»   » ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಷ್ಣು, ಉಪ್ಪಿ, ಶ್ರುತಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಷ್ಣು, ಉಪ್ಪಿ, ಶ್ರುತಿ

Posted By:
Subscribe to Filmibeat Kannada

ಸೆ.18 ಕನ್ನಡ ಚಿತ್ರಪ್ರೇಮಿಗಳಿಗೆ ಹಬ್ಬದ ದಿನ. ಅದರಲ್ಲೂ ಸೂಪರ್ ಸ್ಟಾರ್ ಉಪೇಂದ್ರ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳು ಸಂಭ್ರಮಿಸುವ ದಿನ. ಕಾರಣ ನಟರಾದ ವಿಷ್ಣುವರ್ಧನ್, ಉಪೇಂದ್ರ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇವರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಹಿರಿಯ ನಟಿ ಶ್ರುತಿ ಸಹ ಹಂಚಿಕೊಂಡರು.

ಕುಣಿಗಲ್ ನಲ್ಲಿ ವಿಷ್ಣು ಸಂಭ್ರಮ
ವಿಷ್ಣುವರ್ಧನ್ ಪ್ರತಿ ಸಲದಂತೆ ಈ ಸಲವು ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಈ ಸಲದ ತಮ್ಮ ಹುಟ್ಟುಹಬ್ಬವನ್ನು ಕುಣಿಗಲ್ ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ತುಮಕೂರು ಜಿಲ್ಲೆಯ ವಿಷ್ಣು ಸೇನೆ ಅಭಿಮಾನಿಗಳ ಸಂಘ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ವಿಷ್ಣು ಇಂದು ತಮ್ಮ ಕುಟುಂಬದರೊಂದಿಗೆ ಮೈಸೂರಿಗೆ ತೆರಳಲಿದ್ದಾರೆ. ಅಲ್ಲಿ ವಿಷ್ಣು ಅಭಿಮಾನಿಗಳು ಆಯೋಜಿಸಿರುವ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ನಂತರ ಅವರು ತಮ್ಮ ಕುಟುಂಬದರೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳಲಿದ್ದಾರೆ.

ಆತ್ಮೀಯರನ್ನು ಕಳೆದುಕೊಂಡಿರುವ ದುಃಖದ ಕಾರಣ ಹಾಗೂ ತಮ್ಮ ಸಂಬಂಧಿಕರ ಆರೋಗ್ಯ ಸರಿಯಿಲ್ಲದ ಕಾರಣ ತಾವು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವುದಾಗಿ ವಿಷ್ಣು ತಿಳಿಸಿದರು. ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಬೆಂಗಳೂರಿನ ವಿಷ್ಣು ಅಭಿಮಾನಿಗಳು ಆಯೋಜಿಸಿದ್ದಾರೆ. ಕಾರ್ಯಕ್ರಮದ ಭಾಗವಾಗಿ ರೋಗಿಗಳಿಗೆ ಹಣ್ಣುಹಂಪಲು ಹಾಗೂ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಿದ್ದಾರೆ. ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ವಿಷ್ಣು ಅಭಿಮಾನಿಗಳು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ.

ರುಪ್ಪಿ ಎಸ್ಟೇಟ್ ನಲ್ಲಿ ಉಪ್ಪಿ ಸಂಭ್ರಮ
ಗುರುವಾರ ಬೆಳಗ್ಗೆ ಉಪೇಂದ್ರ ಅವರು ಬನಶಂಕರಿ ಎರಡನೇ ಹಂತದ ತಮ್ಮ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಪತ್ನಿ ಪ್ರಿಯಾಂಕ, ಇಬ್ಬರು ಮಕ್ಕಳು, ಬಂಧುಬಳಗ ಹಾಗೂ ಅಭಿಮಾನಿಗಳ ನಡುವೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಂಗಳೂರು ಹೊರ ವಲಯದ ರಾಮೊಹಳ್ಳಿಯಲ್ಲಿನ ರುಪ್ಪಿ ಎಸ್ಟೇಟ್ ನಲ್ಲಿ ಇಂದು ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅವರ ಬಹುನಿರೀಕ್ಷಿತ 'ಬುದ್ಧಿವಂತ' ಚಿತ್ರ ಇಂದು ಬಿಡುಗಡೆಯಾಗಬಹುದು ಎಂದು ಅಭಿಮಾನಿಗಳು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಸಾಧು ಕೋಕಿಲ ನಿರ್ದೇಶನದಲ್ಲಿ ಮುನಿರತ್ನ ನಿರ್ಮಿಸುತ್ತಿರುವ ಉಪೇಂದ್ರರ ಹೊಸ ಚಿತ್ರ ಇಂದು ಸೆಟ್ಟೇರಲಿದೆ. ಬನಶಂಕರಿಯ ಉಪೇಂದ್ರ ಮನೆಯ ಮುಂದೆ ಇಂದು ಅಭಿಮಾನಿಗಳ ಜಾತ್ರೆಯೇ ನೆರೆದಿತ್ತು.

ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ರುತಿ
ಉಪೇಂದ್ರ ಮತ್ತು ವಿಷ್ಣು ಜೊತೆಗೆ ನಟಿ ಶ್ರುತಿ ಸಹ ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಬಸವೇಶ್ವರನಗರದಲ್ಲಿನ ತಮ್ಮ ಮನೆಯಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಿಕೊಂಡರು.ನಂತರ ಅವರು ತಮ್ಮ ಕುಟುಂಬದವರೊಂದಿಗೆ ಕಳೆದರು. ಶ್ರುತಿ ನಟಿಸಿರುವ ಹೊಚ್ಚ ಹೊಸ ಚಿತ್ರ 'ಅಕ್ಕ ತಂಗಿ' ಯ ಮೊದಲ ಪ್ರತಿ ಸಿದ್ಧವಾಗಿದ್ದು ಅಕ್ಟೋಬರ್ ನಲ್ಲಿ ಚಿತ್ರ ತೆರೆ ಕಾಣಲಿದೆ. ಈ ಚಿತ್ರವನ್ನು ಮಹೇಂದರ್ ನಿರ್ದೇಶಿಸಿದ್ದು ರಮೇಶ್ ಯಾದವ್ ನಿರ್ಮಿಸಿದ್ದಾರೆ.

(ದಟ್ಸ್ ಕನ್ನಡ ಸಿನಿ ವಾರ್ತೆ)
41ರ ಉಪ್ಪಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
58ನೇ ವಸಂತಕ್ಕೆ ಕಾಲಿಟ್ಟ ವಿಷ್ಣುಗೆ ವಿಶ್ ಮಾಡಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada