»   » ದೇವರಾಯನ ದುರ್ಗದಲ್ಲಿ ಕಾಸರವಳ್ಳಿ ಚಿತ್ರಸಂವಾದ

ದೇವರಾಯನ ದುರ್ಗದಲ್ಲಿ ಕಾಸರವಳ್ಳಿ ಚಿತ್ರಸಂವಾದ

Posted By:
Subscribe to Filmibeat Kannada
Girish Kasaravalli, a caricature
ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳಬೇಕೆಂದರೆ ವೃತ್ತಪತ್ರಿಕೆಗಳಲ್ಲಿ ಬರುವ ಲೇಖನಗಳು, ಚಿತ್ರ ವಿಮರ್ಶೆಗಳೇ ಸದ್ಯಕ್ಕೆ ದಕ್ಕುತ್ತಿರುವ ಚಿತ್ರ ಸಾಹಿತ್ಯ. ಚಿತ್ರರಂಗದ ಬೆಳವಣಿಗೆಗೆ ಅನುಕೂಲವಾಗುವಂಥ ಯಾವ ಚರ್ಚೆ, ಸಂವಾದಗಳೂ ಇತ್ತೀಚೆಗೆ ನಡೆಯುತ್ತಿಲ್ಲ. ನಡೆಯುತ್ತಿದ್ದರೂ ವೈಚಾರಿಕತೆಗೆ ಮೌಲ್ಯ ನೀಡುವ ಪ್ರೇಕ್ಷಕರನ್ನು ತಲುಪುತ್ತಿಲ್ಲ. ಲಾಂಗು-ಮಚ್ಚು, ಪ್ರೀತಿ-ಪ್ರೇಮದ ಕಥೆಯುಳ್ಳ ಚಿತ್ರಗಳ ಭರಾಟೆಯಲ್ಲಿ ಗಿರೀಶ್ ಕಾಸರವಳ್ಳಿ, ಬಿವಿ ಕಾರಂತ್, ಜಿವಿ ಅಯ್ಯರ್ ಮೊದಲಾದವರ ಚಿತ್ರಗಳು ಅಸಡ್ಡೆಗೆ ಗುರಿಯಾಗುತ್ತಿವೆ.

ಇದಕ್ಕೆ ಪೂರಕವೆಂಬಂತೆ ಬೀದಿಬೀದಿಗಳಲ್ಲಿ ಎಲ್ಲ ಬಗೆಯ ಚಿತ್ರಗಳು ಜನರಿಗೆ ದೊರೆಯುತ್ತಿವೆ. ಪೈರಸಿಗಂತೂ ಲಂಗುಲಗಾಮಿಲ್ಲದಂತಾಗಿದೆ. ಅಶ್ಲೀಲ ಚಿತ್ರಗಳಂತೂ ಚಿಕ್ಕಮಕ್ಕಳಿಗೂ ದಕ್ಕುವಂತಾಗಿದೆ. ಇನ್ನು ಮಕ್ಕಳೊಂದಿಗೆ ಕುಳಿತು ಸೃಜನಶೀಲ ಚಿತ್ರ ನೋಡುವ ಮಾತೆಲ್ಲಿ ಬಂತು? ಕಾರಂತ್ ಮತ್ತು ಅಯ್ಯರ್ ಕಾಲದ ಚಿತ್ರಗಳಿರಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿರುವ ಸೃಜನಶೀಲ ಚಿತ್ರಗಳ ಬಗ್ಗೆ ಇಂದಿನ ಪೀಳಿಗೆಯ ಯುವಜನತೆಯಲ್ಲಿ ಎಳ್ಳಷ್ಟೂ ಆಸಕ್ತಿಯಿಲ್ಲದಿರುವುದು ಕಟುವಾಸ್ತವ.

ಇಂಥ ಸಂದರ್ಭದಲ್ಲಿ ಸತ್ವಯುತ ಕನ್ನಡ ಚಿತ್ರಗಳನ್ನು ತೆಗೆಯುವ ಮಹತ್ವ, ಕನ್ನಡ ಚಿತ್ರರಂಗ ಬೆಳೆಯುತ್ತಿರುವ ದಿಕ್ಕನ್ನು ಚರ್ಚಿಸಲು ಸಂವಾದ.ಕಾಂ ದೇವರಾಯನ ದುರ್ಗದಲ್ಲಿ ಎರಡು ದಿನಗಳ ಸಂವಾದವನ್ನು ನವೆಂಬರ್ 22 ಮತ್ತು 23ರಂದು ಹಮ್ಮಿಕೊಂಡಿದೆ. ಭಾರತೀಯ ಚಿತ್ರರಂಗದ ಅತ್ಯಂತ ಪ್ರಮುಖ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ- ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ' ವಿಷಯ ಕುರಿತು ಚಿಂತನಾ ಕೂಟವನ್ನು ಆಯೋಜಿಸಲಾಗಿದೆ. ಸಿನಿಮಾ ಕೂಡ ಒಂದು ಅಕಾಡೆಮಿಕಲ್ ಆದಂತಹ ಶಿಸ್ತನ್ನು ಬಯಸುತ್ತದೆ ಎಂದು ನಂಬಿರುವವರು ಖಂಡಿತ ಭಾಗಿಯಾಗಬಹುದು. ವಾದ, ವಿವಾದ, ಚರ್ಚೆಗಳಿಗೆ ಪೂರ್ಣ ಅವಕಾಶವಿದೆ.

ಉಪನ್ಯಾಸಕರ ಸಂಕ್ಷಿಪ್ತ ಪರಿಚಯ:

ದತ್ತಾತ್ರೇಯ ಸುಬ್ರಹ್ಮಣ್ಯ : ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿಯ ವ್ಯಾಸಂಗವನ್ನು ಮುಗಿಸಿ, ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ಆಫ್ ಲಾದಲ್ಲಿ ಪ್ರಾಧ್ಯಾಪಕ ವೃತ್ತಿಗೆ ರಾಜಿನಾಮೆ ನೀಡಿ ಈಗ ಅನೇಕ ಸರ್ಕಾರೇತರ ಸಂಸ್ಥೆಗಳಿಗೆ ತಮ್ಮ ಸಮಾಲೋಚನೆಯನ್ನು ನೀಡುತ್ತಿರುವ ದತ್ತಾತ್ರೇಯ ಅವರು ಶೈಕ್ಷಣಿಕ ವಲಯದಲ್ಲಿ ಸಂಶೋಧನೆಯಲ್ಲಿ ನುರಿತವರು. ಸಾಹಿತ್ಯವನ್ನು, ಸಿನಿಮಾವನ್ನು ಇವರು ಗ್ರಹಿಸುವ ರೀತಿಯೇ ವಿಭಿನ್ನವಾದುದು. ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಆಯಾಮಗಳನ್ನು ಒರೆಗೆ ಹಚ್ಚಿ ನೋಡುವ ಇವರು, ಪರ್ಯಾಯ ಸಿನಿಮಾಕ್ಕೆ - ಸಾಂಸ್ಕೃತಿಕ ಆಯಾಮ' ಒದಗಿಸಿ ಮಾತನಾಡಲಿದ್ದಾರೆ.

ವಿ ಬಿ ತಾರಕೇಶ್ವರ್ : ಎಂಎ, ಎಂಫಿಲ್, ಪಿಎಚ್‌ಡಿ ಮುಗಿಸಿರುವ ತಾರಕೇಶ್ವರ್ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ರಾಷ್ಟ್ಟೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸುಪರಿಚಿತವಾಗಿರುವ ತಾರಕೇಶ್ವರ್‌ ಹೆಸರು ಹೇಗೆ ಪ್ರಮುಖವಾಗಿದೆಯೋ, ಅದೇ ರೀತಿ ಸಂಶೋಧನಾ ಬರವಣಿಗೆ, ಅನುವಾದದಲ್ಲಿಯೂ ದುಡಿದಿದ್ದಾರೆ. ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ-ಘಟಶ್ರಾದ್ಧ ಕುರಿತಂತೆ ಒಂದು ಟಿಪ್ಪಣಿ' ಎಂದೆನ್ನುವ ವಿಷಯವನ್ನು ತೆಗೆದುಕೊಂಡು ತಾರಕೇಶ್ವರ್ ಮಾತನಾಡಲಿದ್ದಾರೆ.

ರಘುನಾಥ ಚ ಹ : ಸಾಹಿತ್ಯದ ಸಂವೇದನೆಯ ಮೂಲಕ ಚಿತ್ರವನ್ನು ಗ್ರಹಿಸುವ ರಘುನಾಥ್ ಪತ್ರಿಕೆಗಳಲ್ಲಿ ಬರುವ, ಆ ಕ್ಷಣದ ವಿಮರ್ಶಕರಲ್ಲಿ ಪ್ರತ್ಯೇಕವಾಗಿ ನಿಲ್ಲುವ ಹೆಸರು. ಹೊಸ ಪೀಳಿಗೆಯ ನಿರ್ದಾಕ್ಷಿಣ್ಯವಾದ ನಿಲುವುಗಳು, ಗುಣಮಟ್ಟಕ್ಕೆ ಮಾನ್ಯತೆ ಮುಂತಾದ ಸಂದರ್ಭೋಚಿತವಾದ ನಿಲುವುಗಳು ಶ್ಲಾಘನೀಯ/ಈ ಕ್ಷಣದ ಅಗತ್ಯ ಕೂಡ. ರಘುನಾಥ್ ಬರಿಯ ಸಿನಿ ವಿಮರ್ಶಕರು ಮಾತ್ರವಲ್ಲ, ಒಳ್ಳೆಯ ಸೃಜನಶೀಲ ಲೇಖಕ ಕೂಡ. ಇವರ ಸಣ್ಣಕತೆಯ ಸಂಕಲನವೊಂದು ಪ್ರಕಟವಾಗಿದೆ. ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ' ದ ಪರಿಧಿಯೊಳಗೆ ಇವರ ಮಾತುಗಳು ಇರಲಿವೆ.

ಡೇವಿಡ್ ಬಾಂಡ್ : ಮೂಲತಃ ಫ್ರಾನ್ಸಿನವರು. ಸದ್ಯಕ್ಕೆ ಕರ್ನಾಟಕದಲ್ಲಿ ನೆಲೆ ಕಂಡುಕೊಂಡು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಫ್ರೆಂಚ್ ಕಲಿಸಿಕೊಡುತ್ತಿದ್ದಾರೆ. ಏಳು ವರ್ಷಗಳಿಂದ ಕನ್ನಡ ಚಿತ್ರಗಳನ್ನು ಸತತವಾಗಿ ಅಧ್ಯಯನ ಪೂರ್ವಕವಾಗಿ ನೋಡಿಕೊಂಡು ಬರುತ್ತಿರುವ ದೇವಿಡ್ ಬಾಂಡ್ ಕನ್ನಡ ಚಿತ್ರಗಳನ್ನು ತೌಲನಿಕವಾಗಿ ಮಾತನಾಡಬಲ್ಲರು.

ಕೆ ಎಚ್ ಸಾವಿತ್ರಿ : ಬಿ ಎಸ್ಸಿ ಪದವಿಧರೆಯಾದ ಸಾವಿತ್ರಿಯವರು ಪತ್ರಿಕೋದ್ಯಮದಲ್ಲಿ ತಮ್ಮ 23 ವರ್ಷಗಳ ಸುದೀರ್ಘ ಅವಧಿ-ಅನುಭವದಲ್ಲಿ ಅನೇಕ ಪ್ರಥಮಗಳನ್ನು ಸಾಧಿಸಿದವರು. ಕರ್ಮವೀರ ವಾರಪತ್ರಿಕೆಯ ಸ್ಥಾನಿಕ ಸಂಪಾದಕಿಯಾಗಿ ಸೇವೆ ಸಲ್ಲಿಸಿ, ಸದ್ಯ ಚಿತ್ರಸೌರಭ ಹಾಗು ಸಿಂಧೂರ ಪುರವಣಿಗಳನ್ನು ಸಂಯುಕ್ತ ಕರ್ನಾಟಕದಲ್ಲಿ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ಸಾವಿತ್ರಿ 'ಗಿರೀಶ್ ಕಾಸರವಳ್ಳಿಯವರ ಚಿತ್ರಗಳಲ್ಲಿ ಮಹಿಳೆಯ ಪಾತ್ರಗಳು' ಕುರಿತು ಮಾತನಾಡಲಿದ್ದಾರೆ.

ಮಮತಾ ಸಾಗರ್ : ಕಾವ್ಯರಚನೆಯ ತಮ್ಮ ಅಸಲಿ ಕಸುಬಿನಲ್ಲಿ ಮಹಿಳೆಯ ಸಂವೇದನೆಯನ್ನು ಸಶಕ್ತವಾಗಿ ಬಿಂಬಿಸಿರುವ ಮಮತಾ ಸಾಗರ್ ಕನ್ನಡದ ಅತ್ಯುತ್ತಮ ಕವಿಯತ್ರಿಯಾಗಿದ್ದಾರೆ. ಹವಾನ, ಕ್ಯೂಬ, ದಕ್ಷಿಣ ಆಫ್ರಿಕ ದೇಶಗಳಲ್ಲಿ ನಡೆದ ಕಾವ್ಯರಚನೆಯ ಶಿಬಿರಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮಮತಾ, ಸದ್ಯಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಕಾರ್ಯನಿರತವಾಗಿದ್ದಾರೆ. ಕಾಸರವಳ್ಳಿಯವರ ಘಟಶ್ರಾದ್ಧ' ಚಿತ್ರದಲ್ಲಿ ಮಹಿಳೆಯ ಪಾತ್ರ ಕುರಿತಂತೆ ಇವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.

ಉದ್ಘಾಟಕರು : ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಓ ಅನಂತರಾಮಯ್ಯ. ಮುಖ್ಯ ಅತಿಥಿ: ತುಮಕೂರು ಜಿಲ್ಲಾಧಿಕಾರಿ- ಡಾ. ಸಿ ಸೋಮಶೇಖರ್.

ಇನ್ನೂರು ರೂಗಳನ್ನು ಶುಲ್ಕವೆಂದು ನಿಗದಿ ಪಡಿಸಲಾಗಿದೆ. ಎರಡು ದಿನದ ಮೂರು ಊಟ (ಸರಳವಾದ ಊಟ), ಒಂದು ಬೆಳಗಿನ ಫಲಾಹಾರ, ಆರು ವೇಳೆಯ ಕಾಫಿ, ಸ್ಥಳಾವಕಾಶ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುವುದು. ದಿನಾಂಕ 22ರಂದು ಬೆಳಿಗ್ಗೆ 9-00 ರಿಂದ 10.00 ಗಂಟೆಯೊಳಗೆ ತಲುಪಬೇಕು. ಕಾರ್ಯಕ್ರಮ10.30 ಕ್ಕೆ ಪ್ರಾರಂಭವಾಗುತ್ತದೆ. ಭಾನುವಾರ, ಅಂದರೆ ನವೆಂಬರ್ 23ರ ಸಂಜೆ 5 ಗಂಟೆಗೆ ಕಾರ್ಯಕ್ರಮ ಮುಗಿಯುತ್ತದೆ.

ತಲುಪುವುದು ಹೇಗೆ? : ಸ್ವಂತ ವಾಹನದಲ್ಲಿ ಬರುವವರು ತುಮಕೂರಿನ ಕ್ಯಾತ್ಸಂದ್ರ ತಲುಪಿದ ನಂತರ ಬಲಗಡೆ ತಿರುಗಿ ಸಿದ್ಧಗಂಗಾ ಮಠ-ಮಾರನಾಯಕನಪಾಳ್ಯ-ಊರ್ಡಿಗೆರೆ ರಸ್ತೆ-ನಾಮದ ಚಿಲುಮೆ-ದೇವರಾಯನದುರ್ಗ ಮಾರ್ಗ. ಬಸ್ಸಿನಲ್ಲಿ ಬರುವವರು ತುಮಕೂರನ್ನು ತಲುಪಿದನಂತರ, ಅರ್ಧಗಂಟೆಗೊಮ್ಮೆ ತುಮಕೂರಿನಿಂದ ಇರುವ ಖಾಸಗಿ ಬಸ್ಸು ಹಿಡಿದು ಊರ್ಡಿಗೆರೆ ತಲುಪಬೇಕು. ಅಲ್ಲಿಂದ ಆಟೋಗಳಲ್ಲಿ ದೇವರಾಯನದುರ್ಗ ತಲುಪಬಹುದು. ಬೆಂಗಳೂರಿನಿಂದ ಹೊರಡುವವರು, ಬೆಳಿಗ್ಗೆ ಆರು ಗಂಟೆ ಅಥವ ಅದಕ್ಕೆ ಮುನ್ನವೇ ಕೆಂಪೇಗೌಡ ಬಸ್ ನಿಲ್ದಾಣ ತಲುಪಿ ತುಮಕೂರಿಗೆ ಹೊರಡುವ ಬಸ್‌ಗಳನ್ನು ಹಿಡಿದರೆ ಮಾತ್ರ ಸಮಯಕ್ಕೆ ಸರಿಯಾಗಿ ದೇವರಾಯನದುರ್ಗ ತಲುಪಿಕೊಳ್ಳಬಹುದು.

ವ್ಯವಸ್ಥೆ : ದೇವರಾಯನದುರ್ಗ ಆಧುನಿಕ ವ್ಯವಸ್ಥೆಯಿಂದ ಕೂಡಿರುವ ಸ್ಥಳವಲ್ಲ. ಆದುದರಿಂದ ಅಲ್ಲಿ ದೊರಕಿರುವ ಸ್ಥಳಾವಕಾಶಕ್ಕೆ ತಕ್ಕಂತೆ ಮಲಗಲು ಡಾರ್ಮಿಟರಿ ವ್ಯವಸ್ಥೆ ಮಾಡಲಾಗಿದೆ. ಹಾಸಿಗೆ ಅಥವ ಜಮುಖಾನ, ಉಣ್ಣೆ ರಗ್ಗಿನೊಂದಿಗೆ ಸರಬರಾಜಿನ ಆಶಯವಂತೂ ಇದೆ. ಮಹಿಳೆಯರಿಗೆ -ಪುರುಷರಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗುತ್ತದೆ. ಭಾಗವಹಿಸುವವರು ಬೆಚ್ಚಗಿರಲು ಸ್ವೆಟರು, ಮಫ್ಲರು ತರುವುದು ಒಳಿತು.

ಅನಂತಮೂರ್ತಿಯವರ ನೀಳ್ಗತೆಯಾದ ಘಟಶ್ರಾದ್ಧ ತೆರೆಯ ಮೇಲೆ ಅತ್ಯಂತ ಸೃಜನಶೀಲವಾಗಿ ಗಿರೀಶ್ ಕಾಸರವಳ್ಳಿಯವರು ಮೂಡಿಸಿದ್ದಾರೆ. ಇವೆರಡೂ ಭಾರತದ ಅಪರೂಪದ ಸೃಜನಶೀಲ ಅಭಿವ್ಯಕ್ತಿಯೆ. ಇವೆರಡಕ್ಕೂ ಗೌರವ ಸೂಚನೆಯಾಗಿ ಯುವ ಕಲಾವಿದ ಪಿ ಟಿ ಪ್ರಮೋದ್ ಹಾಗು ಶಿವಾರಾಜ್‌ರವರು ಕಲಾಕೃತಿಗಳನ್ನು ರಚಿಸಿದ್ದಾರೆ. ಅದರ ಪ್ರದರ್ಶನವೂ ಇದೆ.

ಕಲಾವಿದರ ಸಂಕ್ಷಿಪ್ತ ಪರಿಚಯ?

ಪಿ ಟಿ ಪ್ರಮೋದ್ : ಮೂಲತ ಇಂಜಿನಿಯರಿಂಗ್ ಪದವಿಧರರಾದರೂ, ಪ್ರೌಢಶಾಲೆಯಿಂದಲೆ ಕಲೆಯನ್ನು ವ್ಯಾಸಂಗದ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು, ಕಲೆ'ಯನ್ನು ಕ್ರಮಬದ್ಧವಾಗಿ ಕಲಿತಿರುವ ಪ್ರಮೋದ್ ಯುನಿಗ್ರಾಫಿಕ್ಸ್ ಬಳಸಿ ಡಿಸೈನಿಂಗ್ ಮಾಡುವ ವೃತ್ತಿಯಲ್ಲಿ ನಿಷ್ಣಾತರು. ಕಾನೀನ' ಎಂದೆನ್ನುವ ವಿಷಯವನ್ನು ತಮ್ಮ ಕಲೆಯ ಕೇಂದ್ರವಸ್ತುವನ್ನಾಗಿ ಆಯ್ಕೆ ಮಾಡಿಕೊಂಡು, ಪೈಂಟಿಂಗ್‌ಗಳನ್ನು ರಚಿಸಿ ಕರ್ನಾಟಕ ಚಿತ್ರಕಲಾ ಪರಿಷತ್, ಪೈಂಟ್ ಬಾಕ್ಸ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಿದ್ದರು. ವಿಕ್ರಾಂತ ಕರ್ನಾಟಕದಲ್ಲಿ ಇಲಸ್ಟ್ರೇಟರ್' ಆಗಿಯೂ ಕೆಲಸ ಮಾಡಿದ್ದಾರೆ. ಕನ್ನಡಸಾಹಿತ್ಯ.ಕಾಂ ಪ್ರಕಟಣ ವಿಭಾಗವಾದ ಸಲ್ಲಾಪ' ಪ್ರಕಟಿಸಿದ ಎರಡು ಕೃತಿಗಳೂ ಸೇರಿದಂತೆ ಅನೇಕ ಕೃತಿಗಳಿಗೆ ಚಿತ್ರಗಳನ್ನು ರಚಿಸಿದ್ದಾರೆ. ಇವರ ಬ್ಲಾಗ್: http://kuncha-prapancha.blogspot.com

ಶಿವರಾಜ್ ಕೆ : ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿರುವ ಶಿವಕುಮಾರ್ ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸಿದ್ದ ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದರಲ್ಲದೆ, ಧ್ವನ್ಯಾಲೋಕದಲ್ಲಿ, ಸಾವನದುರ್ಗ ಪ್ರಿಂಟಿಂಗ್ ಕ್ಯಾಂಪ್‌ಗಳಲ್ಲಿ ನಡೆದ ಶಿಬಿರದಲ್ಲಿಯೂ ಕಾರ್ಯನಿರ್ವಹಿಸಿದವರು. ಪೈಂಟ್ ಬಾಕ್ಸ್ ಆರ್ಟ್ ಗ್ಯಾಲರಿಯಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ. ಇವರ ಬ್ಲಾಗ್: http://shivu-adhamya.blogspot.com

ಬಹುಮಾನ ವಿತರಣೆ : ಕಳೆದ ಬಾರಿ ಗುರುಪ್ರಸಾದ್‌ರ ಮಠ' ಚಿತ್ರದ ಪ್ರದರ್ಶನ ಮತ್ತು ಚಿತ್ರತಂಡದೊಂದಿಗೆ ಸಂವಾದವನ್ನು ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಮಠ' ಚಿತ್ರದ ವಿಮರ್ಶೆ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ಶಿವಮೊಗ್ಗದ ಅವಿನಾಶ್ ಹಾಗು ಟೀನಾ ಶಶಿಕಾಂತ್‌ರವರ ವಿಮರ್ಶೆಗಳಿಗೆ ಬಹುಮಾನ ಘೋಷಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅವರಿಗೆ ಬಹುಮಾನದ ವಿತರಣೆಯೂ ಇರುತ್ತದೆ.

ಸಂಪರ್ಕಕ್ಕಾಗಿ ಇಲ್ಲಿಯ ವಿವರಗಳನ್ನು ನೋಡಿರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada