ಬೆಂಕಿ ಬಿರುಗಾಳಿಯಾಗಿ ನಮಿತಾ, ಸಲೋನಿ ಎಂಟ್ರಿ
'ಬೆಂಕಿ ಬಿರುಗಾಳಿ' ಎಂಬ ಹೆಸರಿನ ಚಿತ್ರ 26 ವರ್ಷಗಳ ಹಿಂದೆ ತೆರೆಕಂಡಿತ್ತು. ವಿಷ್ಣುವರ್ಧನ್, ಶಂಕರನಾಗ್, ಜಯಂತಿ, ಜಯಮಾಲಾ, ಜೈ ಜಗದೀಶ್ ಮುಂತಾದವರು ಮುಖ್ಯಭೂಮಿಕೆಯಲ್ಲಿದ್ದ ಚಿತ್ರವದು. ಈಗ ಅದೇ ಹೆಸರಿನ ಚಿತ್ರದಲ್ಲಿ ನಮಿತಾ ಹಾಗೂ ಸಲೋನಿ ಅಭಿನಯಿಸಲಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಮಹೂರ್ತ ನೆರೆವೇರಿತು. ನಮಿತಾ ಜೊತೆ 'ನೀಲಕಂಠ' ಹಾಗೂ 'ಹೂ' ಚಿತ್ರಗಳಲ್ಲಿ ಅಭಿನಯಿಸಿದ್ದ ರವಿಚಂದ್ರನ್ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು.ಚಿತ್ರದಲ್ಲಿ ನಮಿತಾ ಬೆಂಕಿಯಾಗಿ ಹಾಗೂ ಸಲೋನಿ ಬಿರುಗಾಳಿಯಾಗಿ ಕಾಣಿಸಲಿದ್ದಾರೆ. ಉಳಿದಂತೆ ಇದೊಂದು ಆಕ್ಷನ್ ಮತ್ತು ಕಾಮಿಡಿ ಚಿತ್ರ.
ಈ ಚಿತ್ರವನ್ನು ಎಸ್ ಕೆ ಬಷೀದ್ ನಿರ್ಮಿಸುತ್ತಿದ್ದು, ಅವರ ನಿರ್ಮಾಣದಮೂರನೇ ಚಿತ್ರ ಇದಾಗಿದೆ. 'ಬೆಂಕಿ ಬಿರುಗಾಳಿ' ತ್ರಿಕೋನ ಪ್ರೇಮಕತೆಯನ್ನು ಒಟ್ಟು 85 ದಿನಗಳ ಕಾಲ ಚಿತ್ರೀಕರಿಸಲಾಗುತ್ತದೆ. ಬೆಂಗಳೂರು, ಮೈಸೂರು, ಚೆನ್ನೈ, ಮಲೇಷಿಯಾ, ಬ್ಯಾಂಕಾಕ್ ಮತ್ತು ಸ್ವಿಜರ್‌ಲ್ಯಾಂಡ್‌ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಈ ಚಿತ್ರಕ್ಕೆ ರಾಯಚೂರಿನ ಶ್ರೀಲೇಖಾ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಹಿಂದೆ 'ಮದುವೆ ಆಗೋಣ ಬಾ' ಎಂಬ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಬಷೀದ್ ಅವರೇ ಹೊತ್ತಿದ್ದಾರೆ. ಮಧು ಎ ನಾಯ್ಡು ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಹೊಸಬ ರಿಷಿಚಿತ್ರದ ನಾಯಕ ನಟ. [ಕ್ರೇಜಿ ಸ್ಟಾರ್]


Click it and Unblock the Notifications











