»   » ಸಿನಿಮಾ ಕಾರ್ಪೊರೇಟೀಕೃತವಾಗಲಿ, ದುಡ್ಡು ಗ್ಯಾರಂಟಿ : ಬ್ಯಾಂಕು ಹಾಗೂ ವಿತ್ತ ಸಂಸ್ಥೆಗಳು

ಸಿನಿಮಾ ಕಾರ್ಪೊರೇಟೀಕೃತವಾಗಲಿ, ದುಡ್ಡು ಗ್ಯಾರಂಟಿ : ಬ್ಯಾಂಕು ಹಾಗೂ ವಿತ್ತ ಸಂಸ್ಥೆಗಳು

Posted By: Super
Subscribe to Filmibeat Kannada

ಬೆಂಗಳೂರು : ರಫ್ತು ಮಾರುಕಟ್ಟೆಯಲ್ಲಿ ನಮ್ಮ ದೇಶದ ಚಿತ್ರೋದ್ಯಮಕ್ಕೆ ತಕ್ಕ ಸ್ಥಾನಮಾನ ದೊರೆಯಬೇಕಾದರೆ ಬ್ಯಾಂಕುಗಳು ಮತ್ತು ವಿತ್ತ ಸಂಸ್ಥೆಗಳು ಸಿನಿಮಾಗಳಲ್ಲಿ ಹಣ ಹೂಡಬೇಕು. ಈ ಒಟ್ಟ ಭಿಪ್ರಾಯ ವ್ಯಕ್ತವಾದದ್ದು- ಶನಿವಾರ ಇಲ್ಲಿ ನಡೆದ 'ಸಿನಿಮಾಗೆ ಹಣ ಒದಗಿಸುವಿಕೆ ಮತ್ತು ಚಿತ್ರೋದ್ಯಮದ ಮೂಲಭೂತ ಸೌಕರ್ಯ" ಎಂಬ ವಿಷಯ ಕುರಿತ ಸಭೆಯಲ್ಲಿ.

ಭಾರತೀಯ ಉದ್ದಿಮೆ ಒಕ್ಕೂಟ ಆಯೋಜಿಸಿದ್ದ ಈ ಸಭೆಯಲ್ಲಿ ಭಾರತೀಯ ಚಿತ್ರೋದ್ಯಮ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಾದರೆ, ಬ್ಯಾಂಕುಗಳು ಮತ್ತು ವಿತ್ತ ಸಂಸ್ಥೆಗಳು ಹಣ ಹೂಡುವ ಮನಸ್ಸು ಮಾಡಲೇಬೇಕು ಎಂಬುದು ಚಿತ್ರೋದ್ಯಮಿಗಳ ಒತ್ತಾಯ.

ಕೇವಲ ಕಾರ್ಪೊರೇಟ್‌ ವಲಯದಲ್ಲಷ್ಟೇ ಬಂಡವಾಳ ಹೂಡಿದರೆ ಸಾಲದು. ಸಣ್ಣ ಬಜೆಟ್ಟಿನ ಸಿನಿಮಾ ನಿರ್ಮಾಪಕರನ್ನೂ ಬ್ಯಾಂಕುಗಳು ಮತ್ತು ವಿತ್ತ ಸಂಸ್ಥೆಗಳು ನಂಬಿ, ಹಣ ಹೂಡಬೇಕು. ಆಗ ಭಾರತೀಯ ಚಿತ್ರೋದ್ಯಮ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತದೆ ಎಂಬುದು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ (ಎಸ್‌ಐಎಫ್‌ಸಿಸಿ) ಅಧ್ಯಕ್ಷ ಕೆ.ಸಿ.ಎನ್‌. ಚಂದ್ರು ಅಭಿಪ್ರಾಯ.

ಅದಿರಲಿ, ಸಿನಿಮಾದಲ್ಲಿ ಹಣ ಹೂಡೋಕೆ ಯಾಕೆ ಹಿಂದೇಟು?

ಎ.ಎಫ್‌.ಫರ್ಗ್ಯೂಸನ್‌ ಅಂಡ್‌ ಕೋ.ದ ನಿರ್ದೇಶಕ ಸಿ.ಕೆ.ಮೋಹನ್‌ ಕೊಟ್ಟ ಉತ್ತರ ನೋಡಿ- ಸಿನಿಮಾದಲ್ಲಿ ಕಿರ್ದಿ ಪುಸ್ತಕ ಅನ್ನೋದೇ ಇಲ್ಲ. ಕೊಟ್ಟೋನು ಕೋಡಂಗಿ, ಇಸಕೊಂಡೋನು ಈರಭದ್ರ ಅನ್ನೋದು ಇಲ್ಲಿ ಅಕ್ಷರಶಃ ಸತ್ಯ ಅನ್ನೋ ಹಾಗಿದೆ ವಾತಾವರಣ. ನಂಬಿಕೆ ಅನ್ನುವ ಮಾತೇ ಇಲ್ಲಿ ಚಾಲ್ತೀಲಿ ಇಲ್ಲ. ಕಾರ್ಪೊರೇಟ್‌ ಕ್ರಮದ ಶಿಸ್ತಂತೂ ಇಲ್ಲವೇ ಇಲ್ಲ. ಮೊದಲು ಇಲ್ಲಿ ವ್ಯವಸ್ಥೆ ಸುಧಾರಿಸಬೇಕು. ವ್ಯವಹಾರ ಪಾರದರ್ಶಕವಾಗಬೇಕು. ಮೇಲಾಗಿ ಕಾರ್ಪೊರೇಟರೀಕರಣವಾಗಬೇಕು. ರಿಸ್ಕಿಗೆ ಯಾರು ತಾನೇ ಮುಖ ಕೊಡ್ತಾರೆ ಹೇಳಿ?

ಭಾರತದಲ್ಲಿ ವರ್ಷಕ್ಕೆ ತಯಾರಾಗುವ ಚಿತ್ರಗಳೆಷ್ಟು?

ಸುಮಾರು 800 ಚಿತ್ರಗಳು ತಯಾರಾಗುತ್ತವೆ. ಈ ಪೈಕಿ 550 ಪ್ರಾದೇಶಿಕ ಭಾಷೆಯವು. ದೇಶದ 13 ಸಾವಿರ ಚಿತ್ರಮಂದಿರಗಳ ಪೈಕಿ ಪ್ರಾದೇಶಿಕ ಭಾಷೆಯ ಚಿತ್ರಗಳನ್ನು ತೋರುವ ಚಿತ್ರಮಂದಿರಗಳ ಸಂಖ್ಯೆ 8 ಸಾವಿರ. ಇದು ಜಾಗತಿಕ ಮಾರುಕಟ್ಟೆ ಕಂಡುಕೊಳ್ಳಲು ಬೇಕಾದಷ್ಟು ಸರಕಾಯಿತು ಅನ್ನೋದಕ್ಕೆ ಸಾಕ್ಷಿ ಅನ್ನೋದು ಚಿತ್ರೋದ್ಯಮಿಗಳ ಪಾಯಿಂಟು.

ಸಭೆಯಲ್ಲಿ ಪ್ರತಿಧ್ವನಿಸಿದ ಕೆಲವು ಮಾತು/ಅಭಿಪ್ರಾಯ/ಸಲಹೆಗಳು...

  • ನಾನು ಸುಮಾರು 25 ಸಿನಿಮಾ ಮಾಡಿದ್ದೇನೆ. ಭಾರತೀಯ ಚಿತ್ರೋದ್ಯಮ ಹೊಸ ರಫ್ತು ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಬೇಕು. ಎಲ್ಲೋ ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ ವಿದೇಶೀ ಮಾರುಕಟ್ಟೆಯಿದೆ. ಭಾಷೆ ಇಲ್ಲಿ ತೊಡಕೇ ಅಲ್ಲ. ಎಲ್ಲಿ ಮಾನವ ಸಹಜ ಭಾವನೆಗಳ ಅಭಿವ್ಯಕ್ತಿ ಇರುತ್ತದೋ, ಅಲ್ಲಿ ಭಾಷೆ ಗೌಣವಾಗುತ್ತದೆ. ರಜನೀಕಾಂತ್‌ ಸಿನಿಮಾ ಜಪಾನಿನಲ್ಲೂ ಯಶಸ್ವಿಯಾಗಿಲ್ಲವೇ? : ಆಂಧ್ರಪ್ರದೇಶ ಸಿನಿಮಾ, ಕಿರುತೆರೆ ಮತ್ತು ರಂಗಾಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಡಿ.ವಿ.ಎಸ್‌.ರಾಜು.
  • ಕಾರ್ಪೊರೇಟ್‌ ಸಂಸ್ಕೃತಿ ವಿಷಯದಲ್ಲಿ ನಾವಿನ್ನೂ ಹಸುಗೂಸುಗಳು. 2001ನೇ ಇಸವಿಯಲ್ಲಿ ದಕ್ಷಿಣ ಭಾರತದ ಸಿನಿಮಾ ಮತ್ತು ರಂಗ ಮೂಲಸೌಕರ್ಯ ಅಭಿವೃದ್ಧಿಗೆ 1000 ಕೋಟಿ ರುಪಾಯಿ ಹಣ ಖರ್ಚು ಮಾಡಲಾಯಿತು. ಆ ವರ್ಷ ತಯಾರಾದ ಚಿತ್ರಗಳ ಸಂಖ್ಯೆ 422. ಈ ಪೈಕಿ ಸಾಂಸ್ಥಿಕ ಹೂಡಿಕೆ ಚಿಕ್ಕಾಸೂ ಇಲ್ಲ. ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ 44 ಸಿನಿಮಾಗಳನ್ನು ನಿರ್ಮಿಸಿದ್ದೇನೆ. ರಿಸ್ಕು ಯಾವುದೇ ಉದ್ಯಮದಲ್ಲೂ ಇದ್ದದ್ದೇ. ಸಿನಿಮಾದಲ್ಲಿ ಅದು ಸ್ವಲ್ಪ ಜಾಸ್ತಿಯಿರಬಹುದು. ಹಾಗಂತ ಬಂಡವಾಳವನ್ನೇ ಹೂಡದಿದ್ದರೆ ಹೇಗೆ? : ಕೆ. ಸಿ. ಎನ್‌.ಚಂದ್ರಶೇಖರ್‌.
  • ಸಿನಿಮಾದಲ್ಲಿ ಹಣ ಹೂಡಿಕೆಯ ರಿಸ್ಕು ಎಷ್ಟು? ಇಲ್ಲಿನ ಖರೆ ಲೆಕ್ಕಾಚಾರಗಳೇನು? ಹಣಕಾಸಿನ ಲೇವಾದೇವಿಗೆ ವ್ಯವಸ್ಥಿತ ದಾಖಲೆ ಇವೆಯಾ?- ಈ ಮೊದಲಾದ ಪ್ರಶ್ನೆಗಳಿಗೆ ಭಾರತೀಯ ಚಿತ್ರೋದ್ಯಮ ಉತ್ತರಗಳನ್ನು ಕಂಡುಕೊಳ್ಳಬೇಕು. ಆಮೇಲೆ ಬ್ಯಾಂಕುಗಳು ಮತ್ತು ವಿತ್ತ ಸಂಸ್ಥೆಗಳ ಮುಖ್ಯಸ್ಥು ಹಾಗೂ ಸಿನಿಮಾ ನಿರ್ಮಾಪಕರನ್ನು ಚರ್ಚೆಗೆ ಕೂಡಿಸಿ ಅನುಮಾನ/ಗೊಂದಲಗಳಿಗೆ ಪೂರ್ಣ ವಿರಾಮ ಹಾಕಬೇಕು. ಐಡಿಬಿಐ ಈಗಾಗಲೇ ಕಾರ್ಪೊರೇಟ್‌ಗಳು ನಿರ್ಮಿಸಿರುವ 7 ಚಿತ್ರಗಳಿಗೆ ಹಣ ಹೂಡಿ, ಯಶಸ್ಸಿನ ರುಚಿ ಕಂಡುಕೊಂಡಿದೆ. ಯೂಟಿವಿ 'ಫಿಜಾ" ಹಿಂದಿ ಚಿತ್ರ ಮಾಡಿದೆ. ಹಿಂದೂಜಾ ಟಿಎಂಟಿ ಈವರ್ಷ 20 ಕೋಟಿ ರುಪಾಯಿ ಬಂಡವಾಳವನ್ನು ಸಿನಿಮಾದಲ್ಲಿ ಹೂಡಿದೆ. ಭಾರತೀಯ ಸಿನಿಮಾ ಕಾರ್ಪೊರೇಟೀಕರಣವಾಗಲಿ. ಬಂಡವಾಳ ಯಾಕೆ ಬರೋಲ್ಲ ನೋಡಿ : ಸಿ.ಕೆ.ಮೋಹನ್‌.

ಸಿನಿಮಾದಲ್ಲಿ ಬ್ಯಾಂಕುಗಳು ಮತ್ತು ವಿತ್ತ ಸಂಸ್ಥೆಗಳು ಬಂಡವಾಳ ಹೂಡಬೇಕೋ ಬೇಡವೋ; ನೀವೇನಂತೀರಿ?(ಪಿಟಿಐ)

English summary
Fund us to go global : Indian film industry tells banks/FIs

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada