»   » ಸುದೀಪ್‌ ಅರ್ಪಣೆ-ಕನ್ನಡದ ಸ್ವಾತಿಮುತ್ಯಂ

ಸುದೀಪ್‌ ಅರ್ಪಣೆ-ಕನ್ನಡದ ಸ್ವಾತಿಮುತ್ಯಂ

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಬ್ಯೂರೊ
‘ಕಿಚ್ಚ’ ಚಿತ್ರ ಬಿಟ್ಟರೆ ತಮ್ಮ ಕ್ರೆಡಿಟ್ಟಲ್ಲಿ ಅಂಥಾ ದೊಡ್ಡ ಹಿಟ್‌ ಗಿಟ್ಟಿಸಕೊಳ್ಳಲಾಗದ ನಟ ಸುದೀಪ್‌ ಟೈಮು ಅಷ್ಟೇನೂ ಚೆನ್ನಾಗಿಲ್ಲ. ಓಂಪ್ರಕಾಶ್‌ ರಾವ್‌ ನಿರ್ದೇಶಿಸಿರುವ ಕಾರಣಕ್ಕೆ ‘ಪಾರ್ಥ’ ಕೊಂಚ ನಿರೀಕ್ಷೆ ಹುಟ್ಟಿಸಿದೆ ಅನ್ನುವುದು ಬಿಟ್ಟರೆ ಸುದೀಪ್‌ಗೆ ಮಿಕ್ಕೆಲ್ಲ ನಿರಾಸೆಯ ಸುದ್ದಿಗಳೇ. ಕಮಲ ಹಾಸನ್‌ ನಟನೆಯ ‘ನಾಯಗನ್‌’ ಚಿತ್ರದ ರೀಮೇಕಿಗೆ ದುಡ್ಡು ಹಾಕಲು ಮುಂದೆ ಬಂದಿರುವ ಧನರಾಜ್‌ ಯಾಕೋ ಮೀನಮೇಷ ಎಣಿಸುತ್ತಿರುವುದರಿಂದ, ಸುದೀಪ್‌ ನಟಿಸಲಿರುವ ಆ ಚಿತ್ರ ಇನ್ನೂ ಸೆಟ್ಟೇರಿಲ್ಲ.

ತಮ್ಮದು ಅಂತ ಹುಟ್ಟಿಕೊಂಡಿರುವ ಪುಟ್ಟ ಅಭಿಮಾನಿ ಸಂಘವೂ ಮರೆಯುವ ಮುನ್ನ ಇನ್ನೊಂದು ಚೆನ್ನಾದ ಚಿತ್ರದಲ್ಲಿ ನಟಿಸಿ, ಅದನ್ನು ತೆರೆಗೆ ಕಾಣಿಸುವ ತುರ್ತು ಸುದೀಪ್‌ ಅವರಿಗಿದೆ. ಇದು ಆತನಿಗೂ ಗೊತ್ತು. ಅದಕ್ಕೇ ಯಾರ್ಯಾರೋ ನಿರ್ಮಾಪಕರ ಮುಂದೆ ಕೈಚಾಚಿ ಕೂರುವುದಕ್ಕಿಂತ ತಾವೇ ಒಂದು ಚಿತ್ರ ಮಾಡಿ, ನಟಿಸುವುದೇ ಸರಿ ಎಂದು ಸುದೀಪ್‌ ತೀರ್ಮಾನಿಸಿದ್ದಾರೆ.

ಮೊನ್ನೆ ಹೀಗೆ ತೀರ್ಮಾನಿಸಿಕೊಂಡು ನೇರವಾಗಿ ಆಂಧ್ರಪ್ರದೇಶಕ್ಕೆ ಹೋಗಿ 1986ರಲ್ಲಿ ಬಿಡುಗಡೆಯಾಗಿದ್ದ ಕಮಲ ಹಾಸನ್‌ ನಟನೆಯ ‘ಸ್ವಾತಿಮುತ್ಯಂ’ ಚಿತ್ರದ ಹಕ್ಕನ್ನು ಖರೀದಿಸಿಬಿಟ್ಟರು. ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಟ ಪ್ರಶಸ್ತಿ ಗಿಟ್ಟಿಸಿಕೊಂಡು ಆಗ ಸಾಕಷ್ಟು ಸುದ್ದಿಯಾಗಿದ್ದ ಸ್ವಾತಿಮುತ್ಯಂ ತೆಲುಗು ಚಿತ್ರವನ್ನು ಡಾ.ಕೆ.ವಿಶ್ವನಾಥ್‌ ನಿರ್ದೇಶಿಸಿದ್ದರು. ಆಗ ಏಷ್ಯನ್‌ ಚಿತ್ರೋತ್ಸವದಲ್ಲೂ ಚಿತ್ರ ಸಾಕಷ್ಟು ಪ್ರಶಂಸೆಗೆ ಪಾತ್ರವಾಗಿತ್ತು. ಇಳಯರಾಜ ಸುಮಧುರ ಸಂಗೀತ, ನಾಯಕಿಯಾಗಿ ರಾಧಿಕಾ ಮನೋಜ್ಞ ಅಭಿನಯ ಮತ್ತು ಒನ್‌ ಅಂಡ್‌ ಓನ್ಲಿ ಕಮಲ ಹಾಸನ್‌ ಖದರು ಚಿತ್ರವನ್ನು ಉತ್ತುಂಗಕ್ಕೆ ತಲುಪಿಸಿತ್ತು.

ಈಗ ಸುದೀಪ್‌ ತೆಗೆಯಲಿರುವ ರೀಮೇಕ್‌ ಚಿತ್ರಕ್ಕೆ ‘ಸ್ವಾತಿ ಮುತ್ತು’ ಅಂತ ಹೆಸರಿಡಲಿದ್ದಾರೆ. ಚಿತ್ರ ಗೆಲ್ಲಿಸುವ ನಿರ್ದೇಶಕ ಅಂತಲೇ ಹೆಸರಾಗಿರುವ ಡಿ.ರಾಜೇಂದ್ರ ಬಾಬು ಕೈಗೆ ನಿರ್ದೇಶನದ ಹೊಣೆಯನ್ನು ಹೊರಿಸಲು ತೀರ್ಮಾನಿಸಲಾಗಿದೆ. ಸಂಗೀತ ನಿರ್ದೇಶಕ ರಾಜೇಶ್‌ ರಾಮನಾಥನ್‌ ಆದ್ದರಿಂದ ಇಳಯರಾಜಾ ಜೊತೆ ಹೋಲಿಸುವುದು ಬೇಡ. ರಾಧಿಕಾ ಮಟ್ಟಕ್ಕೆ ನಟಿಸಬಲ್ಲ ನಟಿ ಯಾರು ಎಂಬ ಜಿಜ್ಞಾಸೆ ಹುಟ್ಟಿದ್ದು, ಸುದೀಪ್‌ ಬಾಯಲ್ಲಿ ಸೌಂದರ್ಯ ಹಾಗೂ ಮೀನಾ ಹೆಸರು ಕೇಳಿ ಬರುತ್ತಿದೆ. ಇದೇನಾದರೂ ನಿಜವೇ ಆದಲ್ಲಿ ಸುದೀಪ್‌ ತಮಗಿಂತ ಹಿರಿಯ ಹಾಗೂ ಅನುಭವಿ ನಟಿಯ ಜೊತೆ ನಟಿಸುವ ಅಭೂತಪೂರ್ವ ಅವಕಾಶ ಪಡೆದಂತಾಗುತ್ತದೆ.

ಎಲ್ಲಕ್ಕೂ ಮುಖ್ಯವಾಗಿ, ಫಟಾಫಟ್‌ ಚಿತ್ರದ ಶೂಟಿಂಗ್‌ ಮುಗಿಸಿ, ಡಿಸೆಂಬರ್‌ ಹೊತ್ತಿಗೇ ಚಿತ್ರವನ್ನು ತೆರೆಗೆ ತರುವುದು ಸುದೀಪ್‌ ಕನಸು. ಆತುರ ಸ್ವಲ್ಪ ಜಾಸ್ತಿಯೇ ಆಯಿತು ಅಂತ ಕೆಣಕಿದರೆ, ‘ನನ್ನ ಕೆರಿಯರ್ರಿನ ಪ್ರಶ್ನೆ ಗುರು.. ಅರ್ಜೆಂಟಾದರೂ ಪರವಾಗಿಲ್ಲ’ ಅನ್ನೋದು ಸುದೀಪ್‌ ಸಮಜಾಯಿಷಿ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada