ಹೃದಯ ಹೇಳಿದ ಹಾಗೆ ಕೇಳುವವನೆ 'ಪರಮಾತ್ಮ'
ಕನ್ನಡ ಚಿತ್ರರಂಗದ ಬಾಕ್ಸಾಫೀಸಿನ 'ಪರಮಾತ್ಮ' ಆಗಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಕನ್ನಡದ ಅತ್ಯಂತ ಜನಪ್ರಿಯ ನಿರ್ದೇಶಕ ಯೋಗರಾಜ್ ಭಟ್ ಅವರ ಪ್ರಥಮ ಚಿತ್ರ 'ಪರಮಾತ್ಮ' ಲಗುಬಗೆಯಿಂದ ಚಿತ್ರೀಕರಣ ನಡೆಸುತ್ತಿದೆ. ಎಂಭತ್ತರಿಂದ ತೊಂಭತ್ತು ದಿನಗಳ ಚಿತ್ರೀಕರಣದ ಯೋಜನೆ ಹಾಕಿರುವ ಈ ತಂಡ ಈಗಾಗಲೇ ಕೆಲವು ಭಾಗದ ಚಿತ್ರೀಕರಣ ಮಾಡಿದೆ.
"ಪರಮಾತ್ಮ" ಚಿತ್ರೀಕರಣ ಸಕಲೇಶಪುರದಲ್ಲಿ ಪ್ರಾರಂಭವಾಗಿ ಬೆಂಗಳೂರಿನಲ್ಲಿ ಕೆಲವು ದಿನಗಳ ಚಿತ್ರೀಕರಣ ಮುಗಿಸಿ ಇದೀಗ ತೀರ್ಥಹಳ್ಳಿ ತಲುಪಿದೆ. ಈ ಸುಂದರ ಪರಿಸರದಲ್ಲಿ "ಪರಮಾತ್ಮ" 10 ದಿನಗಳ ಕಾಲ ಏಪ್ರಿಲ್ 15ರಿಂದ ಚಿತ್ರೀಕರಣವನ್ನು ಕ್ಯಾಮರಾದಲ್ಲಿ ತುಂಬಿಸಿಕೊಳ್ಳಲಿದೆ.
ಇದುವರೆವಿಗಿನ ವಿಶೇಷ ಏನಪ್ಪ ಅಂದರೆ ಸಕಲೇಶಪುರದ ಘಾಟ್ ಸೆಕ್ಷನ್‌ನಲ್ಲಿ ಹೆಲಿಕಾಪ್ಟರ್ ಬಳಸಿ ಹೈದರಾಬಾದಿನಿಂದ ತರಿಸಿದ ಟ್ರಾಕ್ ವಾಹನಗಳನ್ನು ಬಳಸಿ ಅದ್ಧೂರಿ ವೆಚ್ಚದಲ್ಲಿ ಚಿತ್ರೀಕರಣ ಮಾಡಲಾಯಿತು. ಒಂದೂವರೆ ದಿವಸದ ಹೆಲಿಕಾಪ್ಟರ್ ಬಾಡಿಗೆ ಹತ್ತುಲಕ್ಷಕ್ಕೂ ಹೆಚ್ಚು ತಗುಲಿತು ಎಂದು ಚಿತ್ರತಂಡದ ಸುಬ್ರಮಣ್ಯ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಭಾಗದ ಚಿತ್ರೀಕರಣದಲ್ಲಿ ಒಂದು ಭರ್ಜರಿ ಸಾಹಸ ಸನ್ನಿವೇಶದ ಜೊತೆಗೆ ಕಾವೇರಿ ಚಿತ್ರಮಂದಿರದಲ್ಲಿ ನಾಯಕ ಪುನೀತ್ ರಾಜ್‌ಕುಮಾರ್ ಹಾಗೂ ದೀಪ ಸನ್ನಿಧಿ ಭೇಟಿಯಾಗುವ ಸನ್ನಿವೇಶಗಳಿಗೆ ಸಾವಿರದಇನ್ನೂರು ಜನಗಳ ಸಹಾಯದೊಂದಿಗೆ ಚಿತ್ರಿಸಿಕೊಳ್ಳಲಾಯಿತು. ಇದೇ ಅಲ್ಲದೆ ಕೆಲವು ದೃಶ್ಯಗಳನ್ನು ಖಾಸಗಿ ಅಪಾರ್ಟಮೆಂಟ್‌ನಲ್ಲಿ ಐಂದ್ರಿತಾ ರೇ ಹಾಗೂ ಸ್ನೇಹಿತರ ದೃಶ್ಯಗಳನ್ನು ಸೆರೆ ಹಿಡಿಯಲಾಯಿತು.
'ಹೃದಯ ಹೇಳಿದ ಹಾಗೆ ಕೇಳುವವನೆ ಈ ಪರಮಾತ್ಮ' ಎಂದು ಸಾರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕರಿಗೆ ಸೂರಿ ಸಾಥ್ ನೀಡಿದ್ದಾರೆ. ಹರಿಕೃಷ್ಣ 5 ಹಾಡುಗಳಿಗೆ ರಾಗ ಸಂಯೋಜನೆಯನ್ನು ಈಗಾಗಲೇ ಬಹುತೇಕ ಸಿದ್ದಮಾಡಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಾಹಕರಾಗಿದ್ದಾರೆ. ಸುಬ್ರಹ್ಮಣ್ಯ.ಎಂ.ಕೆ ಕಾರ್ಯಕಾರಿ ನಿರ್ಮಾಪಕರ. 'ಪರಮಾತ್ಮ" ಚಿತ್ರದ ತಾರಾಗಣದಲ್ಲಿ ಪುನೀತ್ ರಾಜ್‌ಕುಮಾರ್, ದೀಪ ಸನ್ನಿಧಿ, ಐಂದ್ರಿತಾ ರೇ, ರಮ್ಯ ಬಾರ್ನ, ಅವಿನಾಶ್, ರಂಗಾಯಣ ರಘು, ದತ್ತಣ್ಣ ಹಾಗೂ ಇನ್ನಿತರರು ಇದ್ದಾರೆ.


Click it and Unblock the Notifications











