»   » ‘ಮುಕ್ತ’: ಸೀತಾರಾಂರ ಹೊಸ ಧಾರಾವಾಹಿ

‘ಮುಕ್ತ’: ಸೀತಾರಾಂರ ಹೊಸ ಧಾರಾವಾಹಿ

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೋ
ಏಕ್‌ತಾ ಕಪೂರ್‌ ಧಾರಾವಾಹಿಗಳ ‘ಕ’ಕಾರಾದಿ ಸ್ಟೈಲಿನಿಂದ ನೀವೂ ಪ್ರೇರೇಪಿತರಾಗಿದ್ದೀರೋ ಹೇಗೋ ಎಂಬ ಕಣಕು ಪ್ರಶ್ನೆಗೆ ಟಿ.ಎನ್‌. ಸೀತಾರಾಂ ಮುಗುಳ್ನಕ್ಕರು. ಕಾಕತಾಳೀಯವಾಗಿ ಇದ್ದರೂ ಇರಬಹುದು ಎಂಬ ಭಾವ. ಆಗ ‘ಮಾಯಾಮೃಗ’, ಆಮೇಲೆ ‘ಮನ್ವಂತರ’. ಈಗ ‘ಮುಕ್ತ’.

‘ಮ’ಕಾರಾದಿ ಹೆಸರು ಸೀತಾರಾಂಗೆ ಒಲಿದಿರುವುದಂತೂ ಅಕ್ಷರಶಃ ನಿಜ. ಹಾಗೆಯೇ ಸೀತಾರಾಂ ನಮ್ಮ ಜೀವನದ ನಡುವೆಯೇ ನಡೆವ ತೀರಾ ಸಹಜ ಘಟನೆಗಳನ್ನೂ ಹೊಸತೆನ್ನಿಸುವಂತೆ ತೆರೆಗೆ ತರಬಲ್ಲ ನಿಸ್ಸೀಮ. ಜೊತೆಜೊತೆಗೆ ನಮ್ಮದೇ ಸಮಸ್ಯೆಗಳಿಗೆ ಕನ್ನಡಿ. ಅದಕ್ಕೆ ಪರಿಹಾರದ ಭರವಸೆಯ ಮುನ್ನುಡಿ. ಇದು ಸೀತಾರಾಂ ಗಾರುಡಿ.

‘ಮನ್ವಂತರ’ದ ನಂತರ ತಣ್ಣಗಾಗಿದ್ದ ಸೀತಾರಾಂ ಹೊಸ ಸಿನಿಮಾ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು. ಆದರೆ ಅವರ ಮನಸ್ಸಲ್ಲಿ ಹರಿದಾಡುತ್ತಿದ್ದುದು ಡಬ್ಲ್ಯುಟಿಓ ನಿರ್ಧಾರಗಳಿಂದ ರೈತರಿಗಾಗುತ್ತಿರುವ ಅನ್ಯಾಯದ ಮಜಲು, ರಾಜಕಾರಣಿಗಳ ದಾಂಗುಡಿಗೆ ಮಣಿದು ಪ್ರಾಮಾಣಿಕತೆಯನ್ನು ಪಕ್ಕಕ್ಕಿರಿಸುವ ಅನಿವಾರ್ಯತೆಯಲ್ಲಿ ಬೇಯುವವರ ತೊಳಲಾಟ. ‘ಮುಕ್ತ’ ಧಾರಾವಾಹಿ ಈ ಸಮಸ್ಯೆಗಳನ್ನೇ ಗರ್ಭದಲ್ಲಿಟ್ಟುಕೊಂಡಿದೆ. ಸಮಸ್ಯೆಗಳನ್ನು ಇನ್ನಷ್ಟು ಗಾಢವಾಗಿಸುವ ಜಾತೀಯತೆಯ ಉಪ್ಪು, ಪ್ರೀತಿಯ ವಗ್ಗರಣೆ ಹಾಕಲಾಗಿದೆ. ಒಟ್ಟಿನಲ್ಲಿ ‘ಮುಕ್ತ’ ಧಾರಾವಾಹಿ ಧರ್ಮ ಹಾಗೂ ರಾಜಕೀಯ ಸುಳಿಗಳಲ್ಲಿ ಸಿಲುಕಿ ನಲುಗುವ ಮನಸ್ಸುಗಳ ಸುತ್ತ ಹೆಣೆದ ಬಲೆಯಂತಿದೆ.

ಕಳೆದ ವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ‘ಮುಕ್ತ’ ಧಾರಾವಾಹಿ ಶೂಟಿಂಗ್‌ಗೆ ಟೇಕಾಫ್‌. ಮೊದಲ ಶಾಟ್‌ ನೋಡಿ ಮಾತಾಡೋಕೆ ಆಜಾದಿ ಬಚಾವೋ ಆಂದೋಲನದ ರಾಜೀವ್‌ ದೀಕ್ಷಿತ್‌ ಬಂದಿದ್ದರು. ಕನ್ನಡದಲ್ಲಿ ಅಂಕಿ- ಅಂಶಗಳ ಹೇಳುತ್ತಾ ಹಿಂದಿಯಲ್ಲಿ ರೈತ ಕಳಕಳಿಯ ಮಾತಾಡಿದ ರಾಜೀವ್‌, ಕಾರು ಸಾಲಕ್ಕೆ 9 ಪ್ರತಿಶತ ಬಡ್ಡಿ ಹಾಕುವ ಬ್ಯಾಂಕುಗಳು ರೈತರಿಗೆ ಕೊಡುವ ಟ್ರ್ಯಾಕ್ಟರ್‌ಗೆ 17 ಪ್ರತಿಶತ ಸಾಲ ಹಾಕುವ ಸಾಮಾಜಿಕ ಅನ್ಯಾಯವನ್ನು ಬಿಚ್ಚಿಟ್ಟು, ಚಪ್ಪಾಳೆ ಗಿಟ್ಟಿಸಿಕೊಂಡರು. ರಾಜೀವ್‌ ದೀಕ್ಷಿತ್‌ ಅವರನ್ನು ಗಾಂಧಿ ಎಂದು ಸೀತಾರಾಂ ಹೇಳಿದ್ದು ಉತ್ಪ್ರೇಕ್ಷೆಯಾಯಿತೇನೋ. ಧಾರಾವಾಹಿಯ ಪಾತ್ರಧಾರಿಯೂ ಆದ ವಿಧಾನಸಭೆಯ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ತಮ್ಮ ದುಂಡುಮುಖದ ತುಂಬ ನಗೆ ತುಂಬಿಕೊಂಡು ನಿಂತಿದ್ದರು.

‘ಮನ್ವಂತರ’ ಧಾರಾವಾಹಿಯ ಪಾತ್ರದಲ್ಲಿ ವಿದೇಶಕ್ಕೆ ಹಾರುವ ಮೂಲಕ ನಿಗೂಢ ರೀತಿಯಲ್ಲಿ ಕಾಣೆಯಾಗಿದ್ದ ಮಾಳವಿಕಾ ಈ ಧಾರಾವಾಹಿಯಲ್ಲಿ ಐಪಿಎಸ್‌ ಅಧಿಕಾರಿಣಿಯಾಗಿ ನಟಿಸುತ್ತಿರುವುದು ವಿಶೇಷ. ಸೀತಾರಾಂ ಮೆಚ್ಚಿನ ನಟ ಸೇತುರಾಂ, ದಿವ್ಯಾ ರಘುರಾಮ್‌, ರಮೇಶ್‌ಕುಮಾರ್‌, ದತ್ತಣ್ಣ, ಮುಖ್ಯಮಂತ್ರಿ ಚಂದ್ರು, ಶ್ರೀನಿವಾಸ ಪ್ರಭು, ಸುಂದರಶ್ರೀ, ಶ್ರೀನಾಥ್‌ ವಸಿಷ್ಠ ಮೊದಲಾದವರ ತಾರಾ ಬಳಗವಿದೆ. ಸಂಗೀತ ಸಿ.ಅಶ್ವಥ್‌. ಛಾಯಾಗ್ರಹಣ ರಾಜೇಂದ್ರ ಸಿಂಗ್‌. ನಿರ್ದೇಶನದ ಜೊತೆಗೆ ಕಥೆ- ಸಂಭಾಷಣೆಯ ಜವಾಬ್ದಾರಿಯನ್ನೂ ಸೇತುರಾಂ ಹೊತ್ತುಕೊಂಡಿದ್ದಾರೆ.

ಇನ್ನೊಂದೆರಡು ವರ್ಷ ಸೀತಾರಾಂ ಬ್ಯುಸಿ- ‘ಮುಕ್ತ’ಗೆ ಪೂರ್ಣ ಮುಕ್ತಿ ಸಿಗುವವರೆಗೆ !


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada