ಭಟ್ರ 'ಪರಮಾತ್ಮ' ಅತ್ಯುತ್ತಮ ಚಿತ್ರ: ಪುನೀತ್ ಹೇಳಿಕೆ
ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ್ದ ನಿರ್ದೆಶಕ ಯೋಗರಾಜ್ ಭಟ್, ಪರಮಾತ್ಮ ಚಿತ್ರದಲ್ಲಿ ನಿರಾಸೆ ಮೂಡಿಸಿದರು ಎಂಬ ಮಾತು ಕೆಲವೆಡೆ ವ್ಯಕ್ತವಾಗಿದೆ. ಆದರೆ ಯಾರೇನು ಅಂದರೂ ಪರಮಾತ್ಮ ಚಿತ್ರದಲ್ಲಿ ನಾಯಕರಾಗಿದ್ದ ನಟ ಪವರ್ ಸ್ಟಾರ್ ಪುನೀತ್, ಈ ಮಾತನ್ನು ಅಕ್ಷರಶಃ ಅಲ್ಲಗಳೆದಿದ್ದಾರೆ. ಪರಮಾತ್ಮ ಅತ್ಯುತ್ತಮ ಚಿತ್ರ ಎಂದಿದ್ದಾರೆ.
"ಪರಮಾತ್ಮ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದೆ. ಹಾಗಿರುವಾಗ ಇನ್ನುಳಿದ ಪ್ರಶ್ನೆಗಳಿಗೆ ಅರ್ಥವೇ ಇಲ್ಲ. ನನ್ನ ಪ್ರಕಾರ ಪರಮಾತ್ಮ ಅತ್ಯುತ್ತಮ ಸಿನಿಮಾ. ನನ್ನ ಪಾಲಿಗೆ ಅದೊಂದು ವಿಭಿನ್ನ ಚಿತ್ರ. ಭಟ್ರ ಜತೆ ಮತ್ತೆ ಕೆಲಸ ಮಾಡುವ ಅವಕಾಶ ಬಂದರೆ ಸಂತೋಷದಿಂದಲೇ ಒಪ್ಪಿಕೊಳ್ಳುತ್ತೇನೆ" ಎಂದು ಪ್ರತಿಕ್ರಿಯಿಸುವ ಮೂಲಕ ಪುನೀತ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಭಟ್ರ ಜೊತೆ ಮತ್ತೆ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಎಲ್ಲದಕ್ಕೂ ಉತ್ತರ ಕೊಟ್ಟಿರುವ ಪುನೀತ್, ಪರಮಾತ್ಮ ಕುರಿತ ಯಾವ ಟೀಕೆಗಳಿಗೂ ಸೊಪ್ಪು ಹಾಕುತ್ತಿಲ್ಲ. ಇದೀಗ ದುನಿಯಾ ಸೂರಿ ನಿರ್ದೇಶನದ 'ಅಣ್ಣಾ ಬಾಂಡ್' ನಲ್ಲಿ ಬ್ಯುಸಿಯಾಗಿರುವ ಪುನೀತ್, ಕಳೆದ ಬಾರಿ ಸೂರಿ ಜೊತೆ ಮಾಡಿದ್ದ 'ಜಾಕಿ' ಸೂಪರ್ ಹಿಟ್ ಆಗಿತ್ತು. ಹಾಗಾಗಿ, ಈಗಿನ ಅಣ್ಣಾ ಬಾಂಡ್ ಮೇಲೆ ಕೂಡ ಬೆಟ್ಟದಷ್ಟು ನಿರೀಕ್ಷೆ ಸ್ವತಃ ಪುನೀತ್ ಗೂ ಇದೆ.
ಈ ನಡುವೆ ಅಣ್ಣಾ ಬಾಂಡ್ ವಿತರಣೆ ಹಕ್ಕು ದಾಖಲೆ ಬೆಲೆಗೆ ಮಾರಾಟವಾದ ಸುದ್ದಿ ಬಂದಿದೆ. ಇದರ ಬಗ್ಗೆ ಪುನೀತ್ ಕೇಳಿದರೆ "ನನ್ನ ಕೆಲಸ ಕ್ಯಾಮರಾ ಮುಂದೆ ನಿಲ್ಲುವುದು ಮಾತ್ರ. ಉಳಿದೆಲ್ಲವನ್ನೂ ರಾಘಣ್ಣ ನೋಡಿಕೊಳ್ಳುತ್ತಾರೆ. ಇನ್ನು ಇತರ ಸಂಗತಿಗಳ ಕುರಿತು ಮಾತನಾಡಲು ನಾನು ತುಂಬಾ ಚಿಕ್ಕವನು. ಕೇವಲ 17 ಸಿನಿಮಾಗಳ ವಯಸ್ಸು ನನ್ನದು" ಎಂದಿದ್ದಾರೆ.


Click it and Unblock the Notifications











