twitter
    For Quick Alerts
    ALLOW NOTIFICATIONS  
    For Daily Alerts

    ಒಂದಷ್ಟು ಮಸ್ತುಮಸ್ತು ಹಾಡುಗಳು!

    By Staff
    |

    ಆಮೇಲೆ ತಿಳಿಯಿತು : ಮೇಡಂ ತರಗತಿಯನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಡಾರ್ಮಿಟರಿಯ ಹುಡುಗರು ‘ಸಾರೇ ಜಹಾಂ ಸೇ ಅಚ್ಛಾ, ಸಾರಾ ಕೆ ಪೇಟ್‌ ಮೇ ಬಚ್ಚಾ’ ಎಂದು (ಕೊಂಚ ಕೀಳು ಮಟ್ಟದಲ್ಲಿಯೇ) ಹಾಡಿದ್ದರು. ಎದುರಿಗೇ ಕುಳಿತಿದ್ದ ನಮ್ಮ ತರಗತಿಯ ಹುಡುಗರೇ ಅದನ್ನು ಹಾಡಿರಬೇಕು ಎಂದುಕೊಂಡ ಅವರು ಒಳಗೆ ಬಂದವರೇ ಶಿಕ್ಷಿಸಲು ಮುಂದಾದರು. ಮೊಸರು ತಿಂದಿದ್ದು ಮಂಗ; ಮುಸುಡಿ ಮೇಲೆ ಬರೆ ಬಿದ್ದಿದ್ದು ಮೇಕೆಗೆ.

    ಕನ್ನಡ ಶಾಲೆಯಲ್ಲಿ ಓದುವಾಗ ‘ವಂದೇ ಮಾತರಂ’ ಬಲ್ಲದ ಮಕ್ಕಳಿಗೂ ‘ವಂದೇ ಮಾಸ್ತರಂ’ ಮುದ್ದಾಂ ಬರುತ್ತಿತ್ತು. ಮಾಸ್ತರರ ಬೆನ್ನ ಹಿಂದೆ ‘ವ(ಒ)ಂದೇ ಮಾಸ್ತರಂ, ಹೊಡಿತಂ, ಬಡಿತಂ, ಕಿವಿ ಚಟ್ಟೆ ಹಿಂಡುತಂ’ ಎಂದು ಹಾಡಿಕೊಂಡರೆ ತಿಂದ ಹೊಡೆತಕ್ಕಿಷ್ಟು ನ್ಯಾಯ ಸಲ್ಲಿಸಿದಂತೆ ಭಾಸ.

    ಹೆಚ್ಚಿನ ಹಾಡುಗಳು ತಿಳಿ ಹಾಸ್ಯದಲ್ಲಿ ಮಿಂದೆದ್ದು ಬಂದು ಆಹ್ಲಾದಮಯ ನಗೆಗಂಧವನ್ನು ಹರಡುವಂತಿದ್ದರೆ ಒಮ್ಮೊಮ್ಮೆ ಕೆಲವು ಪೋಲಿತನದ ಕೊಚ್ಚೆಯಲ್ಲಿ ಉರುಳಾಡಿ ಉಸಿರುಕಟ್ಟಿಸುವಂತಿದ್ದುದು ಖರೆ. ‘ಬಣ್ಣಾ ನನ್ನ ಒಲವಿನ ಬಣ್ಣಾ’, ‘ಶಿಲೆಗಳು ಸಂಗೀತವ ಹಾಡಿವೆ’, ‘ಧರಣಿ ಮಂಡಲ ಮಧ್ಯದೊಳಗೆ’, ‘ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’ದಂಥ ಮಧುರ ಹಾಡುಗಳು ವಿರೂಪಗೊಂಡು ಮುಜುಗರ ಮೂಡಿಸುವ ರೂಪ ಪಡೆದದ್ದುಂಟು. ಆ (ವಿ)ರೂಪ ಪ್ರಸ್ತುತಪಡಿಸಲಾರೆ, ಕ್ಷಮಿಸಿ. ಸಂಸ್ಕೃತದ ಕೆಲವು ಶ್ಲೋಕಗಳಿಗೂ ಇದೇ ಗತಿ.

    ಸಾಮಾನ್ಯವಾಗಿ ಈ ಹಾಸ್ಯಮಯ ಪರ್ಯಾಯ ಪದ್ಯಗಳೆಲ್ಲ ಪಲ್ಲವಿಗಷ್ಟೇ ಸೀಮಿತವಾಗಿರುತ್ತಿದ್ದವು, ಚರಣಗಳ ತುದಿವರೆಗೆ ಯಾವ ಕವಿ(ಪಿ)ಯೂ ಚರಣ ಬೆಳೆಸುತ್ತಿದ್ದುದಿಲ್ಲ. ಆದರೂ ಅಪರೂಪಕ್ಕೆ ಕೆಲವು ಅಜ್ಞಾತ ಕವಿಗಳು ಚಿತ್ರಗೀತೆಗಳ ಧಾಟಿಯಲ್ಲಿ ಅರ್ಥವತ್ತಾದ ಭಕ್ತಿಗೀತೆಗಳನ್ನು ರಚಿಸಿದ್ದುಂಟು. ಮಜವೆಂದರೆ (ಸ)ರಸವತ್ತಾದ ಚರಣಗಳನ್ನು ಮೂಸಿಯೂ ನೋಡದೇ ಮುಖ ಸಿಂಡರಿಸುತ್ತಿದ್ದ ಹಿರಿಯರೆಲ್ಲ ಥಳಥಳಿಸುವ ‘ಬೆಳ್ಳಿ’ ಬಾಟಲಿಯಲ್ಲಿ ಬಂದ ಭಕ್ತಿ ಸುಧೆಯನ್ನು ಚಪ್ಪರಿಸಿ ಸವಿಯುತ್ತಿದ್ದರು.

    ‘ದೋ ಆಂಖೆ ಬಾರಾ ಹಾಥ್‌’ನ ‘ಏ ಮಾಲಿಕ್‌ ತೇರೆ ಬಂದೆ ಹಮ್‌’ ಧಾಟಿಯ ‘ಮಂಗಳೇಶ ಮಹೇಶ ನಮೋ’, ‘ಬೀಸ್‌ ಸಾಲ್‌ ಬಾದ್‌’ನ ‘ಕಹೀಂ ದೀಪ್‌ ಜಲೆ ಕಹೀಂ ದಿಲ್‌’ ಧಾಟಿಯ ‘ಗುರುದೇವ ಪರಿಪೂರ್ಣ’, ‘ಕವಿರತ್ನ ಕಾಳಿದಾಸ’ದ ‘ಸದಾ ಕಣ್ಣಲಿ’ ಹಿಂಬಾಲಿಸಿ ಬಂದ ‘ಗುರುವೆ ನಿನ್ನೆಯ ನಾಮವ’, ‘ಕಸ್ತೂರಿ ನಿವಾಸ’ದ ‘ಎಲ್ಲೇ ಇರು’ ಅಂಗಿ ತೊಟ್ಟ ‘ಗೌರಿ ಪ್ರಿಯ, ತೋರೋ ದಯ’ಗಳೆಲ್ಲ ಹೀಗೆ ಡಿಸೈನರ್‌ ಅಚ್ಚಿನಲ್ಲಿ ಅದ್ದಿ ತೆಗೆದ ಲೋಕಲ್‌ ಭಜನೆಗಳು. ಸಾಂಪ್ರದಾಯಿಕ ಭಜನೆ ಕಾರ್ಯಕ್ರಮವೊಂದರಲ್ಲಿ ಇಂಥ ಹಾಡೊಂದನ್ನು ಹಾಡಿದರೆ ನ್ಯೂಯಾರ್ಕ್‌ ಬೀದಿಯಲ್ಲಿ ಸೀರೆಯುಟ್ಟು ನಡೆಯುವ ಯುವತಿಯ ರೀತಿಯಲ್ಲಿ ಗಮನ ಸೆಳೆಯುತ್ತಿದ್ದವು (ಬೆಂಗಳೂರಿನ ಬ್ರಿಗೇಡ್‌ ರಸ್ತೆ ಎನ್ನಲಾರೆ, ಅಲ್ಲಿ ಸೀರೆ ಅಪರೂಪವಾದರೂ ಅದನ್ನುಟ್ಟರೆ ಯಾರೂ ಕಣ್ಣೆತ್ತಿ ನೋಡಲಾರರು).

    ಸೀಮಿತ ಅವಕಾಶದಲ್ಲಿ ಪ್ರತಿಭೆಯ ಪ್ರಭೆಯನ್ನು ಹೊರಸೂಸಲು ಅವಕಾಶ ಮಾಡಿಕೊಡುವ ಈ ಪರ್ಯಾಯ ಪದ್ಯಗಳಿಗೆ ಒರಿಜಿನಲ್‌ ಚಿತ್ರಗೀತೆಗಳಿಗಿರುವ ಸಾರ್ವಕಾಲಿಕ ಜನಪ್ರಿಯತೆಯ, ರಾಷ್ಟ್ರೀಯ ಗೀತೆಗಳು ಹೊದ್ದ ಇನ್ಶೂರ್ಡ್‌ ಗೌರವದ, ಶ್ಲೋಕಗಳ ಪಾವಿತ್ರ್ಯ, ಪರಂಪರೆಯ ಅಗ್ಗಳಿಕೆಯ ಅಥವಾ ಭಾವಗೀತೆಗಳ ಸಾಹಿತ್ಯಿಕ ಘನತೆಯ, ಘಮಲಿನ ವಿಶೇಷ ಸವಲತ್ತುಗಳೊಂದೂ ಇಲ್ಲ. ಆದರೂ ತುಂಟ ಎಸ್ಸೆಮ್ಮೆಸ್‌ಗಳಂತೆ ತುಟಿಯ ಮೇಲೊಂದು ತುಂತುರು ನಗೆ ಅರಳಿಸಿ, ತಲೆ ಹತ್ತಿ ಕುಳಿತ ಚಿಂತೆಯ ತೊಲೆಯನ್ನು ಇಳಿಸಿ ಹಗುರ ಮಾಡಿ, ಪುಟ್ಟ ಪುಟ್ಟ ರಸಗಳಿಗೆಗಳನ್ನು ಸೃಷ್ಟಿಸುವ ಸೊಗಸು ಇದೆ.

    ಕೊನೆಗೊಂದು ಕೊಸರು: ಹಲವು ಸಲ ‘ ಚಲ್ತೇ ಚಲ್ತೇ’ ಚಿತ್ರದ ಶೀರ್ಷಿಕೆ ಗೀತೆ- ‘ಚಲ್ತೇ ಚಲ್ತೇ ಮೇರೆ ಯೇ ಗೀತ್‌ ಯಾದ್‌ ರಖನಾ’ದೊಂದಿಗೆ ಸ್ನೇಹ ಸಮಾರಂಭಗಳಿಗೆ ಮುಕ್ತಾಯ ಹಾಡುವುದುಂಟು. ಈ ಗೀತೆಗೊಬ್ಬ ಮಲಸೋದರಿ. ಆಕೆಯೂ ಸಮಾರೋಪ ಸಂಗೀತದಲ್ಲಿ ಸಮರ್ಥಳು. ಆಕೆಯನ್ನು ಮುಂದಿಟ್ಟುಕೊಂಡು ಇತ್ತಲಿಂದ ಬೈ ಬೈ, ಸಲಾಂ- ‘ಇರಲಿ, ನೆನಪಿರಲಿ, ನಮ್ಮ ಗೆಳೆತನದ ಸವಿ ನೆನಪಿರಲಿ, ಆ ನೆನಪೇ ಶಾಶ್ವತವು, ಅದುವೆ ಚಿರನೂತನವು’.

    ನೀವೂ ಹೀಗೆ ಹಾಡುತ್ತೀರಾ?

    Saturday, April 20, 2024, 6:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X