ಅಭಿಮಾನ್‌ನಲ್ಲಿ 'ಆಪ್ತಮಿತ್ರ'ನಿಗೆ ಅಭಿಮಾನದ ಹೊಳೆ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಇಂದು ನಮ್ಮೊಂದಿಗಿಲ್ಲ. ಆದರೆ 'ಆಪ್ತರಕ್ಷಕ' ನ ನೆನಪು ಮಾತ್ರ ಇನ್ನೂ ಹಸಿರಾಗಿದೆ. ಶನಿವಾರ (ಸೆ.18) ಅವರ 60ನೇ ಹುಟ್ಟುಹಬ್ಬ. ಅವರಿಲ್ಲದ ಹುಟ್ಟುಹಬ್ಬದ ಸಂದರ್ಭದಲ್ಲಿ ಮೂರು ದಿನಗಳ ಚಿತ್ರೋತ್ಸವ 'ಸಿಂಹಾವಲೋಕ'ನ ನಡೆಯುತ್ತಿದೆ. ವಿಷ್ಣು ಅಭಿನಯದ ಜನಪ್ರಿಯ ಚಿತ್ರಗಳನ್ನು ಕಂಡು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಸಡಗರ, ಸಂಭ್ರಮ ಮುಗಿಲು ಮುಟ್ಟಿದೆ. ವಿಷ್ಣು ಇಲ್ಲದೆ ನಡೆಯುತ್ತಿರುವ ಅವರ ಮೊದಲ ಹುಟ್ಟುಹಬ್ಬ. ಸಮಾಧಿ ಬಳಿ ಇಂದು ಭಾರತಿ ವಿಷ್ಣುವರ್ಧನ್ ಹಾಗೂ ಅವರ ಕುಟುಂಬಿಕರು ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.
ಅಭಿಮಾನ್ ಸ್ಟುಡಿಯೋ ಬಳಿ ಇರುವ ಸ್ಮಾರಕದಲ್ಲಿ ಹಾಲಪ್ಪ ಫೌಂಡೇಷನ್, ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಮತ್ತು ನೇತ್ರದಾನ ಶಿಬಿರ ನಡೆಸಲಾಗುತ್ತಿದೆ. ವಿಷ್ಣುಹುಟ್ಟುಹಬ್ಬ ಅಂಗವಾಗಿ ಅಭಿಮಾನ್ ಸ್ಟುಡಿಯೋಗೆ ಬಂದ ಅಭಿಮಾನಿಗಳಿಗೆ ಅನ್ನಸಂತರ್ಪಣೆಯನ್ನು ಮಾಡಲಾಗುತ್ತಿದೆ.
ಭಾನುವಾರ(ಸೆ.19) ಸಂಜೆ ನಡೆಯಲಿರುವ ವಿಷ್ಣು ಚಿತ್ರೋತ್ಸವದ ಸಮಾರೋಪ ಸಮಾರಂಭಕ್ಕೆ ಸಂಸದ ಹಾಗೂ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ, ರೆಬೆಲ್ ಸ್ಟಾರ್ ಅಂಬರೀಷ್, ಸುಮಲತಾ ಅಂಬರೀಷ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
'ವಿಭಾ' ಚಾರಿಟಬಲ್ ಟ್ರಸ್ಟ್ ನಿಂದ ಹಲವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ಹೆಜ್ಜೆಯಾಗಿ ಚಿತ್ರೋತ್ಸವ, ನೇತ್ರದಾನ, ರಕ್ತದಾನ ಶಿಬಿರಗಳು ನಡೆಯುತ್ತಿವೆ. ಈಗಾಗಲೆ ಅವರ ಹೆಸರಿನಲಿ ಮೈಸೂರು ವಿವಿಯಲ್ಲಿ ಲಲಿತ ಕಲೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ವಿಭಾ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸುವ ಮೂಲಕ ವಿಷ್ಣು ಅವರ ಆಸೆ, ಮೂಲ ಉದ್ದೇಶಗಳನ್ನು ಈಡೇರಿಸುವ ಪ್ರಯತ್ನಿಸಲಾಗುತ್ತದೆ ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.


Click it and Unblock the Notifications











