twitter
    For Quick Alerts
    ALLOW NOTIFICATIONS  
    For Daily Alerts

    ಒಂದಷ್ಟು ಮಸ್ತುಮಸ್ತು ಹಾಡುಗಳು!

    By Staff
    |

    ನಾನು ಜವಾಹರ ನವೋದಯ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಒಂದು ಸಂಜೆ ವಿದ್ಯುತ್‌ ಕಡಿತಗೊಂಡ ಸಂದರ್ಭ. ಕತ್ತಲೆ ಡಾರ್ಮಿಟರಿಯಲ್ಲಿ ಎಲ್ಲರೂ ತಣ್ಣಗೆ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಒಬ್ಬಾಕೆ ‘ಹೇ, ನಂಗೇನೋ ಕಚ್ಚಿ ಬಿಡ್ತಲ್ಲೆ, ದೀಪ ತಗಂಡು ಬಾರೆ’ ಎಂದು ‘ಹಮ್‌ರಾಝ್‌’ ಚಿತ್ರದ ‘ಹೇ ನೀಲೆ ಗಗನ್‌ ಕೆ ತಲೆ’ ಅನುಸರಿಸಿ ಹಾಡಿದಳು. ಕತ್ತಲೊಂದಿಗೆ ಕವಿದಿದ್ದ ಮೌನದ ತೆರೆಯನ್ನು ಆ ಹಾಡು ಏಕ್‌ದಂ ಸರಿಸಿ, ತಿಳಿ ನಗೆಯ ತಿಂಗಳಬೆಳಕನ್ನು ಹರಡಿತ್ತು. ಆ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಎರಡು ಬ್ಯಾಚ್‌ಗಳಲ್ಲಿ ಊಟಕ್ಕೆ ಹೋಗುತ್ತಿದ್ದೆವು.

    ಎರಡನೇ ಬ್ಯಾಚ್‌ನವರು ಊಟ ಶುರು ಮಾಡುವ ಹೊತ್ತಿಗೆ ಸಾಂಬಾರೆಂಬುದು ಹೋಳು, ಬೇಳೆಯನ್ನೆಲ್ಲ ಕಳೆದುಕೊಂಡು ತಿಳಿಸಾರಾಗಿರುತ್ತಿತ್ತು. ಅನ್ನದ ಮೇಲಿಷ್ಟು ಸುರಿದುಕೊಂಡು ಬಂದ ಸಾರಲ್ಲಿ ಅಪರೂಪಕ್ಕೊಮ್ಮೆ ಬೇಳೆ ಕಂಡಿತೆಂದರೆ ಬಾಯಿಯ ಬಾವಿಯಲ್ಲಿ ಜೊಲ್ಲಿನ ಜೊತೆ ಈ ಹಾಡೂ ಚಿಮ್ಮುತ್ತಿತ್ತು- ‘ದೇಖಾ ಹೈ ಪೆಹಲೀ ಬಾರ್‌, ಸಾಂಬಾರ್‌ ಮೇ ತುಅರ್‌ ಕಾ ದಾಲ್‌, ಅಬ್‌ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್‌ ಕೋ ಕರಾರ್‌, ಪೇಟ್‌ ಭರ್‌ ತುಜೇ ಖಾನೆ ಕೋ ಕಬ್‌ ಸೇ ಥೀ ಮೈ ಬೇಕರಾರ್‌, ಅಬ್‌ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್‌ ಕೋ ಕರಾರ್‌’- ಗೆಳತಿಯರ ಪೈಕಿ ಒಬ್ಬಾಕೆ ಇದನ್ನು ಹಾಡಿದರೆ ಉಳಿದವರಿಂದ ‘ಸಾಜನ್‌’ ಚಿತ್ರದ ಆ ಹಾಡಿನ ಹಿನ್ನಲೆ ಸಂಗೀತದ ಮಾದರಿಯಲ್ಲೇ ‘ಪಾಂಚ್‌ ಕಾ ಪಚಾಸ್‌, ಪಾಂಚ್‌ ಕಾ ಪಚಾಸ್‌’ ಎಂಬ ಕೋರಸ್‌.

    ಸಾಮಾನ್ಯವಾಗಿ ಇಂಥ ಪರ್ಯಾಯ ಪದ್ಯಗಳೆಲ್ಲ ಚಿತ್ರಗೀತೆಗಳನ್ನೇ ಅನುಸರಿಸುತ್ತಿದ್ದರೂ ಅಪರೂಪಕ್ಕೆ ಕೆಲವು ರಾಷ್ಟ್ರೀಯ ಗೀತೆಗಳೂ ಪದ ಬದಲು ಪ್ರಕ್ರಿಯೆಗೆ ಒಳಗಾಗುತ್ತಿದ್ದವು. ಕೆಲವೊಂದು ಮಜವಾಗಿದ್ದರೆ ವಿಶೇಷವಾಗಿ ಒಂದು ಪದ್ಯ ‘ಸಜ’ವಾಗಿತ್ತು.

    ನವೋದಯಲ್ಲಿ ರಸಾಯನ ವಿಜ್ಞಾನದ ಶಿಕ್ಷಕಿಯಾಗಿದ್ದ ಸಾರಾ ಎಂಬುವವರು ‘ಶಿಕ್ಷಾ’ದಷ್ಟೇ ‘ಶಿಕ್ಷೆ’ಗೂ ಪ್ರಾಮುಖ್ಯತೆ ನೀಡುತ್ತಿದ್ದ ಘಾಟಿ ವ್ಯಕ್ತಿ. ಉನ್ನತ ಮಟ್ಟದ ಬೋಧನಾ ಸಾಮರ್ಥ್ಯದ ಜೊತೆಗೆ ಸಿಟ್ಟಿನ ಪ್ರತಿರೂಪದಂತಿದ್ದ ಅವರ ಕಲಿಸುವಿಕೆ, ‘ಕೋಲಿಸು’ವಿಕೆ ಕೈಕೈ ಹಿಡಿದು ಸಾಗುತ್ತಿದ್ದವು. ಒಮ್ಮೆ ಏಳು ತಿಂಗಳ ಗರ್ಭಿಣಿಯಾಗಿದ್ದ ಅವರು ಇನ್ನೇನು ನಮ್ಮ ತರಗತಿಯನ್ನು ಪ್ರವೇಶಿಸಬೇಕು ಅನ್ನುವಷ್ಟರಲ್ಲಿ ‘ಸಾರೇ ಜಹಾಂ ಸೇ ಅಚ್ಛಾ’ದ ಪರ್ಯಾಯ ಪದ್ಯ ಅವರ ಕಿವಿಗೆ ಬಿತ್ತು.

    ಧುಮುಧುಮಿಸುತ್ತಲೇ ಒಳ ಬಂದ ಸಾರಾ ಮೇಡಂ ‘ಗುಡ್‌ ಮಾರ್ನಿಂಗ್‌’ ಗಿಳಿಪಾಠ ಒಪ್ಪಿಸಿದ ನಮ್ಮತ್ತ ಚೂಪನೆಯ ದೃಷ್ಟಿ ಬೀರಿ ‘ಗರ್ಲ್ಸ್‌ ಸಿಡೌನ್‌’ ಎಂದರು. ಪ್ರಶ್ನಾರ್ಥಕ ನೋಟ ಹೊತ್ತ ಹುಡುಗರತ್ತ ಕೆಂಗಣ್ಣು ಬೀರಿದವರೇ ‘ಯಾರು ಅದನ್ನು ಹಾಡಿದವರು’ ಎಂದರು. ಹುಡುಗರ ಅಯೋಮಯ ದೃಷ್ಟಿ ಒಬ್ಬರಿಂದೊಬ್ಬರಿಗೆ ಹರಿದು ಕಗ್ಗಂಟಾಯಿತೇ ಹೊರತು ‘‘ಇವರೇನು ಕೇಳುತ್ತಿದ್ದಾರೆ, ಆ ‘ಅದು’ ಏನು’’ ಎಂಬುದು ತಲೆಬುಡ ತಿಳಿಯಲಿಲ್ಲ. ತಮ್ಮ ಕೋಪದ ಬೆಂಕಿಯಲ್ಲಿ ಸುಡಲೊಂದು ಸೂಕ್ತ ಕಟ್ಟಿಗೆ ಸಿಗದೇ ಸಿಡಿಮಿಡಿಗೊಂಡ ಅವರು ತರಗತಿಯ ಎಲ್ಲಾ ಹುಡುಗರನ್ನೂ ಒಂದಿಡೀ ತಾಸು ಹೊರಗೆ ನಿಲ್ಲಿಸಿದರು.

    Friday, March 29, 2024, 11:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X