ಡಾ. ವಿಷ್ಣು ಹುಟ್ಟುಹಬ್ಬ: ಸಂಭ್ರಮಕ್ಕೆ ಸರ್ಕಾರದ ತಣ್ಣೀರು!

ಎರಡು ವರ್ಷಗಳ ಹಿಂದೆ ಖ್ಯಾತ ನಟ ವಿಷ್ಣುವರ್ಧನ ತೀರಿಕೊಂಡಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅಂದಿನ ಶಾಸಕ ಎಸ್.ಎ. ರಾಮದಾಸ್ ಮೈಸೂರಿನಲ್ಲಿ ಡಾ. ರಾಜ್ ಹಾಗೂ ಡಾ. ವಿಷ್ಣು ಹೆಸರಿನಲ್ಲಿ ಜಂಟಿಯಾಗಿ ಚಿತ್ರನಗರಿ ಸ್ಥಾಪಿಸುವುದಾಗಿ ಸರ್ಕಾರದ ಪರ ಘೋಷಣೆ ಮಾಡಿದ್ದರು. ಆದರೆ, ಎರಡು ವರ್ಷ ಕಳೆದರೂ ಅದನ್ನು ಮಾಡದೇ ಸರ್ಕಾರ ದ್ರೋಹವೆಸಗಿದೆ ಎಂದು ವಿಷ್ಣು ಜನ್ಮದಿನದಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ಯಪಡಿಸುತ್ತಿದ್ದಾರೆ.
ಡಾ. ರಾಜ್ ಹಾಗೂ ಡಾ. ವಿಷ್ಣು ಇಬ್ಬರೂ ಅವಿಭಜಿತ ಮೈಸೂರು ಜಿಲ್ಲೆಗೇ ಸೇರಿದವರು. ಜೊತೆಗೆ ಖ್ಯಾತ ನಟ ಅಂಬರೀಷ್ ಹಾಗೂ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಕೂಡ ಅದೇ ಜಿಲ್ಲೆಗೆ ಸೇರಿದವರು. ಹಾಗಾಗಿ ಈ ಗಣ್ಯರೆಲ್ಲರ ಸಂತಸ, ಬೆಂಬಲ ಈ ಸರ್ಕಾರದ ಆ ಘೋಷಣೆಯ ಪರವಾಗಿತ್ತು. ಆದರೆ ಸರ್ಕಾರದ ಈ ವಿಳಂಬ ನೀತಿ ಎಲ್ಲರ ಕೋಪಕ್ಕೂ ಕಾರಣವಾಗಿದೆ.
ಮಾಜಿ ಮುಖ್ಯಮಂತ್ರಿ ಈಗ ಮಾತು ತಪ್ಪಿದ ಮಗ ಎನ್ನಿಸಿಕೊಳ್ಳುವಂತಾಗಿದೆ. ಧರ್ಮಸ್ಥಳದ ಮಂಜುನಾಥನಿಗೇ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಯಡಿಯೂರಪ್ಪನಿಗೆ ಇದ್ಯಾವ ಮಹಾ ಎಂದು ಅವರನ್ನು ಬಲ್ಲ ಎಲ್ಲರೂ ಒಳಗೊಳಗೆ ನಗುತ್ತಿದ್ದಾರೆ.


Click it and Unblock the Notifications











