»   » ಲವ್‌- ಏರ್‌ಟೆಲ್‌ ನಡುವೆ ಲವ್ವು !

ಲವ್‌- ಏರ್‌ಟೆಲ್‌ ನಡುವೆ ಲವ್ವು !

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ತಂಪು ಪಾನೀಯ ಹಾಗೂ ಮೋಟಾರ್‌ ಬೈಕ್‌ ಕಂಪನಿಗಳು ಹಿಂದಿ ಚಿತ್ರಗಳ ಜೊತೆ ಒಪ್ಪಂದ ಮಾಡಿಕೊಂಡು ಜಾಹೀರಾತು ಪಡೆಯುವುದು, ಸಿನಿಮಾಗೂ ಪ್ರಚಾರ ಕೊಡುವುದು ಲಾಗಾಯ್ತಿನಿಂದ ಚಾಲ್ತಿಯಲ್ಲಿರುವ ಸಂಗತಿ. ಆದರೆ ಸೀಮಿತ ಮಾರುಕಟ್ಟೆಯಿರುವ ಕನ್ನಡ ಚಿತ್ರಗಳಲ್ಲಿ ಈ ಪ್ರಕಾರದ ಒಡಂಬಡಿಕೆಗಳು ಎಲ್ಲೋ ಅಲ್ಲೊಂದು ಇಲ್ಲೊಂದು.

ಹುಚ್ಚೆಬ್ಬಿಸಿದ್ದ ರವಿಚಂದ್ರನ್‌ ಕನಸಿನ ಚಿತ್ರ ‘ಪ್ರೇಮಲೋಕ’ ದಲ್ಲಿ ಸದ್ದು ಗದ್ದಲ ಮಾಡಿದ ಟಿವಿಎಸ್‌ ಮೋಟಾರ್‌ ಬೈಕುಗಳು ಜೋರಾಗಿ ಬಿಕರಿಯಾಗುತ್ತಿದ್ದ ಯಮಹಾ ಕಂಪನಿಯ ಬೈಕುಗಳಿಗೆ ಕೊಂಚ ಬ್ರೇಕ್‌ ಹಾಕಿದ್ದು ನೆನಪು. ಆದರೆ ಒಡಂಬಡಿಕೆಯಿಂದ ಚಿತ್ರಕ್ಕೆ ಉಪಯೋಗವಾದಂಥ ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿ ಇಲ್ಲವೇನೋ.

ಇತ್ತೀಚೆಗೆ ಬಿಡುಗಡೆಯಾದ ಕವಿತಾ ಲಂಕೇಶ್‌ ನಿರ್ದೇಶನದ ‘ಪ್ರೀತಿ ಪ್ರೇಮ ಪ್ರಣಯ’ ಚಿತ್ರದ ಹಾಡುಗಳನ್ನು ಮೊಬೈಲ್‌ನಲ್ಲಿ ರಿಲಯನ್ಸ್‌ ಕೇಳಿಸಲು ಮುಂದಾಯಿತು. ಆದರೆ ಕೇಳಿದವರ ಸಂಖ್ಯೆ ಸುದ್ದಿಯೇ ಆಗಲಿಲ್ಲ. ತಮ್ಮ ಮಗ ಆದಿತ್ಯ ಉರುಫ್‌ ದುಷ್ಯಂತ್‌ ಸಿಂಗ್‌ನನ್ನು ನಾಯಕನಾಗಿ ಕಡೆಯಲು ಕಲಿತ ವಿದ್ಯೆಯನ್ನೆಲ್ಲಾ ಖರ್ಚು ಮಾಡುತ್ತಿರುವ ರಾಜೇಂದ್ರ ಸಿಂಗ್‌ ಬಾಬು ಇದೀಗ ಏರ್‌ಟೆಲ್‌ ಜೊತೆ ಬ್ರಾಂಡ್‌ ಒಪ್ಪಂದ ಮಾಡಿಕೊಂಡಿದ್ದಾರೆ.

ಏರ್‌ಟೆಲ್‌ನವರಿಗೆ ಈ ಒಪ್ಪಂದದಿಂದ ಒಂದಷ್ಟು ಹಣ ಗಿಟ್ಟಬಹುದು. ಆದರೆ, ಬಾಬು ಪುತ್ರನ ಚಿತ್ರಕ್ಕೆ ಭರ್ತಿ ಪ್ರಚಾರ ಸಿಗುವುದಂತೂ ಖರೆ. ಒಡಂಬಡಿಕೆಯ ಪ್ರಕಾರ, ಬಿಡುಗಡೆ ಸಂದರ್ಭದಲ್ಲಿ ಏರ್‌ಟೆಲ್‌ ‘ಲವ್‌’ ಚಿತ್ರಕ್ಕೆ ವ್ಯಾಪಕ ಪ್ರಚಾರ ಕೊಡಲಿದೆ. ಬೆಂಗಳೂರಿನಂಥ ನಗರಿಯಲ್ಲಿ ಪಡ್ಡೆಗಳ ಕೈಲೂ ಮೊಬೈಲು ರಿಂಗಿಸುವ ಈ ದಿನಗಳಲ್ಲಿ ಕನ್ನಡ ಚಿತ್ರವೊಂದರ ಪ್ರಚಾರದ ಈ ಆಧುನಿಕ ತಂತ್ರ ಸ್ವಾಗತಾರ್ಹ. ಆದರಿದು ಏರ್‌ಟೆಲ್‌ ಗಿರಾಕಿಗಳು ಚಿತ್ರಮಂದಿರಕ್ಕೆ ಬಂದು, ಕನ್ನಡ ಸಿನಿಮಾ ನೋಡುವಂತೆ ಮಾಡುತ್ತದಾ? ಮಾಡಿದರೆ ತಂತ್ರ ಪೂರ್ಣ ಫಲದಾಯಕ ಅಂದುಕೊಳ್ಳಬಹುದು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada