»   » ‘ಸಿಂಹಾದ್ರಿಯ ಸಿಂಹ’ನಿಗೆ ನೂರು ವುಡ್‌ಲ್ಯಾಂಡ್ಸ್‌ನಲ್ಲಿ ಸಮಾರಂಭ ಜೋರೋ

‘ಸಿಂಹಾದ್ರಿಯ ಸಿಂಹ’ನಿಗೆ ನೂರು ವುಡ್‌ಲ್ಯಾಂಡ್ಸ್‌ನಲ್ಲಿ ಸಮಾರಂಭ ಜೋರೋ

By: *ಎಂ.ವಿನೋದಿನಿ
Subscribe to Filmibeat Kannada

ವಿಷ್ಣುವರ್ಧನ್‌ಗೆ ಪದ್ಮಭೂಷಣ ಕೊಡಿ ಅಂತ ಸಂಸದ, ವಿಷ್ಣು ಗಳಸ್ಯ ಗೆಳೆಯ ಅಂಬರೀಶ್‌ ಹಾಗೂ ನಿರ್ಮಾಪಕ ಅಂಕಲಗಿ ಅಪ್ಪಣೆ ಕೊಡಿಸಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಸದ್ಯದಲ್ಲೇ ಅರ್ಜಿ ಗುಜರಾಯಿಸಲಿದೆ !

ಬರದ ಗರದ ನಡುವೆಯೇ ಬೆಂಗಳೂರಲ್ಲಿ ಭರವಸೆಯ ಸಿಂಚನದಂತೆ ಸುರಿದ ಮಳೆಯ ಸದ್ದನ್ನು ವಿಷ್ಣು ವುಡ್‌ಲ್ಯಾಂಡ್ಸ್‌ ಹೊಟೇಲಿನಲ್ಲೇ ಅನುಭವಿಸುತ್ತಿದ್ದರು. ಅವರ ಆಜೂಬಾಜು ಅಭಿಮಾನಿಗಳು. ವೇದಿಕೆ ಮೇಲೆ ಹೆಂಡತಿ ಭಾರತಿ. ಮಾತಾಡೋಕೆ- ಜಗ್ಗೇಶ್‌, ಜಸ್ಟಿಸ್‌ ರಾಜೇಂದ್ರ ಪ್ರಸಾದ್‌, ರಾಷ್ಟ್ರೋತ್ಥಾನ ಪರಿಷತ್‌ನ ವಿದ್ಯಾನಂದ ಶೆಣೈ, ನಿರ್ಮಾಪಕ ಅಂಕಲಗಿ, ಕಲಾ ಸಾಮ್ರಾಟ್‌ ಬಿರುದಾಂಕಿತ 'ಭಾಗೀರಥಿ" ಖ್ಯಾತಿಯ ಎಸ್‌.ನಾರಾಯಣ್‌ ಇದ್ದರು. ಮೀನು ಕಂಗಳ ಮೀನಾ ಪಾದರಸದಂತೆ ಓಡಾಡಿಕೊಂಡಿದ್ದರು. ಸಿಂಹಾದ್ರಿಯ ಸಿಂಹ ನೂರು ದಿನ ಓಡಿದ್ದರ ಸಂಭ್ರಮದ ಭಾನುವಾರ (ಸೆ.15) ಇದು.

ಸಮಾರಂಭದಲ್ಲಿ ದಿಗ್ಗಜರು ಉದುರಿಸಿದ ಅಣಿ ಮುತ್ತುಗಳು...

  • ವಿದ್ಯಾನಂದ ಶೆಣೈ : ಅಲೆಗ್ಸಾಂಡರ್‌ನಿಂದ ಮುಷರ್ರಫ್‌ವರೆಗೆ ನಮ್ಮ ದೇಶದ ಬುಡ ಅಲ್ಲಾಡಿಸಲು ಯಾರಿಗೂ ಆಗಿಲ್ಲ. ಜಗತ್ತಿನ 48 ಸಂಸ್ಕೃತಿಗಳ ಪೈಕಿ 46ಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಇಂಥಾ ಸ್ಥಿತಿಯಲ್ಲೂ ನಮ್ಮ ಸಂಸ್ಕೃತಿಯ ಬೇರುಗಳು ಬಲು ಗಟ್ಟಿಯಾಗಿರುವುದು ಹೆಮ್ಮೆಯ ವಿಷಯ. ನಮ್ಮತನವನ್ನು ಜತನದಿಂದ ಕಾಪಾಡುವಂಥ ಒಳ್ಳೆಯ ಸಿನಿಮಾಗಳು ಬರಬೇಕು.
  • ರಾಜೇಂದ್ರ ಪ್ರಸಾದ್‌ : ನನಗೆ 'ಸಿಂಹಾದ್ರಿಯ ಸಿಂಹ"ದ ಎರಡು ಹಾಡು ಮತ್ತು ನರಸಿಂಹ ಗೌಡನ ಪಾತ್ರ ತುಂಬಾ ಇಷ್ಟವಾಗಿದೆ.
  • ರಾಮಲಿಂಗಾ ರೆಡ್ಡಿ : ನಾನು ವಿಷ್ಣು ಅಭಿಮಾನಿ. ಅವರು ನಮ್ಮ ಕ್ಷೇತ್ರದವರು. ಅವರು ಇನ್ನೂ 30 ವರ್ಷ ಸಿನಿಮಾಗಳಲ್ಲಿ ನಟಿಸಲಿ !
  • ಅಂಬರೀಶ್‌ : ಒಂದು ಪಾತ್ರ ಮಾಡೋದೆ ಕಷ್ಟ ಆಗಿರೋವಾಗ, ವಿಷ್ಣು ಮೂರು ಪಾತ್ರ ನಿಭಾಯಿಸಿದ್ದಾರೆ. ಮೂವತ್ತು ವರ್ಷಗಳ ಹಿಂದೆ ನಾನು ಹಾಗೂ ವಿಷ್ಣು ನಾಗರಹಾವು ಚಿತ್ರದ ಮೂಲಕ ಸಿನಿಮಾಗೆ ಬಂದೆವು. ಆಗಲೂ ಇದೇ ವುಡ್‌ಲ್ಯಾಂಡ್ಸ್‌ ಹೊಟೇಲಲ್ಲಿ ಭೇಟಿಯಾಗಿದ್ದೆವು. ಇವತ್ತೂ ಇಲ್ಲೇ ನಿಂತಿದ್ದೇವೆ. ವಿಷ್ಣುಗೆ ಪದ್ಮಭೂಷಣ ಸಿಗಲಿ ಅಂತ ಹಾರೈಸುತ್ತೇನೆ.
  • ಎಸ್‌.ನಾರಾಯಣ್‌ : ವಿಷ್ಣುವರ್ಧನ್‌ ಅವರ ಜೊತೆ 4 ಸಿನಿಮಾಗಳಲ್ಲಿ ಕೆಲಸ ಮಾಡಿದೀನಿ. ಅವರ ಚರಿಷ್ಮಾಗೆ ಒಂದು ಘಟನೆ ಹೇಳಬೇಕು- ಸಿನಿಮಾದ ಪೋಸ್ಟರ್‌ ಹೊತ್ತ ಆಟೋ ಒಂದು ಹಳ್ಳಿಯಾಂದರಲ್ಲಿ ನಡೆದಿತ್ತು. ಆ ಹಳ್ಳೀಲೂ ಮಳೆಯಿಲ್ಲ, ಬರ. ಜನರೆಲ್ಲಾ ಆಟೋ ಹಿಂದೆ ಓಡಿ, ಪೋಸ್ಟರನ್ನು ಇಂಟಿಂಚೂ ನೋಡಿದರು. ಯಾಕಪ್ಪಾ ಹೀಗೆ ಅಂತ ಕೇಳಿದರೆ, ಸಿನಿಮಾ ನೋಡೋಕೆ ಅವರ ಬಳಿ ದುಡ್ಡಿರಲಿಲ್ಲ. ಆದರೂ ಪೋಸ್ಟರನ್ನಾದರೂ ನೋಡಿ, ವಿಷ್ಣು ಅವರನ್ನು ಕಣ್ತುಂಬಿಕೊಳ್ಳುವಾಸೆ !

ಇಷ್ಟೆಲ್ಲಾ ಯದ್ವಾ ತದ್ವಾ ಹೊಗಳಿಕೆಗೆ ಭಾಜನರಾದ ವಿಷ್ಣುವರ್ಧನ್‌ ಥೇಟ್‌ ಫಿಲಾಸಫರ್‌ ಧಾಟಿಯಲ್ಲಿ ಹೇಳಿದ್ದು- 'ಇದೆಲ್ಲಾ ನಿಮ್ಮೆಲ್ಲರ ಅಭಿಮಾನದ ಭಿಕ್ಷೆ, ದೇವರ ರಕ್ಷೆ. ಪ್ರೀತಿ ಅನ್ನುವ ಶಕ್ತಿಯೇ ದೊಡ್ಡದು. ನಾನೇನೂ ದೊಡ್ಡದನ್ನು ಮಾಡಿಲ್ಲ. ಎಲ್ಲವನ್ನೂ ಆ ದೇವರು ನನ್ನಿಂದ ಮಾಡಿಸಿದ್ದಾನೆ. ಅಭಿಮಾನಿಗಳೇ ನನ್ನ ಕನ್ನಡಿ. ತಪ್ಪು ತಿದ್ದುವವರೂ ಅವರೆ, ಹೊಗಳುವವರೂ ಅವರೇ..."

ವಿಷ್ಣು ಮಾತು ಮುಗಿಯುವಷ್ಟರಲ್ಲೇ ಹಾಡಿಗೆ ಡಿಮ್ಯಾಂಡು. ಮೈಕೆತ್ತಿಕೊಂಡು 'ಸಿಂಹಾದ್ರಿಯ ಸಿಂಹ"ದ 'ಕಲ್ಲಾದರೆ ನಾನು..." ಹಾಡೋಕೆ ಶುರುವಿಟ್ಟರು.

ಟೀವೀನೇ ನೋಡ್ಕೊಂಡು ಜನ ಸುಮ್ಮನಾಗಬಾರದು, ಥಿಯೇಟರಿಗೆ ಬಂದು ಸಿನಿಮಾನ ನೋಡಬೇಕು ಅಂತ ಜಗ್ಗೇಶ್‌ ಹಳೇ ಪ್ಲೇಟನ್ನೇ ಹಾಕುತ್ತಿದ್ದರು. ಖುದ್ದು ಜಗ್ಗೇಶ್‌ 'ಸಿಂಹಾದ್ರಿಯ ಸಿಂಹ"ದ ಒಂದೇ ಒಂದು ಹಾಡನ್ನ ಟೀವೀಲೇ ನೋಡಿರೋದು, ಥಿಯೇಟರಿನಲ್ಲಲ್ಲ ಅನ್ನೋದು ಪ್ರತಿಧ್ವನಿಸುತ್ತಿದ್ದ ಜೋಕು.

'ವಿಷ್ಣುವರ್ಧನ್‌ ಅವರನ್ನು ಹಾಕಿಕೊಂಡು ಇನ್ನೊಂದು ಸಿನಿಮಾ ಮಾಡಬೇಕು ಅಂದ್ಕೊಂಡಿದೀನಿ. ಅದರಲ್ಲಿ ಅವರ ಕೈಯಲ್ಲಿ ಐದು ಪಾತ್ರ ಮಾಡಿಸ್ಬೇಕು ಅನ್ನೋದು ನನ್ನಾಸೆ" ಅಂತ ನಿರ್ಮಾಪಕ ವಿಜಯ ಕುಮಾರ್‌ ಹೇಳಿದಾಗ ಕೆಲವರು ಮೂರ್ಛೆ ಹೋಗೋದೊಂದೇ ಬಾಕಿ ! ಪೂರಕ ಓದಿಗೆ-

English summary
Vishnuvarshan shines in Simhadriya Simhas century celebration

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada