ಮಿಲನಹಾಡುಗಳು ಚೆನ್ನಾಗಿವೆ, ನಿಜಕ್ಕೂ ಚೆನ್ನಾಗಿವೆ!
ಮನೋಮೂರ್ತಿ ಸಂಗೀತಧಾರೆ ಮುಂಗಾರು ಮಳೆನಂತರ, ನಿಲ್ಲದೆ ಇನ್ನೂ ಸಾಗುತ್ತಿದೆ. ಪುನೀತ್ ಅಭಿನಯದ ಮಿಲನ ಚಿತ್ರದ ಹಾಡುಗಳು ಇಂಪಾದ ರಸಧಾರೆಯನ್ನು ಹರಿಸಿವೆ. ಆನಂದ್ ಆಡಿಯೋ ಮಿಲನ ಆಡಿಯೋವನ್ನು ಹೊರತಂದಿದ್ದು, ಮಾರಾಟ ಭರದಿಂದ ಸಾಗಿದೆ.
ಈ ಆಲ್ಬಂ ಶುರುವಾಗುವುದು "ನಿನ್ನಿಂದಲೇ ನಿನ್ನಿಂದಲೇ" ಎಂಬ ಸುಮಧುರ ಸಾಹಿತ್ಯವಿರುವ ಹಾಡಿನಿಂದ. ಈ ಹಾಡಿನ ಇಂಪಿಗೆ ತಲೆದೂಗುವಂತೆ ಮಾಡುವಲ್ಲಿ ಸೋನು ನಿಗಮ್ ಯಶಸ್ವಿಯಾಗಿದ್ದಾರೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.
"ಅಂತೂ ಇಂತೂ" ಯುಗಳ ಗೀತೆಗೆ ಉದಿತ್ ನಾರಾಯಣ್ ಹಾಗೂ ಚಿತ್ರಾ ದನಿಯಾಗಿದ್ದಾರೆ. ಕನ್ನಡದಲ್ಲಿ ಈಗಾಗಲೇ ಅನೇಕ ಹಾಡು ಹಾಡಿದ್ದರೂ ಕೂಡ ಉದಿತ್ ನಾರಾಯಣ್ ಉಚ್ಚಾರ ಕೆಲವೆಡೆ ಕೇಳುವಂತಿಲ್ಲ. ಈ ಹಾಡಿನ ಸಾಹಿತ್ಯ ಕೂಡ ಅಷ್ಟಾಗಿ ಮೆಚ್ಚುಗೆ ಪಡೆಯುವುದು ಕಷ್ಟ.
ಇತ್ತೀಚೆಗೆ ಯುಗಳಗೀತೆಗಳ ಹುಚ್ಚು ಹಿಡಿಸುವ ಜೋಡಿಯಾಗಿರುವ ಸೋನು ನಿಗಮ್ ಹಾಗೂ ಶ್ರೇಯಾ ಗೋಸಲ್ ಹಾಡಿರುವ ನಿಧಾನಗತಿಯ " ಮಳೆ ನಿಂತು ಹೋದ ಮೇಲೆ" ಗೀತೆ ಉತ್ತಮ ಸಾಹಿತ್ಯ ಹೊಂದಿದೆ.
ಕುನಾಲ್ ಗಂಜಾವಾಲ ಹಾಡಿರುವ "ಕಿವಿಮಾತು" ಜೀವನದ ಏಳಿಗೆ ಬಗ್ಗೆ ಕಿವಿಮಾತು ನೀಡುವ ಒಳ್ಳೆ ಸಾಹಿತ್ಯದಿಂದ ಕೂಡಿದೆ. ಈ ಹಾಡಿಗೆ ವಾದ್ಯಗಳ ಬಳಕೆ ಚೆನ್ನಾಗಿ ಹೊಂದಿಕೊಂಡಿದೆ.
"ನಿನ್ನಿಂದಲೇ...." ರಿಮಿಕ್ಸ್ ಆವೃತ್ತಿ ಸ್ವಲ್ಪ ಫಾಸ್ಟ್ ಬೀಟ್ಸ್ ಜೊತೆ ಕೇಳಬಹುದು.
"ಮದರಂಗಿಯಲಿ" ಮದುವೆ ದಿಬ್ಬಣದ ಸಂಭ್ರಮವನ್ನು ಸೂಚಿಸುವ ಹಾಡು. ರಾಜೇಶ್ ಕೃಷ್ಣನ್ ಜತೆ ಶ್ರೇಯಾ ಗೋಸಲ್ ಸೊಗಸಾಗಿ ಹಾಡಿದ್ದಾರೆ. ಈ ಹಾಡು ಕೇಳಿದ ಮೇಲೆ ರಾಜೇಶ್ ಇನ್ನೂ ಒಂದೆರೆಡು ಹಾಡು ನೀಡಬಹುದಿತ್ತು ಎನಿಸುತ್ತದೆ.
"ಮಳೆ ನಿಂತು ಹೋದ ಮೇಲೆ" ಹಾಡು ಮತ್ತೆ ಶ್ರೇಯಾ ಗೋಸಲ್ ದನಿಯಲ್ಲಿ ಇಂಪಾಗಿ ಮೂಡಿ ಬಂದಿದೆ.
" ಕದ್ದು ಕದ್ದು.." ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಹಾಡಾಗಿದ್ದು, ಕುಣಿತಕ್ಕೆ ಹೇಳಿ ಮಾಡಿಸಿದಂತಿದೆ. ಸುರೇಶ್ ಪೀಟರ್, ಚೈತ್ರಾ ಹಾಗೂ ಸ್ಟೀಫನ್ ಹಾಡಿರುವ ಈ ಹಾಡಿಗೆ, ಮನೋ ಮೂರ್ತಿ ವಿಭಿನ್ನ ಬಗೆಯ ಸಂಗೀತ ಒದಗಿಸಿದ್ದಾರೆ. ಇತ್ತೀಚಿನ ಅವರ ಸಂಗೀತ ಸಂಯೋಜನೆಗಿಂತ ಈ ಹಾಡು ಕೊಂಚ ಭಿನ್ನ ಎನಿಸುತ್ತದೆ.
ಒಟ್ಟಿನಲ್ಲಿ ಇಂಪಾದ ಹಾಡುಗಳನ್ನು ಕೇಳಿ ಆನಂದಿಸಲು ಆನಂದ್ ಆಡಿಯೋದ ಮಿಲನ ಖರೀದಿಸಬಹುದು. "ನಿನ್ನಿಂದಲೇ" ಹಾಡು ಗುನುಗುವುದನ್ನು ಶುರು ಮಾಡಬಹುದು!


Click it and Unblock the Notifications