»   » ಕಸ್ತೂರಿಯಲ್ಲಿ 'ಹಾಸ್ಯದರಸ' ಎಂಬ ನಗೆ ಅನಿಲ!

ಕಸ್ತೂರಿಯಲ್ಲಿ 'ಹಾಸ್ಯದರಸ' ಎಂಬ ನಗೆ ಅನಿಲ!

Posted By:
Subscribe to Filmibeat Kannada

ಯಾರೋ ಹೇಳಿದ ಅದೇ ಹಳಸಲು ಜೋಕು, ಅವಧಿ ಮೀರಿದ ನಗೆ ಗುಳಿಗೆಗಳು ತಿಂದು ನಗುವಿನ ಜಾಗದಲ್ಲಿ ಅಳು ಬರುವುದುಂಟು. ಕಿರುತೆರೆಯಲ್ಲಿ ಪ್ರಸಾರವಗುತ್ತಿರುವ ಹಾಸ್ಯ ಕಾರ್ಯಕ್ರಮಗಳನ್ನು ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ. ಆದರೆ ಕಸ್ತೂರಿ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8.30 ರಿಂದ 9.30ರ ಅವಧಿಯಲ್ಲಿ ಟಿವಿ ಆನ್ ಮಾಡಿದರೆ ರಿಮೋಟ್ ಪಕ್ಕಕ್ಕಿಡಬೇಕಾಗುತ್ತದೆ. ಕಾರಣ 'ಹಾಸ್ಯದರಸ' ಕುಡಿದು ಹೊಟ್ಟೆ ಹಿಡಿದುಕೊಂಡು ನಗಬೇಕಾಗುತ್ತದೆ.

ನಿಜ ಹೇಳಬೇಕೆಂದರೆ ಯಾವುದೋ ಕಾರ್ಯಕ್ರಮದ ನಕಲಲ್ಲ ಇದು. ಆದರೆ ಜನಪ್ರಿಯ ನಗೆ ಕಾರ್ಯಕ್ರಮಗಳಿಂದ ಪ್ರೇರಿತವಾದದು.ಡಿಫರೆಂಟ್ ಕಲ್ಪನೆಗೆ 'ರೆಂಟ್' ಇಲ್ಲದೆ ನಗುವಿನ 'ಕರೆಂಟ್' ಕೊಟ್ಟಿದ್ದಾರೆ ಕಾರ್ಯಕ್ರಮದ ಸಂಯೋಜಕರು. ಬೋರು ಹೊಡೆಸಿ, ಆಕಳಿಸುವಂತೆ ಮಾಡಿ, ನಿದ್ದೆ ಕೆಡಿಸುವ ಕಾರ್ಯಕ್ರಮಗಳ ನಡುವೆ ಕಸ್ತೂರಿ ವಾಹಿನಿ ಉತ್ತಮ ಟಾನಿಕ್ ಕೊಟ್ಟಿದೆ.

ಕುಣಿಗಲ್ ನಾಗಭೂಷಣ್, ಗೋಟೂರಿ, ಎಂ.ಎಸ್.ನರಸಿಂಹ ಮೂರ್ತಿ, ವಿ.ವಿ.ಗೋಪಾಲ್, ವೈ.ವಿ.ಗುಂಡೂರಾವ್, ವಿ.ಮನೋಹರ್, ರುದ್ರೇಶ್ ನಾಗಸಂದ್ರ, ಜೆ.ಎಂ.ಪ್ರಹ್ಲಾದ್, ಕಾಫಿ ರಾಘವೇಂದ್ರ, ಬೂದಾಳ್ ಕೃಷ್ಣಮೂರ್ತಿ, ಹಿರಿಯೂರು ರಾಘವೇಂದ್ರ ಮುಂತಾದವರು ಈ ಹಾಸ್ಯದರಸವನ್ನು ತಯಾರಿಸಿದ್ದಾರೆ. ಕರ್ನಾಟಕದ ಜನ ಗೊಬ್ಬರದ ಗಲಾಟೆಯಿಂದ ಸ್ವಲ್ಪ ರಿಲ್ಯಾಕ್ಸ್ ಆಗಲು ಸಿಹಿಕಹಿ ಚಂದ್ರು, ಮಿಮಿಕ್ರಿ ದಯಾನಂದ್ ಕಾರ್ಯಕ್ರಮವನ್ನು ರೂಪಿಸಿದವರು. ರೀನಾ ಅವರ ನವಿರಾದ ನಿರೂಪಣೆ ಈ ಕಾರ್ಯಕ್ರಮಕ್ಕಿದೆ.

ಈಗಾಗಲೇ 38 ಎಪಿಸೋಡ್‌ಗಳು ಚಿತ್ರೀಕರಣಗೊಂಡಿವೆ. ನಿರ್ದೇಶಕ ಭಾರ್ಗವ, ಜೋಸೈಮನ್, ವಾಸು, ಎನ್.ಎಸ್.ಶಂಕರ್, ಶರಣ್, ಕವಿತಾ ಲಂಕೇಶ್ ಮೊದಲಾದವರು ಅತಿಥಿ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ಮಿಮಿಕ್ರಿ, ಅಣಕವಾಡು, ಮೂಕಾಭಿನಯ, ವಿಡಂಬನೆ, ಭಾಷಾ ವೈವಿಧ್ಯ ಮೊದಲಾದ ಹಾಸ್ಯರಸಗಳನ್ನು ಪ್ರೇಕ್ಷಕರು ಸವಿಯಬಹುದು. ಕಾಣೆಯಾಗಿದ್ದ ಎಷ್ಟೋ ನಗೆಮುಖಗಳು ಕಸ್ತೂರಿಯಲ್ಲಿ ಮತ್ತೆ ಇಣುಕಿದ್ದಾರೆ. ಟೆನ್ನಿಸ್ ಕೃಷ್ಣ, ಮಾಲಾಶ್ರೀ ಮೈಸೂರು, ಅಕ್ಕಿ ಚೆನ್ನಬಸಪ್ಪ, ಟಿ.ವಿ.ಗುರುಮೂರ್ತಿ, ಇಸ್ಮಾಯಿಲ್ ಸಾಗರ್, ಕುರಿ ಪ್ರಕಾಶ್, ಡಾಲಿ, ಶಂಖನಾದ ಅರವಿಂದ್, ಡಿಂಗ್ರಿ ನಾಗರಾಜ್, ಛೋಟಾ ಉಸ್ತಾದ್, ಬರ್ಕನ್ ಆಲಿ, ವೆಂಕಟಾಚಲ, ರರಿಬಸವಯ್ಯ, ಈರಣ್ಣ ಬೆಳ್ಳುಳ್ಳಿ ಹಾಸ್ಯದರಸವನ್ನು ಕಿವುಚಿ ಕೊಡಲಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X