»   » ಗೌರೀಶಂಕರ್‌ : ಕೆಂಡದ ಮಳೆಯಲ್ಲಿ ಅರಳಿದ ಮೈಸೂರು ಮಲ್ಲಿಗೆ

ಗೌರೀಶಂಕರ್‌ : ಕೆಂಡದ ಮಳೆಯಲ್ಲಿ ಅರಳಿದ ಮೈಸೂರು ಮಲ್ಲಿಗೆ

Posted By: Staff
Subscribe to Filmibeat Kannada

ಸಾವು ಎದುರಿಗೆ ಕುಳಿತದ್ದು ಅವರಿಗೆ ಗೊತ್ತಿತ್ತು. ಆದರೂ ಕೈಯಲ್ಲಿ ಹಿಡಿದ ಗ್ಲಾಸನ್ನು ಅವರು ಕೆಳಗಿಡಲಿಲ್ಲ. ಇಡುವ ಮನಸೂ ಮಾಡಲಿಲ್ಲ. ಬಹುಶಃ ಅವರಿಗೆ ಬದುಕೇ ಬೇಡವಾಗಿತ್ತೇನೋ. ಹಾಗಂತ ಯಾವತ್ತೂ, ಯಾರೊಂದಿಗೂ ವೈಯಕ್ತಿಕ ನೋವನ್ನು ಹಂಚಿಕೊಳ್ಳಲಿಲ್ಲ. ಅದನ್ನು ಭರಿಸುವ, ನಿಭಾಯಿಸುವ ಮತ್ತು ಇದ್ದಷ್ಟು ದಿನ ಉಸಿರಾಡುವಂತೆ ಮಾಡಿದ್ದು ವಿಸ್ಕಿ ತುಂಬಿದ ಗ್ಲಾಸು!

ಇವರು ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ಛಾಯಾಗ್ರಾಹಕ ಎನ್ನುವುದರಲ್ಲಿ ಎರಡು ಮಾತಿಲ್ಲ. 'ಹೊಸ ಬೆಳಕು ' ಚಿತ್ರದಿಂದ ಡಾ.ರಾಜಕುಮಾರ್‌ ಕಂಪನಿ ಸೇರಿದ ಅವರಿಗೆ ಮತ್ತೆ ಹಿಂತಿರುಗಿ ನೋಡುವ ಪ್ರಮೇಯ ಬರಲಿಲ್ಲ. ರಾಜ್‌ ನಟಿಸಿದ ಬಹುತೇಕ ಚಿತ್ರಗಳಿಗೆ ಅವರು ಕೆಲಸ ಮಾಡಿದರು. ಅನೇಕ ಚಿತ್ರಗಳಿಗೆ ಅವರು ಕೆಲಸ ಮಾಡಿದರು. ಅನೇಕ ಚಿತ್ರಗಳಿಗೆ ಪ್ರಶಸ್ತಿ ಪಡೆದರು. ದೊರೈ-ಭಗವಾನ್‌, ರಾಜೇಂದ್ರ ಸಿಂಗ್‌ ಬಾಬು, ಎಂ.ಎಸ್‌.ರಾಜಶೇಖರ್‌ ಸೇರಿದಂತೆ ಅನೇಕ ಖ್ಯಾತ ನಿರ್ದೇಶಕರ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ದುಡಿದರು.

'ಹೊಸ ಬೆಳಕು" ಚಿತ್ರದ ಎರಡನೇ ನಾಯಕಿ ಮಮತಾ ರಾವ್‌ ಅವರನ್ನು ಪ್ರೀತಿಸಿ ಮದುವೆಯಾದರು. ಅವರಿಬ್ಬರ ಮಗಳೇ ಇಂದಿನ ಬೇಡಿಕೆಯ ತಾರೆ ರಕ್ಷಿತಾ. ಆದರೆ ಅವರ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ ಅಥವಾ ಬೇರೆ ಇನ್ನೇನು ಕಾರಣವಾಯಿತೋ ಗೌರಿ-ಮಮತಾ ಬೇರೆಯಾದರು. ಮಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೌರಿ ಅವಳ ಹುಟ್ಟುಹಬ್ಬಕ್ಕೆ ಮರೆಯದೆ ಕಾಣಿಕೆ ಕೊಡುತ್ತಿದ್ದರು. ನೋಡಬೇಕೆನಿಸಿದಾಗ ಮನೆಗೆ ಕರೆಸುತ್ತಿದ್ದರು.

ಏನೇ ಆದರೂ ಒಂಟಿತನ ಅವರನ್ನು ಕಾಡುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅವರು ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಬಂದ ಮರುದಿನ 'ಮಾಮೂಲಿ" ಹವ್ಯಾಸಕ್ಕೆ ಇಳಿಯುತ್ತಿದ್ದರು.

70ರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು ಡಾ.ರಾಜ್‌ ನಟಿಸಿದ ಅನೇಕ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಆಸ್ಟ್ರೇಲಿಯಾದ ಟಾಂಪೋವನ್‌ರ ಜತೆ ಸಹಾಯಕರಾಗಿ ಚಂಡಮಾರುತ ಚಿತ್ರದಿಂದ ವೃತ್ತಿ ಆರಂಭಿಸಿದ ಗೌರಿ, ಪಟ್ಟಾಭಿರಾಮನ್‌ರ ಶೃಂಗಾರ ಮಾಸದೊಂದಿಗೆ ಸ್ವತಂತ್ರ ಛಾಯಾಗ್ರಾಹಕರಾಗಿ ಹೊರಹೊಮ್ಮಿದರು.

ಸ್ಪಂದನ, ಮಿಂಚಿನ ಓಟ, ಅರಿವು, ಧ್ರುವತಾರೆ, ಓಂ ಹಾಗೂ ಮೈಸೂರು ಮಲ್ಲಿಗೆ ಚಿತ್ರಗಳಲ್ಲಿ ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕರೆಂಬ ಹೆಗ್ಗಳಿಕೆ ಇವರದು.

ಹೊಸಬೆಳಕು, ಸಮಯದ ಗೊಂಬೆ, ಆಲೆಮನೆ, ಬೆಂಕಿಯ ಬಲೆ, ಶೃಂಗಾರ ಮಾಸ, ಹೃದಯ ಹಾಡಿತು, ಮುಂಗಾರಿನ ಮಿಂಚು, ಜನ್ಮ ಜನ್ಮದ ಅನುಬಂಧ ಮತ್ತು ಮಿಂಚಿನ ಓಟ ಸೇರಿದಂತೆ ಸುಮಾರು 50ಚಿತ್ರಗಳಿಗೆ ಛಾಯಾಗ್ರಹಣ ನೀಡಿದ್ದಾರೆ. ಕೆಂಡದ ಮಳೆ, ಆಟ ಬೊಂಬಾಟ ಮತ್ತು ಏಳು ಸುತ್ತಿನ ಕೋಟೆ ಚಿತ್ರಗಳನ್ನು ನಿರ್ದೇಶಿಸಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಶಂಕರನಾಗ್‌, ಸೋಮಶೇಖರ್‌, ಸಿಂಗೀತಂ ಶ್ರೀನಿವಾಸರಾವ್‌, ದೊರೈ-ಭಗವಾನ್‌, ರಾಜೇಂದ್ರ ಸಿಂಗ್‌ ಬಾಬು ಸೇರಿದಂತೆ ಪ್ರಸಿದ್ಧ ನಿರ್ದೇಶಕರ ಬಳಿ ಕೆಲಸ ಮಾಡಿದ ಖ್ಯಾತಿ ಇವರದು. ಇವರು ಛಾಯಾಗ್ರಹಣ ಮಾಡಿದ ಕೊನೆಯ ಚಿತ್ರ 'ಕಾಂಚನ ಗಂಗಾ".

ಕೆಲಸದ ವಿಷಯದಲ್ಲಿ ಅವರು ರಾಕ್ಷಸ. ಸರಿರಾತ್ರಿಯಲ್ಲಿ ನಿದ್ದೆ ಮಾಡಿದರೂ ಬೆಳಗ್ಗೆ ಆರು ಗಂಟೆಗೆ ಕಲರ್‌ ಬಟ್ಟೆ ತೊಟ್ಟು ತಲೆಗೆ ಕೌಬಾಯ್‌ ಕ್ಯಾಪ್‌ ಹಾಕಿಕೊಂಡು ಕೆಲಸಕ್ಕೆ ಹಾಜರಾಗುತ್ತಿದ್ದರು. ಬಿಳಿಚಿಕೊಂಡ ಕೋಲಿಗೆ ರಂಗುರಂಗಿನ ಬಟ್ಟೆ ತೊಟ್ಟಂತಿರುತ್ತಿದ್ದ ಅವರು ಕ್ಯಾಮರಾ ಹಿಡಿದು ನಿಂತರೆ ಅಗುಳಿನಷ್ಟೂ ಅಲುಗಾಡುತ್ತಿರಲಿಲ್ಲ. ಅವರನ್ನು ಇಷ್ಟು ವರ್ಷ, ಈ ಕ್ಷಣದವರೆಗೆ ಜೀವಂತವಾಗಿಟ್ಟದ್ದು ಅದೇ ಕ್ಯಾಮರಾ ಪ್ರೀತಿ ಇರಬೇಕು.

(ಸ್ನೇಹಸೇತು : ವಿಜಯ ಕರ್ನಾಟಕ )

English summary
Pen portrait of Gowri Shankar Cinematographer by Mahesh Devashetty. Gowrishankar passes away in Bangalore on Nov. 16, 2004
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada