ಕಿಚ್ಚನ ‘ನಂ. 73 ಶಾಂತಿನಿವಾಸ’ದ ಹಾಡುಗಳು ಹೇಗಿವೆ?

ಪ್ರೀತಿಯ ಪರಿಣಾಮಗಳನ್ನು ವಿವರಿಸುವ 'ಪ್ರೀತಿಯೆಂದರೆ ಹೀಗೇನೆ. . . " ಹಾಡನ್ನು ರಾಜೇಶ್ ಹಾಡಿದ್ದಾರೆ. ಶಾಸ್ತ್ರೀಯ ಸಂಗೀತದ ಧಾಟಿಯಲ್ಲಿ ಸುಮಧುರವಾಗಿದೆ. 'ಥೈಯತ... ಥೈಯತ. . .." ಎಂಬ ಹಾಡನ್ನು ರಾಜೇಶ್ ಹಾಗೂ ಕಲ್ಯಾಣಿ ಹಾಡಿದ್ದಾರೆ. ಪ್ರೀತಿಸಿದವರ ಮನದಲ್ಲಿ ಸುಳಿಯುವ ಹಲವು ಭಾವನೆಗಳನ್ನು ವ್ಯಕ್ತಪಡಿಸುತ್ತಾ ಸಾಗುವ ಈ ಹಾಡು ಸುಮಧುರವಾಗಿದೆ.
ಹಿಂದಿ ಹಾಡಿನ ಟ್ಯೂನ್ ಹೋಲುವ 'ಆದದ್ದೆಲ್ಲಾ ಒಳ್ಳೆದಾಯ್ತು. . .. " ಹಾಡು ರಾಜೇಶ್, ಲ.ನಾ. ಶಾಸ್ತ್ರಿ, ಮಾಸ್ಟರ್ ಹಿರಣ್ಣಯ್ಯ, ನಂದಿತಾ, ಅರ್ಚನಾ ಉಡುಪ ಹಾಗೂ ಅರುಣ್ ಸಾಗರ್ ಅವರ ದನಿಯಲ್ಲಿ ಚೆನ್ನಾಗಿ ಮೂಡಿ ಬಂದಿದ್ದು, ಒಮ್ಮೆ ಕೇಳುವಂತಿದೆ.
'ಹೃದಯ .. ಹೃದಯ. ... "ಎಂಬ ಹಾಡನ್ನು ಶ್ರೀನಿವಾಸ್ ಹಾಡಿದ್ದಾರೆ. ಹಾಡಿನ ವೇಗಕ್ಕೊ ಏನೋ.. . ಉಳಿದವುಕ್ಕೆ ಹೋಲಿಸಿದರೆ ಸಾಧಾರಣವಾದ ಹಾಡು ಅನಿಸುತ್ತದೆ. 'ಪ್ರೀತಿಯೆಂದರೆ ಹೀಗೇನೆ . . " ಹಾಡು ಮತ್ತೆ ಸಂಗೀತ ನಿರ್ದೇಶಕ ಭಾರದ್ವಾಜ್ ಅವರ ದನಿಯಲ್ಲಿ ವಿಭಿನ್ನವಾಗಿ ಮೂಡಿಬಂದು, ಕೇಳುವಂತಿದೆ.
ಎಲ್ಲಾ ಸುಮಧುರ ಗೀತೆಗಳ ನಡುವೆ 'ತಿರುಗು ಭೂಮಿ . .. " ಹಾಡಿನ ರಿಮಿಕ್ಸ್ ಗೀತೆಯನ್ನು ಸೇರಿಸಲಾಗಿದೆ. ಅಬ್ಬರದ ದನಿಯಲ್ಲಿ ಸಂಗೀತ ಕೇಳುವವರಿಗೆ ಖಂಡಿತಾ ಇಷ್ಟ ಆಗುತ್ತದೆ. ಇನ್ನು 'ಬಂದ ನೋಡು ಹಾಡು. ... " ನಾಯಕ ಸುದೀಪ್ ಅವರನ್ನು ಪರಿಚಯಿಸುವ ಗೀತೆಯಾಗಿದ್ದು, ಭಾರದ್ವಾಜ್ ಹಾಡಿದ್ದಾರೆ.
ಈ ಅಲ್ಬಂನ ವಿಶೇಷ ಗೀತೆ 'ಒಂದು ಒಳ್ಳೆ ಕಥೆಯ ಹೇಳುವೆ . . .. " ಗೀತೆ ಶಿವರಾಜ್‌ಕುಮಾರ್ ಹಾಗೂ ಸುದೀಪ್ ಕಂಠದಿಂದ ಹೊಮ್ಮಿದೆ. ಮಧ್ಯೆ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರ ಸಂಭಾಷಣೆಯಾಂದಿಗೆ ಬೆರೆತ ಈ ಹಾಡು, ಮುದ ನೀಡುತ್ತದೆ. ಒಟ್ಟಿನಲ್ಲಿ ಕೊಟ್ಟ ಕಾಸಿಗೆ ಮೋಸವಾಗದಂತಿದೆ ಈ ಚಿತ್ರದ ಹಾಡುಗಳು, ಒಮ್ಮೆ ಕೇಳಿ ನೋಡಿ.


Click it and Unblock the Notifications