಂದಕ್ಕೆ ಚುನಾವಣಾ ಪ್ರಚಾರಕ್ಕೆ ಹೊರಟರು. ಅದು 2004ರ ಏ.17. ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟ ಖಾಸಗಿ ವಿಮಾನ, ಕೆಲವೇ ಕ್ಷಣಗಳಲ್ಲಿ ಕೆಳಗಿಳಿಯಿತು. ಬೆಂಕಿ ಚೆಂಡಿನಂತೆ ಸ್ಫೋಟಿಸಿತು. ನೋಡನೋಡುತ್ತಿದ್ದಂತೆಯೇ ಚೆಲುವಿನ ರಾಶಿ ಸೌಂದರ್ಯ, ಆಕೆಯ ಹೊಟ್ಟೆಯಾಳಗಿದ್ದ ಮಗು ಇಬ್ಬರೂ ಭಸ್ಮ. ಆಗವಳಿಗೆ 32ವರ್ಷ.

‘ಆಪ್ತಮಿತ್ರ’ ನೋಡಿದಾಗಲೆಲ್ಲ, ಸೌಂದರ್ಯ ಕಾಡುತ್ತಾರೆ. ರಾರಾ ಎಂದಂತೆ ನನಗಂತೂ ಭಾಸವಾಗುತ್ತದೆ. ನಿಮಗೆ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada