»   » ಸೂಪರ್‌ ಸ್ಟಾರ್‌ಯುಗ ಮುಗಿದು ಹೋಯಿತೇ ?

ಸೂಪರ್‌ ಸ್ಟಾರ್‌ಯುಗ ಮುಗಿದು ಹೋಯಿತೇ ?

Subscribe to Filmibeat Kannada
  • ಎಂ. ವಿನೋದಿನಿ
ಮೆಗಾ ಸ್ಟಾರು, ಸೂಪರ್‌ಸ್ಟಾರುಗಳು ಚಿರ ಯುವಕರಾಗಿಯೇ ಉಳಿಯುತ್ತಾರೆಯೇ ? ಕನ್ನಡ, ತೆಲುಗು, ತಮಿಳು ಚಿತ್ರರಂಗದತ್ತ ಒಂದಿಷ್ಟು ಕಣ್ಣು ಹಾಯಿಸಿದರೆ ಹೌದೆನಿಸುತ್ತದೆ.

ವಿಷ್ಣುವರ್ಧನ್‌ ಈಗಲೂ ಕಾಲನ್ನು ಭುಜದ ಮೇಲೆತ್ತಿ ಫೈಟ್‌ ಮಾಡುತ್ತಾರೆ. ಪ್ರೇಮ ಚಂದ್ರಮ ಕೈಗೆ ಸಿಗುವನೇ ಎಂದು ರಾಶಿ, ಪ್ರೇಮಾರಂತಹ ಹೀರೋಯಿನ್‌ ಜೊತೆಗೆ ಹುಡುಗಾಟವಾಡುತ್ತಾ ನಲಿಯುತ್ತಾರೆ. ನಲ್ವತ್ತು ದಾಟಿದ ರವಿಚಂದ್ರನ್‌ ನಾಯಕಿಯ ಬೆನ್ನು ಭುಜ ಹೊಕ್ಕಳಿನ ಮೇಲೆ ಚಿತ್ರ ಬಿಡಿಸುವ ಹುಮ್ಮಸ್ಸನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಶಿವರಾಜ್‌ ಕುಮಾರ್‌ ಕನಸುಗಳು ಈಗಷ್ಟೇ ಚಿಗುರುತ್ತಿರುವಂತಿವೆ. ಆದರೆ ತಮಾಷೆ ನೋಡಿ, ಅಲ್ಲೊಂದು ಇಲ್ಲೊಂದು ಅಪವಾದ ಬಿಟ್ಟರೆ ಚಿಗುರು ಮೀಸೆಯ ಹುಡುಗರು ಒಂದೆರಡು ಚಿತ್ರಗಳಿಗೇ ಏದುಸಿರು ಬಿಡುತ್ತಿದ್ದಾರೆ.

ಅತ್ತ ತಮಿಳಿನಲ್ಲಿ - ರಜನೀಕಾಂತ್‌, ಕಮಲಹಾಸನ್‌, ವಿಜಯಕಾಂತ್‌. ತೆಲುಗಿನಲ್ಲಿ - ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ. ಮಲಯಾಳಂನಲ್ಲಿ - ಮಮ್ಮೂಟ್ಟಿ, ಮೋಹನ್‌ಲಾಲ್‌ ಕೂಡಾ ಹೀರೋಗಳ ಪಟ್ಟದಿಂದ ಕೆಳಗಿಳಿದೇ ಇಲ್ಲ.

ಈ ಚಿರ- ಹೀರೋಗಳು ಸಿನೆಮಾದಲ್ಲಿ ಅಪ್ಪನಾಗಿ, ಅಣ್ಣನಾಗಿ ಮಾವನಾಗಿ ನಟಿಸುವುದು ಮಹಾಪರಾಧವೇ...? ಉದಾಹರಣೆಗೆ ಅಣ್ಣನ ಪಾತ್ರದಲ್ಲಿರುವ ವಿಷ್ಣುವರ್ಧನ್‌ ಸಿನೆಮಾವೊಂದರಲ್ಲಿ ವಿಜಯ ರಾಘವೇಂದ್ರ ಹೀರೋ ಆಗಿ ನಟಿಸಿದರೆ ? ಛೆಛೆ ಎಂಥಾ ಮಾತು. ಅದು ವಿಷ್ಣು ಹೀರೋಯಿಸಂಗೆ ಧಕ್ಕೆ...ಶಾಂತಂ ಪಾಪಂ.

ಈಗ ಲಿಸ್ಟ್‌ನಲ್ಲಿರುವ ಸೂಪರ್‌ ಸ್ಟಾರ್‌ಗಳ ನಂತರ ದಕ್ಷಿಣ ಭಾರತದಲ್ಲಿ ಹೊಸ ಸೂಪರ್‌ ಸ್ಟಾರ್‌ಗಳು ಹುಟ್ಟಿಕೊಂಡದ್ದೇ ಇಲ್ಲ. ರಾಜ್‌ಕುಮಾರ್‌ ನಂತರ ಕನ್ನಡದಲ್ಲಿ ಸೂಪರ್‌ ಸ್ಟಾರ್‌ ಅಂತ ಯಾರನ್ನು ಕರೆಯುತ್ತೀರಿ ? ಕಮಲಹಾಸನ್‌ರ ಬಹುಮುಖ ಪ್ರತಿಭೆಯನ್ನು ಮೀರಿಸುವ ಸ್ಟಾರ್‌ ಒಬ್ಬ ಹುಟ್ಟಿಕೊಂಡನೇ ? ಹಾಗೆ ರಜನೀಕಾಂತ್‌ ದಾಖಲೆ ಮುರಿಯುವಾತ ಬಂದನೇ ? ಉತ್ತರಿಸುವುದು ಕಷ್ಟ ಕಷ್ಟ .

ನಟನೊಬ್ಬನ ಹೆಸರಿನ ಆಕರ್ಷಣೆಯಿಂದಲೇ ಥಿಯೇಟರ್‌ಗೆ ಜನ ಬರುವ ಸಂಪ್ರದಾಯ ಈಗ ಎಲ್ಲೂ ಕಾಣಿಸುವುದಿಲ್ಲ. ತೆಲುಗಿನಲ್ಲಿ ಅಲ್ಪ ಸ್ವಲ್ಪ ಈ ಸಂಪ್ರದಾಯ ಉಳಿದುಕೊಂಡಿದ್ದರೂ ಕನ್ನಡದಲ್ಲಿ ಅಂಥ ದಿನಗಳು ಹೋಗಿ ಬಹಳ ಕಾಲವಾಯಿತು ? ರಾಜ್‌ಕುಮಾರ್‌ ಸಿನೆಮಾ ರಿಲೀಸ್‌ ಎಂಬ ಪ್ರಕ್ರಿಯೆ ರಾಜ್ಯದಲ್ಲಿ ಹುಟ್ಟಿಸುತ್ತಿದ್ದ ಸಂಚಲನೆಯನ್ನು ಈಗ ಯಾವ ಹೀರೋ ಕೂಡ ಹುಟ್ಟಿಸುತ್ತಿಲ್ಲ. ಆರಂಭದಲ್ಲಿ ಉಪೇಂದ್ರರಿಗೆ ಅಂತಹ ಲಕ್ಷಣಗಳಿದ್ದರೂ ಅವರ ಬಂಡವಾಳ ಒಂದೆರಡು ಸಿನೆಮಾದಲ್ಲೇ ಖಾಲಿಯಾಯಿತು.

ಹಾಗಂತ ವೃದ್ಧ ಸೂಪರ್‌ ಸ್ಟಾರ್‌ಗಳ ಸಿನೆಮಾವೂ ಚೆನ್ನಾಗಿ ಓಡುತ್ತದೆ ಅಂತೇನಿಲ್ಲ. 80 ಹಾಗೂ 90ರ ದಶಕದ ಸ್ಟಾರ್‌ ಗುಂಗು ಈಗಿಲ್ಲ. ರಾಜ್‌ ಅಭಿನಯದ ಶಬ್ದವೇಧಿ, ರಜನಿ ಅಭಿನಯದ ಬಾಬಾ ಸಿನೆಮಾಗಳು ವೀಕ್ಷಕರ ಮೇಲೆ ನಿರೀಕ್ಷಿತ ಪರಿಣಾಮ ಬೀರಲಿಲ್ಲ. ವಿಷ್ಣುವಿನ ಎರಡು ಸಿನಿಮಾ ಗೆದ್ದರೂ ಮೂರನೆಯದು ಗೆಲ್ಲುತ್ತದೆನ್ನುವ ಖಾತರಿಯಿಲ್ಲ .

ಅರೆ, ಯಾಕೆ ಸಿನಿಮಾ ಹುಚ್ಚು ಕಡಿಮೆಯಾಗುತ್ತಿದೆ ಎಂದಿರಾ ? ಈಗ ಜನರ ಮುಂದೆ ಸಾಕಷ್ಟು ಅವಕಾಶಗಳಿವೆ ಸ್ವಾಮಿ. ಒಬ್ಬನೇ ನಟನ ಅಭಿಮಾನಿಯಾಗಿ ಜೋತು ಬೀಳುವ ಗುಂಗು ವೀಕ್ಷಕರಲ್ಲಿ ಕಡಿಮೆಯಾಗುತ್ತಿದೆ. ನಟನಿಗಿಂತ ಸಿನಿಮಾದಲ್ಲಿನ ತಾಜಾತನಕ್ಕೆ ವೀಕ್ಷಕ ಒತ್ತು ಕೊಡುತ್ತಿದ್ದಾನೆ. ಹೀರೋ ಯಾರಾದರೇನು, ಕಾಸಿಗೆ ಮೋಸವಾಗದಿದ್ದರೆ ಸೈ ! ಆ ಕಾರಣದಿಂದಲೇ ಇವತ್ತು ವಿಷ್ಣು ಸಿನೆಮಾ ನೋಡುವಾತ ವಿಷ್ಣು ಭಕ್ತನಾಗಿರಬೇಕೆಂದಿಲ್ಲ. ಭಕ್ತಿ ಗೌರವ- ಅಭಿಮಾನದ ಕ್ಷೇತ್ರದಲ್ಲಿ ಸಾಕಷ್ಟು ಆಯ್ಕೆಗಳಿರುತ್ತವೆ. ಆ ಆಯ್ಕೆಯಲ್ಲಿ ಭಾಷೆಯ ತೊಡಕಿಲ್ಲದೇ ವಿವೇಕ್‌ ಒಬೇರಾಯ್‌, ಹೃತಿಕ್‌ ರೋಷನ್‌ ಇರುತ್ತಾನೆ.

ಈಗೇನಿದ್ದರೂ ಚಿತ್ರರಂಗಗಳಲ್ಲಿ ನಂಬರ್‌ ವನ್‌ ಸ್ಥಾನವಷ್ಟೇ ಕಾಣಸಿಗುತ್ತದೆ. ಆ ಸ್ಥಾನ ಮಾತ್ರ ಖಾಲಿ ಖಾಲಿ. ಅದೊಂದು ರೀತಿ ಮಾಯಾಕುರ್ಚಿಯಿದ್ದಂತೆ. ಜೂನಿಯರ್‌ ಎನ್‌ಟಿಆರ್‌, ಅಜಿತ್‌, ದಿಲೀಪ್‌, ಉಪೇಂದ್ರ, ಪುನೀತ್‌ ಹೀಗೆ ಹೀರೋಗಳು ನಂಬರ್‌ ವನ್‌ ಸ್ಥಾನಕ್ಕೆ ಪೈಪೋಟಿ ನಡೆಸುತ್ತಲೇ ಇದ್ದಾರೆ. ಆದರೆ ಅವರಲ್ಲಿ ಸೂಪರ್‌ ಸ್ಟಾರ್‌ ಗುಂಗಾಗಲೀ, ಹಿಂದಿನ ಸೂಪರ್‌ ಸ್ಟಾರ್‌ಗಳ ಸುತ್ತ ಮುತ್ತ ಇದ್ದ ದಂತ ಕತೆಗಳಾಗಲೀ, ಕಟ್ಟಾ ಅಭಿಮಾನಿಗಳ ಮಹಾಪೂರವಾಗಲೀ ಕಾಣಸಿಗುವುದಿಲ್ಲ.

ಹಾಗಾದರೆ ಸೂಪರ್‌ಸ್ಟಾರ್‌ ಯುಗ ಅಂತ್ಯವಾಯಿತೇ ?

ಹೌದೆಂದರೆ ನೀವು ಒಪ್ಪುತ್ತೀರಾ ?


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada