ಹೆಂಗೆಳೆಯರ ಮನಕದ್ದ ಚೋರ ಪ್ರೇಮ್‌ಗೆ ಹುಟ್ಟುಹಬ್ಬ ಸಂಭ್ರಮ
ಕನ್ನಡದಲ್ಲಿ ಲಾಂಗು ಮಚ್ಚುಗಳ ಅಬ್ಬರ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಲವರ್ ಬಾಯ್ ಪಾತ್ರಗಳ ಮೂಲಕ ಗಮನಸೆಳೆದ ನಟ ಪ್ರೇಮ್. ಅವರಿಗೆ ಇಂದು ಹುಟ್ಟುಹಬ್ಬ, ಶುಭಾಶಯಗಳು. ಪ್ರೇಮ್ ಬಂದಷ್ಟೇ ವೇಗವಾಗಿ ಹೆಂಗೆಳೆಯರ ಮನಸ್ಸನ್ನೂ ಕದ್ದುಬಿಟ್ಟರು. ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಹೊಂಗನಸು ಚಿತ್ರಗಳ ಮೂಲಕ ನಾವ್ಯಾರಿಗೂ ಕಮ್ಮಿ ಇಲ್ಲ ಎಂದು ನಿರೂಪಿಸಿದರು.
ಶೀಘ್ರ ಸಮಯದಲ್ಲೇ ತನ್ನದೇ ಆದಂತಹ ಪ್ರೇಕ್ಷಕ ವರ್ಗವನ್ನು ಪ್ರೇಮ್ ಸಂಪಾದಿಸಿಕೊಂಡರು. ತಮ್ಮ ಲವ್ಲಿ ಪಾತ್ರಗಳಿಂದ ಪ್ರೇಕ್ಷಕರಿಗೆ ಹತ್ತಿರವಾದ ಪ್ರೇಮ್‌ಗೆ ಅಭಿಮಾನಿಗಳು ಲವ್ಲಿ ಸ್ಟಾರ್ ಎಂಬ ಬಿರುದನ್ನು ಪ್ರಸಾದಿಸಿದರು. ಲವರ್ ಬಾಯ್ ಪಾತ್ರಗಳು ಅತಿಯಾದದ್ದಕ್ಕೋ ಏನೋ ಪ್ರೇಮ್ ಚಿತ್ರಗಳ ಸದ್ದು ಬಾಕ್ಸಾಫೀಸಲ್ಲಿ ಕೊಂಚ ಕೊಂಚ ಕಡಿಮೆಯಾಗುತ್ತಾ ಬಂತು.
ಇದನ್ನು ಅರಿತ ಪ್ರೇಮ್ ವಿಭಿನ್ನ ಪಾತ್ರಗಳ ಕಡೆಗೆ ಗಮನಹರಿಸತೊಡಗಿದರು. ಎರಡನೇ ಮದುವೆ, ನಾವ್ಯಾರಿಗೂ ಕಮ್ಮಿ ಇಲ್ಲ, ಕೆಟ್ಟವನು, ಧನ್ ಧನಾ ಧನ್ ತರಹದ ಚಿತ್ರಗಳನ್ನು ಅಪ್ಪಿಕೊಂಡರು. ಕೇವಲ ಬಣ್ಣದ ಬಣ್ಣದ ಬಟ್ಟೆ ತೊಟ್ಟರೆ ಸಾಲದು ಖಾಕಿ ಪವರ್ ಏನೂ ಎಂದು ತೋರಿಸಲು 'ಶತ್ರು' ಎಂಬ ಚಿತ್ರಕ್ಕೆ ಪ್ರೇಮ್ ಸಹಿಹಾಕಿದ್ದಾರೆ. ಇಂದು (ಏ.18) ಈ ಚಿತ್ರವನ್ನು ಆರಂಭಿಸುವ ಮೂಲಕ ಪ್ರೇಮ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಕ್ಲಾಸ್ ಚಿತ್ರಗಳಿಂದ ಮಾಸ್ ಚಿತ್ರಗಳ ಕಡೆಗೆ ಪ್ರೇಮ್ ಹೊರಳಿದ್ದು ಮತ್ತಷ್ಟು ಪ್ರೇಕ್ಷಕರಿಗೆ ಅಭಿಮಾನಿಗಳನ್ನು ಸಂಪಾದಿಸಿಕೊಳ್ಳಲು ಹೊರಟಿದ್ದಾರೆ. ವಿಭಿನ್ನ ಪ್ರಯೋಗಗಳು, ವೈವಿಧ್ಯಮಯ ಪಾತ್ರಗಳನ್ನು ಪೋಷಿಸುತ್ತಾ ಮತ್ತಷ್ಟು ಹುಟ್ಟುಹಬ್ಬಗಳನ್ನು ಪ್ರೇಮ್ ಹೀಗೇ ಆಚರಿಸಿಕೊಳ್ಳುತ್ತಿರಲಿ ಎಂದು ಅವರ ಅಭಿಮಾನಿಗಳ ಪರವಾಗಿ ದಟ್ಸ್ ಕನ್ನಡ ಹಾರೈಸುತ್ತದೆ.


Click it and Unblock the Notifications











