»   » ವಿಷ್ಣು ಈಗ ಮಾಸ್ಟರ್ ಅಲ್ಲ ಸ್ಕೂಲ್ ಮಾಸ್ಟರ್

ವಿಷ್ಣು ಈಗ ಮಾಸ್ಟರ್ ಅಲ್ಲ ಸ್ಕೂಲ್ ಮಾಸ್ಟರ್

Posted By: *ನಿಸ್ಮಿತಾ
Subscribe to Filmibeat Kannada
Vishnuvardhan
ಹುಟ್ಟಿದಾಗ ಇಟ್ಟ ಹೆಸರನ್ನು ವ್ಯಕ್ತಿಯೊಬ್ಬ ಸಂಖ್ಯಾಶಾಸ್ತ್ರಕ್ಕೆ ಅನುಗುಣವಾಗಿಲ್ಲವೆಂದು ಬದಲಿಸಿದ ಹಾಗೆ ನಮ್ಮ ಗೋಲ್ಡನ್ ಲಯನ್ ಫಿಲಂ ಡಿವಿಜನ್ ಅವರ 'ಮಾಸ್ಟರ್ ಚಿತ್ರಕ್ಕೂ ಸ್ಕೂಲ್‌ಮಾಸ್ಟರ್ ಎಂದು ಮರುನಾಮಕರಣ ಮಾಡಲಾಗಿದೆ ಹಾಗೂ ಕನ್ನಡದಲ್ಲಿ ಹಿಂದೆ ಬಂದಿದ್ದ ಚಿತ್ರದ ಹೆಸರೇ ಪುನರಾವರ್ತನೆ ಮಾಡಿಕೊಂಡ ಸಾಲಿಗೆ ಮಾಸ್ಟರ್ ಸೇರಿದೆ.

50ವರ್ಷಗಳ ಹಿಂದೆ ಬಿ.ಆರ್.ಪಂತುಲು 'ಸ್ಕೂಲ್‌ಮಾಸ್ಟರ್ ಚಿತ್ರವನ್ನು ನಿರ್ಮಿಸಿದ್ದು ಎಲ್ಲರಿಗೂ ತಿಳಿದ ಸಂಗತಿ. ವಿಶಿಷ್ಟ ಕತೆಯೊಂದಿಗೆ ಸುಮಧುರ ಹಾಡುಗಳನ್ನೊಳಗೊಂಡ ಚಿತ್ರವದು. ಅರ್ಧ ಶತಕದಾಚೆ ನಿರ್ಮಾಣವಾಗಿದ್ದ ಚಿತ್ರದ ಶೀರ್ಷಿಕೆಯನ್ನು ನಮ್ಮ ಚಿತ್ರಕ್ಕೆ ಪುನಃ ಬಳಸಿಕೊಂಡಿರುವುದು ನಮಗೆ ಸಂತಸ ತಂದಿದೆ ಎಂದು ನಿರ್ಮಾಪಕರು ತಿಳಿಸಿದರೆ ಆ ಸ್ಕೂಲ್‌ಮಾಸ್ಟರ್ ಕತೆಗೂ ನಮ್ಮ ಚಿತ್ರಕ್ಕೂ ಸಂಬಂಧವಿಲ್ಲ. ನಮ್ಮ ಚಿತ್ರಕತೆಯೇ ವಿಭಿನ್ನ ಎನ್ನುತ್ತಾರೆ ನಿರ್ದೇಶಕ ದಿನೇಶ್‌ಬಾಬು.

ಸ್ಕೂಲ್ ಮಾಸ್ಟರ್ ಚಿತ್ರದ ಕಥೆಯನ್ನು ಅನಾಮತ್ತಾಗಿ ಎತ್ತಿಕೊಂಡು ಹಿಂದಿಯಲ್ಲಿ ಅಮಿತಾಬ್, ಹೇಮಮಾಲಿನಿ, ಸಲ್ಮಾನ್ ಖಾನ್ ಅಭಿನಯದಲ್ಲಿ 'ಭಾಗ್ ಬಾನ್' ಚಿತ್ರ ಮಾಡಲಾಯಿತು. ನಂತರ ಈ ಚಿತ್ರವನ್ನು ಇಟ್ಟುಕೊಂಡು ಕನ್ನಡದಲ್ಲಿ ವಿಜಯಲಕ್ಷ್ಮಿ ಸಿಂಗ್ ಅವರು 'ಈ ಬಂಧನ' ಎಂಬ ಚಿತ್ರಮಾಡಿದರು.

ಹಿಂದೆ ಒರಟ ಐ ಲವ್ ಯು ಚಿತ್ರವನ್ನು ನಿರ್ಮಿಸಿದ್ದ ಸಿ.ಮನೋಹರ್ ಈ ಚಿತ್ರದ ನಿರ್ಮಾಪಕರು. ನಿರ್ದೇಶಕರೇ ಕತೆ, ಚಿತ್ರಕತೆ, ಸಂಭಾಷಣೆ. ಛಾಯಾಗ್ರಹಣ ಕಾರ್ಯಗಳ ಜವಾಬ್ದಾರಿ ಹೊತ್ತಿರುವ ಈ ಚಿತ್ರಕ್ಕೆ ಮುಸ್ಸಂಜೆ ಮಾತು ಖ್ಯಾತಿಯ ವಿ.ಶ್ರೀಧರ್ ಅವರ ಸಂಗೀತವಿದೆ.ಜ್ಞಾನೇಶ್ ಸಂಕಲನ, ಚಿನ್ನಿಪ್ರಕಾಶ್ ನೃತ್ಯ, ಪಳನಿರಾಜ್, ರವಿವರ್ಮ ಸಾಹಸ, ಇಸ್ಮಾಯಿಲ್ ಕಲೆ ಹಾಗೂ ವಿಜಯಕುಮಾರ್, ಚಂಪಕಧಾಮ ಬಾಬು ಅವರ ನಿರ್ಮಾಣ ನಿರ್ವಹಣೆ 'ಮಾಸ್ಟರ್'ಗಿದೆ. ಡಾ.ವಿಷ್ಣುವರ್ಧನ್, ಸುಹಾಸಿನಿ ಅವರ ಅನುಪಮಜೋಡಿ, 'ಮಾತಾಡ್ ಮಾತಾಡು ಮಲ್ಲಿಗೆ'ಚಿತ್ರದ ನಂತರ ಮತ್ತೆ ಒಂದಾಗಿದೆ. ಉಳಿದ ತಾರಾಬಳಗದಲ್ಲಿ ದೇವರಾಜ್, ಅವಿನಾಶ್, ಚಿತ್ರಾಶೆಣೈ, ಮುಖೇಶ್‌ರಿಷಿ, ಬೇಬಿ ಬೃಂದಾ, ಬೇಬಿ ಪ್ರೇರಣಾ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada