»   » 'ಏಕಲವ್ಯ'ನಿಗಾಗಿ ವಿಶಿಷ್ಟ ಹಾದಿ ತುಳಿದ ಬರಗೂರು

'ಏಕಲವ್ಯ'ನಿಗಾಗಿ ವಿಶಿಷ್ಟ ಹಾದಿ ತುಳಿದ ಬರಗೂರು

Subscribe to Filmibeat Kannada

ಕರ್ನಾಟಕ ಚಲನಚಿತ್ರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೊಸ ಪ್ರಯೋಗಕ್ಕೆ ಅಣಿಯಾಗಿದೆ! ಭಾರತೀಯ ಚಿತ್ರೋದ್ಯಮದಲ್ಲೂ ಈ ಹಾದಿ ತುಳಿದ ಉದಾಹರಣೆಗಳಿಲ್ಲ ಎಂದರೆ ನಿಮಗೆ ಇನ್ನೂ ಅಚ್ಚರಿ ಎನಿಸಬಹುದು. ಬಂಡಾಯ ಸಾಹಿತಿ, ನಿರ್ದೇಶಕ ಹಾಗೂ ನಿರ್ಮಾಪಕ ಪ್ರೊ.ಬರಗೂರು ರಾಮಚಂದ್ರಪ್ಪ ತಮ್ಮ 'ಏಕಲವ್ಯ' ಚಿತ್ರಕ್ಕಾಗಿ ಈ ಸಾಹಸಕ್ಕೆ ಕೈಹಾಕಿದ್ದಾರೆ.

'ಏಕಲವ್ಯ'ನ ಸಂದೇಶ ಬಿತ್ತಲು ಕರ್ನಾಟಕದ ಹಳ್ಳಿಹಳ್ಳಿಗಳಲ್ಲೂ ಪ್ರಚಾರ ಕಾರ್ಯ ಕೈಗೊಂಡು ರಾಜ್ಯದ ಮೂಲೆ ಮೂಲೆಗಳಿಗೂ ತಮ್ಮ ಚಿತ್ರವನ್ನು ತಲುಪಿಸಲು ನಿರ್ಧರಿಸಿದ್ದಾರೆ. ಅಂದರೆ ಪ್ರೇಕ್ಷಕರ ಬಳಿಗೆ ಚಿತ್ರವನ್ನು ಕೊಂಡೊಯ್ಯಲಿದ್ದಾರೆ. ಕರ್ನಾಟಕದ ಹಳ್ಳಿ, ಪಟ್ಟಣ, ನಗರಗಳಲ್ಲಿ 100 ದಿನಗಳಲ್ಲಿ 100 ಪ್ರದರ್ಶನಗಳನ್ನು ಏರ್ಪಡಿಸಲು ಪಣ ತೊಟ್ಟಿದ್ದಾರೆ.

ಚಿತ್ರಪ್ರೇಮಿಗಳ ಮೂಲಕ ಸಿನಿಮಾ ಟಿಕೆಟ್ ಗಳನ್ನು ಮುಂಗಡವಾಗಿ ಮಾರಾಟ ಮಾಡಿ ಆಯಾ ಪ್ರದೇಶಗಳಲ್ಲೇ ಪ್ರದರ್ಶನ ಏರ್ಪಡಿಸಲಾಗುತ್ತದೆ. ಉತ್ತ್ತಮ ಗುಣಮಟ್ಟದ ಚಿತ್ರಗಳನ್ನು ಇಷ್ಟಪಡುವ ಪ್ರೇಕ್ಷಕರನ್ನು ಉದ್ದೇಶವಾಗಿಟ್ಟುಕೊಂಡು ಬರಗೂರರು ಈ ಯೋಜನೆಗೆ ಕೈಹಾಕಿದ್ದಾರೆ. ಈ ಮೂಲಕವಾದರೂ ಹಾಕಿದ ಬಂಡವಾಳಕ್ಕೆ ಮೋಸ ಆಗದಂತೆ, ಅಷ್ಟೋ ಇಷ್ಟೋ ಲಾಭ ಗಳಿಸಬಹುದು ಎಂಬ ಹೊಸ ಮಾರುಕಟ್ಟೆ ಸಿದ್ಧಾಂತ ಅವರದ್ದು. ಉತ್ತಮ ಗುಣಮಟ್ಟದ ಚಿತ್ರಗಳನ್ನು ಜನರ ಬಳಿಗೆ ಕೊಂಡೊಯ್ಯುವ ಗುರಿ ಸಹ ನೆರವೇರಿದಂತಾಗುತ್ತದೆ. ಅಂದರೆ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯಲು ನಿರ್ಧರಿಸಿದ್ದಾರೆ!

ಅಕ್ಟೋಬರ್ ತಿಂಗಳ 19ರಿಂದ ಬರಗೂರರ ಏಕಲವ್ಯನ ಯಾತ್ರೆ ಚಾಲನೆ ಪಡೆಯಲಿದೆ. ಏಕಲವ್ಯನ ಯಾತ್ರೆಯನ್ನು ತೆಲುಗು ನಿರ್ದೇಶಕ ಮಾಧಲ ರಂಗಾ ರಾವ್ ಉದ್ಘಾಟಿಸಲಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಬಿಜಾಪುರ, ಬೀದರ್, ಗುಲ್ಬರ್ಗ, ಬಳ್ಳಾರಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಯಾತ್ರೆ ಸಾಗಲಿದೆ. ಬರಗೂರರ ತವರು ಜಿಲ್ಲೆ ತುಮಕೂರಿನಲ್ಲಿ 100 ದಿನಗಳಲ್ಲಿ 100 ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ.

ಏಕಲವ್ಯ ಚಿತ್ರದ ತಾರಾಗಣದಲ್ಲಿ ಶೃತಿ ನಾಯ್ಡು, ರಾಘವ್, ಸುಂದರ್ ರಾಜ್, ಮಾಸ್ಟರ್ ಹರ್ಷಿತ್, ಮಾಸ್ಟರ್ ಅನುಷಾ, ಆರ್.ನಾಗೇಶ್, ರಾಧಾ ರಾಮಚಂದ್ರ, ಕಶ್ಯಪ್ ಮುಂತಾದವರು ಇದ್ದಾರೆ. ದೇವನಾಗೇಶ್, ಚಂದ್ರಕಲಾ ರಮೇಶ್, ಮಲ್ಲಿಕಾರ್ಜುನ ರೆಡ್ಡಿ, ಅನುರಾಧ, ಸತ್ಯಾನಂದ, ಪುಷ್ಪಲತಾ ಸಿದ್ಧಾರ್ಥ್, ನಾಗಲಕ್ಷ್ಮಿ ವೀರೇಶ್, ಲಕ್ಷ್ಮಿನಾರಾಯಣ 'ಅಭಿರುಚಿ ಚಿತ್ರ'ದ ನಿರ್ಮಾಪಕರು. ಛಾಯಾಗ್ರಹಣ ನಾಗರಾಜ್ ಆಧವಾನಿ ಅವರದು. ಸುರೇಶ್ ಅರಸ್ ಸಂಕಲನವಿರುವ 'ಏಕಲವ್ಯ'ನಿಗೆ ವಿ.ಮನೋಹರ್ ಅವರ ಸಂಗೀತ ನಿರ್ದೇಶನವಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada