»   » ಕೂಸು ಕಂದಯ್ಯ ಒಳ ಹೊರಗ ಆಡಿದರೆ ಬೀಸಣಿಗೆ ಗಾಳಿ ಸುಳಿದಾವು...

ಕೂಸು ಕಂದಯ್ಯ ಒಳ ಹೊರಗ ಆಡಿದರೆ ಬೀಸಣಿಗೆ ಗಾಳಿ ಸುಳಿದಾವು...

Posted By: Super
Subscribe to Filmibeat Kannada

ಶ್ರುತಿ ಅಮ್ಮನಾಗಿದ್ದಾರೆ !
ಸಿನಿಮಾಗಳಲ್ಲಿ ಕಣ್ಣೀರ ಧಾರೆಯ ಧಾರಾಕಾರ ಹರಿಸುತ್ತಿದ್ದ ಅಳುಮುಂಜಿ ಎಂದೇ ಹೆಸರಾದ ಶ್ರುತಿಯನ್ನು 'ಅಳುಮುಂಜಿ ಅಮ್ಮ" ಅನ್ನುವಂತಿಲ್ಲ. ಇದು ಸಿನಿಮಾ ಅಲ್ಲ ಜೀವನ! ಆ ಕಾರಣದಿಂದಾಗಿಯೇ ಪಾತ್ರವೂ ಬದಲು. ಅಳುವ ಸರತಿ ಮಗುವಿನದು; ಸಂತೈಸುವ ಪಾಳಿ ಶ್ರುತಿ ಅವರದು.

ಶ್ರುತಿ ಅಮ್ಮನಾಗಿರುವ ಸುದ್ದಿ ಬೆಳಕಿಗೆ ಬಂದದ್ದು ತುಸು ತಡವಾಗಿ. ಜೂನ್‌ 6 ರಂದೇ ಪುಟಾಣಿ ಶ್ರುತಿ ಜನಿಸಿದ್ದಾಳೆ. ಯಾವ ಲಾಲಿ ಹಾಡಲಿ ಎಂದು ಅಮ್ಮ ಶ್ರುತಿ ತಲೆ ಕೆಡಿಸಿಕೊಳ್ಳುವಂತಿಲ್ಲ. ಆಕೆ, ಸೃಜನಶೀಲೆ 'ಅಮ್ಮ". ಮಗುವಿನ ಲಾಲನೆ ಪಾಲನೆಗೋಸ್ಕರ ಮಗು ಹುಟ್ಟುವ ಮುನ್ನವೇ 'ಲಾಲಿ" ಹಾಡು ಕಲಿತಿದ್ದಾರೆ. ಮಗುವನ್ನು ಗರ್ಭದಲ್ಲೇ ಸಂತೈಸಿದ್ದಾರೆ. ಇಷ್ಟಾದರೂ ಮಗು ಅತ್ತರೆ.. ಅಪ್ಪನ ಸ್ಥಾನಕ್ಕೆ ಬಡ್ತಿ ಹೊಂದಿರುವ ಮಹೇಂದರ್‌ ನೆರವಿಗೆ ಬರುತ್ತಾರಾ? ಶ್ರುತಿ ಉತ್ತರಿಸುವುದಿಲ್ಲ .. ನಗುತ್ತಾರೆ... ಅಮ್ಮನ ನಗು!

ಮಗಳ ಬಗ್ಗೆ ಅಮ್ಮನ ಕಾಳಜಿ ಅಷ್ಟಿಷ್ಟಲ್ಲ. ಮಗು ಹೊಟ್ಟೆಯಲ್ಲಿರುವಾಗಲೇ ರಿಸ್ಕು ಬೇಡ ಎಂದು ಸಿನಿಮಾಗಳಲ್ಲಿ ನಟಿಸುವುದನ್ನು ಬಿಟ್ಟರು. ಲಾಲಿ ಕಲಿಯಲು ಶುರು ಮಾಡಿದರು. ಮಗುವಿನ ಪಾಲಿಗೆ ಹಾಡು ಕರ್ಕಶ ಅನ್ನಿಸದಿರಲಿ ಎಂದು ಕಂಠಶುದ್ಧಿ ಮಾಡಿಕೊಳ್ಳಲು ಶ್ರುತಿ ಸಂಗೀತ ಕಲಿಕೆಗೆ ಶುರು ಹಚ್ಚಿಕೊಂಡರು. ಅದೆಲ್ಲಾ ಥಿಯರಿ ಈಗ ಪ್ರಯೋಗ ರೂಪದಲ್ಲಿ.

ಶ್ರುತಿ ಇತ್ತ ಲಾಲಿ ಹಾಡುತ್ತಿದ್ದರೆ, ಇನ್ನೊಂದೆಡೆ ಲಾಲಿ ಹಾಡಿಗೆ ವಿರಾಮ ನೀಡಿರುವ ಸುಧಾರಾಣಿ ಸಿನಿಮಾದಲ್ಲಿ ನಟಿಸಲು ಶುರು ಹಚ್ಚಿಕೊಂಡಿದ್ದಾರೆ. ಶ್ರುತಿ ಹಾಗೂ ಸುಧಾರಾಣಿ ಹೆಚ್ಚೂಕಡಿಮೆ ಒಂದೇ ಸಮಯದಲ್ಲಿ ಸಿನಿಮಾ ಪ್ರವೇಶಿಸಿದವರು. ಇಬ್ಬರೂ ಕನ್ನಡ ಪ್ರತಿಭೆ. ಸೌಂದರ್ಯಕ್ಕಿಂಥ ಪ್ರತಿಭೆಯನ್ನೇ ನಂಬಿಕೊಂಡವರು. ಒಂದು ಕಾಲದಲ್ಲಿ ಇಬ್ಬರಿಗೂ ಪೈಪೋಟಿಯೂ ಇತ್ತು . ಆದರೆ, ಉತ್ತುಂಗದಲ್ಲಿ ಇರುವಾಗಲೇ ಮದುವೆಯಾದ ಸುಧಾ ಸಿನಿಮಾ ಬಿಟ್ಟು ಅಮೆರಿಕಾಕ್ಕೆ ಹಾರಿದರು. ಮತ್ತೆ ತವರಿಗೆ ಮರಳಿ, ಮರು ಮದುವೆಯಾದರು. ಮಗು ಕೂಡಾ ಆಯಿತು. ಈಗ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸುಧಾ ಅಮೆರಿಕಾಕ್ಕೆ ಹಾರಿದ ನಂತರ ಬೇರುಗಳ ಗಟ್ಟಿಯಾಗಿಸಿಕೊಂಡ ಶ್ರುತಿ ಸಾಟಿಯೇ ಇಲ್ಲವೆಂಬಂತೆ ಬೆಳೆದರು. ತಾಯಿ, ತವರು, ಕರುಳು... ಸಾಲಾಗಿ ಹಿಟ್‌ ಚಿತ್ರಗಳನ್ನು ನೀಡಿದರು. ಇನ್ನೇನು ಮುಖದ ಕಾಂತಿ ಕುಂದಿತು ಅನ್ನುವಾಗ್ಗೆ ನಿರ್ದೇಶಕ ಎಸ್‌.ಮಹೇಂದರ್‌ ಕೈಹಿಡಿದರು. ದಂಪತಿಗಳಿಬ್ಬರೂ ಗಟ್ಟಿಮೇಳ ಎನ್ನುವ ಸಿನಿಮಾದಲ್ಲಿ ನಟಿಸಿ, ಸುಮ್ಮನಾದರು. ಈಗ ಶ್ರುತಿ ತಾಯಿಯಾಗಿದ್ದಾರೆ. ಅಲ್ಲಿಗೆ ಸುಧಾರಾಣಿ ಸಾಧನೆ ಸರಿಗಟ್ಟಿದಂತಾಯಿತು!

ಅಮ್ಮನಾದ ಮೇಲೂ ನಟಿಸುವುದಾಗಿ ಶ್ರುತಿ ಈಗಾಗಲೇ ಹೇಳಿದ್ದಾರೆ. ಅಲ್ಲಿಗೆ ಸುಧಾರಾಣಿಯನ್ನು ಅನುಸರಿಸಿದಂತೂ ಆಯಿತು!

English summary
Actress Shruthi Mahendra is proud mother of a Female child

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada