»   » ಚಿತ್ರೀಕರಣದ ವೇಳೆ ಬೆಂಕಿ: ಸೋನು ಅಪಾಯದಿಂದ ಪಾರು

ಚಿತ್ರೀಕರಣದ ವೇಳೆ ಬೆಂಕಿ: ಸೋನು ಅಪಾಯದಿಂದ ಪಾರು

Posted By:
Subscribe to Filmibeat Kannada


ಮೊನ್ನೆಯಷ್ಟೇ ಚಿತ್ರೀಕರಣದ ವೇಳೆ ರಮ್ಯಾ ಅಪಾಯದಿಂದ ಪಾರಾದರು. ಈ ಘಟನೆ ಮಾಸುವ ಮುನ್ನವೇ ಚಿತ್ರೀಕರಣ ತಾಣದಲ್ಲಿ ಇನ್ನೊಂದು ಆಕಸ್ಮಿಕ ನಡೆದಿದೆ. ಪುಣ್ಯಕ್ಕೆ ನಾಯಕಿ ಸೋನು ಅಪಾಯದಿಂದ ಪಾರಾಗಿದ್ದಾರೆ.

ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ನಾಯಕಿ ಸೋನು ಮತ್ತು ಶ್ರೀನಾಥ್ ಬೆಂಕಿ ಪಾಲಾಗಬೇಕಿತ್ತು. ಸದ್ಯಕ್ಕೆ ಗಂಡಾಂತರ ತಪ್ಪಿತು ಎನ್ನುತ್ತಾರೆ ನಿರ್ದೇಶಕ ಸೂರಿ.

ಘಟನೆ ವಿವರ : ನಗರದ ಅಭಿಮಾನ್ ಸ್ಟುಡಿಯೋದಲ್ಲಿ ಸೂರಿ ನಿರ್ದೇಶನದ 'ಇಂತಿ ನಿನ್ನ ಪ್ರೀತಿಯ'ಚಿತ್ರೀಕರಣ ಇತ್ತೀಚೆಗೆ ನಡೆಯುತ್ತಿತ್ತು. ಬೆಡ್ ರೂಂನಲ್ಲಿ ಕೂತು ನಾಯಕ ನಾಯಕಿ ಮಾತನಾಡುವ ದೃಶ್ಯವದು. ಮಂಚದ ಸುತ್ತಲೂ ಬೆಂಕಿ ಹಾಕಲಾಗಿತ್ತು. ಗಾಳಿಯಿಂದಾಗಿ ಬೆಂಕಿ ತನ್ನ ಪ್ರತಾಪ ತೋರಿಸಿತು. ಕೂಡಲೇ ಚಿತ್ರತಂಡ ಕಾಲಿಗೆ ಬುದ್ಧಿ ಹೇಳಿತು.

ನಾಯಕಿ ಸೋನು ಸಿಂಥೆಟಿಕ್ ಸೀರೆ ಉಟ್ಟಿದ್ದರು. ಒಂದು ವೇಳೆ ಬೆಂಕಿ ತಾಕಿದ್ದರೇ, ಅಪಾಯ ಕಟ್ಟಿಟ್ಟ ಬುತ್ತಿ. ಬೆಂಕಿ ಕಂಡ ಸೋನು, ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿದರು. ಈ ಸಂದರ್ಭದಲ್ಲಿ ಸೀರೆಗೆ ಬೆಂಕಿ ತಾಕುವುದರಲ್ಲಿತ್ತು. ಕೂಡಲೇ ಬೆಂಕಿ ನಂದಿಸಲು ಮುಂದಾದ ಶ್ರೀನಾಥ್ ಅವರ ಕೈಕಾಲಿಗೆ ಬೆಂಕಿ ತಾಕಿ, ಸಣ್ಣಪುಟ್ಟ ಗಾಯಗಳಾದವು ಎಂದು ಚಿತ್ರತಂಡ ಹೇಳಿದೆ.

ಸ್ವಲ್ಪ ಸಮಯದ ನಂತರ ಚಿತ್ರೀಕರಣ ಮತ್ತೆ ಆರಂಭವಾಯಿತು. ಅಂದ ಹಾಗೆ, ಈ ಚಿತ್ರದ ನಾಯಕ ಶ್ರೀನಗರ ಕಿಟ್ಟಿ. ಬಿ.ಕಾಂ ಓದುತ್ತಿರುವ ಸೋನುಗೆ ಇದು ಮೊದಲ ಚಿತ್ರ. ಈಕೆ ನಟ ಮೇಕಪ್ ರಾಮಕೃಷ್ಣ ಅವರ ಪುತ್ರಿ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada