twitter
    For Quick Alerts
    ALLOW NOTIFICATIONS  
    For Daily Alerts

    ಒಂದಷ್ಟು ಮಸ್ತುಮಸ್ತು ಹಾಡುಗಳು!

    By Staff
    |


    ‘ನಮ್ಮ ಸಂಸಾರ, ಇಡ್ಲಿ ಸಾಂಬಾರ, ದೋಸೆ ಎಂಬ ದೈವವೇ ನಮಗಾಧಾರ, ಚಟ್ನಿ ತಂದ ಬಲದಿಂದ ಬಾಳೇ ಬಂಗಾರ’ -ಇಂತಹ ಇನ್ನಷ್ಟು ಹಾಡುಗಳು ನಿಮಗಾಗಿ.. ಜನಪ್ರಿಯ ಹಾಡುಗಳ ಸಾಹಿತ್ಯ ಬದಲಿಸಿ ಹಾಡುವ ಸರಸ ಪ್ರವೃತ್ತಿಯವರಿಗಾಗಿ..

    • ರೇಖಾ ಹೆಗಡೆ ಬಾಳೇಸರ
      ವೆಸ್ಟ್‌ಬೋರೊ, ಮಸ್ಸಾಚ್ಯುಸೆಟ್ಸ್‌.
      [email protected]
    ಹೀಗೊಂದು ಆಯ್ಕೆ : ಒಂದಿಷ್ಟು ಜನಪ್ರಿಯ ಗೀತೆಗಳಿವೆ. ನಿಮಗವು ಬಲು ಇಷ್ಟ. ಆ ಧಾಟಿಯಲ್ಲಿ ಹಾಡೋಣವೆಂದರೆ ಅವುಗಳ ಸಾಹಿತ್ಯ ಕೊಂಚ ಕ್ಲಿಷ್ಟ ಅಥವಾ ಅವೇ ಸಾಲುಗಳನ್ನು ಕೇಳಿ ಕೇಳಿ ಬೇಸರ ಬಂದಿದೆ. ಸರಿ, ನೀವದನ್ನು ನಿಮ್ಮತನಕ್ಕೆ ಒಗ್ಗಿಸಲು ಯತ್ನಿಸುತ್ತೀರಿ. ಹಿಡಿಸದ, ಹಳತಾದ ಸಾಲುಗಳ ಜಾಗದಲ್ಲಿ ಹೊಸ ಸಾಲುಗಳು, ಹೊಸ ಅರ್ಥವನ್ನು ಹೊಂದಿಸುತ್ತೀರಿ.

    ಈಗ ನಿಮ್ಮೆದುರು ಎರಡು ಆಯ್ಕೆಗಳಿವೆ. ಒಂದೋ, ಧಾಟಿಯನ್ನಷ್ಟೇ ಎತ್ತಿಕೊಂಡು ಅದಕ್ಕೆ ಪಂಚಿಂಗ್‌ ಸಾಲುಗಳನ್ನು ಪೋಣಿಸಿ ನಿಮ್ಮ ನಿಮ್ಮಲ್ಲೇ ಹಾಡಿಕೊಂಡು ಗೆಳೆಯರ ಬಳಗದಲ್ಲಿ ಬೆಳಗಬಹುದು. ಇಲ್ಲವೇ, ಬೇರೆ ಭಾಷೆಯ ಹಾಡುಗಳ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಒಂದಕ್ಷರ ಬಿಡದೇ ಅನುವಾದಿಸಿ/ಭಾವಾನುವಾದ ಮಾಡಿ, ಕನ್ನಡ ಸಿನೆಮಾ ನಿರ್ಮಾಪಕರಿಗೆ ಮಾರಿ ಚಿತ್ರ ಸಾಹಿತಿಯಾಗಬಹುದು.

    ತಮಿಳು, ತೆಲುಗು ಲೇಬಲ್‌ ಮದ್ಯಕ್ಕಿಷ್ಟು ಕನ್ನಡತನದ ಕಲಬೆರಕೆ ಮಾಡಿ ಭಟ್ಟಿ ಇಳಿಸಿ, ಕನ್ನಡೀಕರಿಸಿದ ಹೆಸರು ಹಚ್ಚಿ ಹಿಂಬಾಗಿಲಿಂದ ಮನೆಯೊಳು ತಂದು ಮಧುಪಾನ ಮಾಡಿಸುವುದು ಚಿತ್ರಸಾಹಿತಿಗಳಿಗೇ (ಕನಿಷ್ಠ ಕೆಲವರಿಗಾದರೂ) ಸರಿ ಹೊಂದುವ ಕಾರ್ಯ. ಹೀಗಾಗಿ ನೀವು ಎರಡನೆಯದನ್ನು ಅವರಿಗೆ ಬಿಟ್ಟು, ಮೊದಲಿನದನ್ನೇ ಒಪ್ಪಿಕೊಳ್ಳುತ್ತೀರಾದರೆ- ಸುಸ್ವಾಗತ! ದೊಡ್ಡದೊಂದು ಕುಟುಂಬ ನಿಮ್ಮನ್ನು ತನ್ನೊಡಲಲ್ಲಿ ಸೇರಿಸಿಕೊಳ್ಳಲಿದೆ.

    ಇಲ್ಲಿ ಯಾರೂ/ಎಲ್ಲರೂ ಜನಪ್ರಿಯ ಹಾಡುಗಳಿಗೆ ತಮ್ಮದೇ ಪದಜೋಡಣೆ ಮಾಡಲಡ್ಡಿಯಿಲ್ಲ. ಪದ ಬದಲಿಸಿಕೊಂಡ ಪರ್ಯಾಯ ಪದ್ಯವನ್ನು ಕುಟುಂಬದ ಎಲ್ಲರೂ ಸವಿಯುತ್ತಾರೆ. ಆದರೆ ನೆನಪಿಡಿ, ಯಾರಿಗೂ ಆ ಸವಿ ಉಣಬಡಿಸಿದ ಕ್ರೆಡಿಟ್‌ ಸಲ್ಲುವುದಿಲ್ಲ. ಅಸಲಿಗೆ ಕುಟುಂಬಕ್ಕೇ ಒಂದು ಹೆಸರಿಲ್ಲ. ಅದೊಂಥರ ಆಗಾಗ ಹೊಸಬರನ್ನು, ಹೊಸ ವರ್ಷನ್ನನ್ನು ಸೇರಿಸಿಕೊಳ್ಳುತ್ತ, ಹಳತನ್ನು-ಹಳಬರನ್ನು ಕಳಚಿಕೊಳ್ಳುತ್ತ ಸಾಗುವ ಆಟೋ ಅಪ್‌ಗ್ರೇಡಿಂಗ್‌ ಎಂಟಿಟಿ.

    ನನ್ನ ಬಾಲ್ಯದಲ್ಲಿ ಸಮಾನ ವಯಸ್ಕರ, ನಮ್ಮ ತಲೆಮಾರಿನವರ ನಡುವೆ ಇಂಥ ಪರ್ಯಾಯ ಪದ್ಯಗಳು ಭಾರಿ ಚಾಲ್ತಿಯಲ್ಲಿದ್ದವು. ಇವುಗಳಿಗೆಲ್ಲ ಮೂಲ ಸೆಲೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡುಗಳು. ಪದ ಬದಲಿಸುವ ಸ್ವಾತಂತ್ರ್ಯವನ್ನು ಎಲ್ಲರೂ ತೆಗೆದುಕೊಳ್ಳುತ್ತಿದ್ದುದುಂಟು.

    ಚಿಕ್ಕಂದಿನಲ್ಲಿ ನಮ್ಮೂರಿಗೆ ರೆಗ್ಯುಲರ್‌ ಆಗಿ ದ್ಯಾವರು ಎಂಬ ಕೆಲಸಿ ಬರುತ್ತಿದ್ದ. ಅವನೆದುರು ಕುಳಿತಾಕ್ಷಣ ‘ಬೋಳಿಸಲೆಂದೇ ಕೂಪನು ತಂದೆ, ಕೂಪನು ಮಸೆಯಲು ನಾನಿಂದೆ, ತೆಗೆಯೋ ಟೊಪ್ಪಿಯನು, ತಮ್ಮಾ ತೆಗೆಯೋ ಟೊಪ್ಪಿಯನು’ (‘ಎರಡು ಕನಸು’ ಚಿತ್ರದ ‘ಪೂಜಿಸಲೆಂದೇ’ ಧಾಟಿಯಲ್ಲಿ) ಎಂದು ಅವನ ಪರವಾಗಿ ಹಾಡಿ ಮುಗಿಸಿಯೇ ಅಣ್ಣ ತಲೆ ಒಡ್ಡುತ್ತಿದ್ದುದು. ಅತ್ತ ಹಣ್ಣು ಹಣ್ಣು ಮುದುಕ ದ್ಯಾವರು ಬೊಚ್ಚು ಬಾಯಿ ಕಿರಿದು ಮುಸಿ ಮುಸಿ ನಗುತ್ತಿದ್ದರೆ, ಇತ್ತ ಕಲ್ಪನಾ ಪ್ರೇಮಿ ಅಮ್ಮ ‘ಇದೇ ಹಾಡೇ ಬೇಕಾಗಿತ್ತ ನಿಂಗೆ’ ಎಂದು ಸಿಡಿಮಿಡಿಗೊಳ್ಳುತ್ತಿದ್ದಳು.

    ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ‘ವಿರಹ ನೂರು ನೂರು ತರಹ’ ಹಾಡನ್ನು ಚಹಕ್ಕೆ ಸಮೀಕರಿಸಿ ಹಾಡುತ್ತಿದ್ದೆವು. ಒಮ್ಮೆ ನನ್ನಕ್ಕ ಒಬ್ಬಳು ತನ್ನ ಚಿಕ್ಕ ವಯಸ್ಸಿನ ಮಗಳೊಂದಿಗೆ ನೆಂಟರ ಮನೆಗೆ ಹೋಗಿದ್ದಳು. ಮಾತಿನ ಮಧ್ಯೆ ಅತಿಥಿಗಳಿಗೆ ಚಹ ಬಂತು. ಒಂದು ತೊಟ್ಟು ಗುಟುಕರಿಸಿದ ಮಗಳು ತಟ್ಟನೆ ಲೋಟ ಕುಕ್ಕಿ ಗಟ್ಟಿ ದನಿಯಲ್ಲಿ ‘ಈ ಚಹ ನೀರು ನೀರು ತರಹ, ಈ ಚಹ ಕುಡಿವುದೆನ್ನೆಯ ಹಣೆ ಬರಹ’ ಎಂದು ಹಾಡಿದಳು. ಮಗಳನ್ನು ಕರೆದುಕೊಂಡು ಹೋದದ್ದಕ್ಕಾಗಿ ತನ್ನನ್ನೇ ಶಪಿಸಿಕೊಳ್ಳುತ್ತ ಅಕ್ಕ ಲಗುಬಗೆಯಿಂದ ಮನೆಗೆ ಹೊರಟಳು.

    ಇಡ್ಲಿ-ಸಾಂಬಾರು ಮಾಡಿದಾಗೆಲ್ಲ ‘ನಮ್ಮ ಸಂಸಾರ, ಇಡ್ಲಿ ಸಾಂಬಾರ, ದೋಸೆ ಎಂಬ ದೈವವೇ ನಮಗಾಧಾರ, ಚಟ್ನಿ ತಂದ ಬಲದಿಂದ ಬಾಳೇ ಬಂಗಾರ’ ಹಿಮ್ಮೇಳದೊಂದಿಗೆ ಉಂಡಾಗಲೇ ಅದರ ಸವಿ ಮೈಗೆ ಹತ್ತುತ್ತಿತ್ತು. ಇನ್ನು ಕಾಯಿ ತಂಬುಳಿ ಬಡಿಸಿದಾಗೆಲ್ಲ ‘ಬಂಧನ’ ಚಿತ್ರದ ‘ಪ್ರೇಮದಾ ಕಾದಂಬರಿ’ ಧಾಟಿಯಲ್ಲಿ ‘ಪ್ರೀತಿಯ ಕಾಯ್‌ುತಂಬುಳಿ, ಬೀಸಿದೆ ಒಳ್‌ಕಲ್ಲಲಿ, ಅನ್ನ ಮುಗಿದೇ ಹೋದರೂ ಮುಗಿಯದಿರಲಿ ತಂಬುಳಿ’ ಎಂದು ಹಾಡುತ್ತ ಅದನ್ನು ಕಲಸುತ್ತಿದ್ದರೆ ತಂಬುಳಿಯ ರುಚಿಯೊಂದಿಗೆ ರಸಿಕತೆಯ ಒಗ್ಗರಣೆ ಬೆರೆತು ಪರಿಮಳ ನೆತ್ತಿಗೇರಿ ಮತ್ತೇರಿಸುತ್ತಿತ್ತು. ಇದೇ ‘ಬಂಧನ’ ಚಿತ್ರದ ‘ನೂರೊಂದು ನೆನಪು’ ಕೈ ಕೊಟ್ಟಾಗ ಇರಲಿ ಎಂದು ‘ನೂರೊಂದು ಬಸ್ಸು ಹಳಿಯಾಳದಿಂದ, ಹಾಳಾಗಿ ಬಂತು ಅಪಘಾತದಿಂದ’ ಎಂಬ ಬ್ಯಾಕಪ್‌ ಮೆಮೊರಿ ತಯಾರಾಗಿತ್ತು.

    ಹಿಂದಿ ಚಿತ್ರಗೀತೆಗಳ ಪದ್ಯಬಂಡಿ ಆಡುವಾಗೆಲ್ಲ ಒಮ್ಮೆ ‘ಸ’ ಬಂದರೆ ‘ತೇಜಾಬ್‌’ ಚಿತ್ರದ ‘ಸೋ ಗಯಾ ಯೇ ಜಹಾಂ’ ಹಾಡು ಗ್ಯಾರಂಟಿ. ಮತ್ತೊಮ್ಮೆ ‘ಸ’ ಬಂದಾಗ ಅದೇ ಧಾಟಿಯಲ್ಲಿ ‘ಸೋ ಗಯಾ ಯೇ ಗಧಾ, ಸೋ ಗಯಾ ವೋ ಗಧಾ, ಸೋ ಗಯೀ ಹೈ ಸಾರೇ ಬಕರಿಯಾಂ, ಸೋ ಗಯಾ ಹೈ ಕುತ್ತಾ ಭೌಭೌ’ ಎಂದು ಹಿನ್ನೆಲೆ ಸಂಗೀತದ ಸಮೇತ ಹಾಡು ಹೊರಬರುತ್ತಿತ್ತು. ಆಮೇಲಿನ ‘ಏ, ಈ ಹಾಡು ಇಲ್ಲ, ಹೀಂಗೆಲ್ಲಾ (ವಿ)ಚಿತ್ರಗೀತೆ ಹಾಡೋ ಹಾಗಿಲ್ಲ.......’ಲ್ಲಲ್ಲಲ್ಲಾಪವೂ ಅಷ್ಟೇ ಗ್ಯಾರಂಟಿ.

    Friday, April 19, 2024, 14:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X