ವಿಕಲಚೇತನಿಗೆ 'ಜಾಕಿ' ಟಿಕೆಟ್ ಕೊಡಿಸಿದ ಪುನೀತ್!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮಾನವೀಯತೆ ಮೆರೆದ ಘಟನೆಯಿದು.ಅಂದು ಗುರುವಾರ (ಅ.14) 'ಜಾಕಿ' ಚಿತ್ರ ಬಿಡುಗಡೆಯಾಗಿತ್ತು. ಸಂತೋಷ್ ಚಿತ್ರಮಂದಿರದಲ್ಲಿ ಬೆಳಗಿನ ಆಟ ಹೌಸ್ ಫುಲ್. ಮಧ್ಯಾಹ್ನದ ಆಟಕ್ಕಿರಲಿ ಸೆಕೆಂಡ್ ಶೋಗೆ ಟಿಕೆಟ್ ದೊರೆಯುವುದು ಕನಸಿನ ಮಾತಾಗಿತ್ತು. ಅಷ್ಟೊಂದು ಜನಜಂಗುಳಿ ಚಿತ್ರಮಂದಿರದ ಮುಂದೆ ಜಮಾಯಿಸಿತ್ತು.
ಇಂತಹ ಪರಿಸ್ಥಿತಿಯಲ್ಲಿ ವಿಕಲಚೇತನನೊಬ್ಬ ಟಿಕೆಟ್‌ಗಾಗಿ ಕಾಯುತ್ತಾ ಕುಳಿತಿದ್ದ. ಕಡೆಗೆ ಟಿಕೆಟ್ ಸಿಗದೆ ಪರಿತಪಿಸುತ್ತಿದ್ದ. ಸಿನಿಮಾ ಶುರುವಾದ ಸ್ವಲ್ಪ ಸಮಯಕ್ಕೆ ಚಿತ್ರಮಂದಿರಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದರು. ಅವರನ್ನು ನೋಡಲು, ಹಸ್ತಾಕ್ಷರ ಪಡೆಯಲು ಅಭಿಮಾನಿಗಳು ಮುಗಿಬಿದ್ದರು.
ಟಿಕೆಟ್‍ಗಾಗಿ ಕಾಯುತ್ತಿದ್ದ ವಿಕಲಚೇತನನಿಗೂ ಪುನೀತ್ ಅವರನ್ನು ನೋಡಬೇಕು ಎಂಬ ಆಸೆ. ತನ್ನೆರಡು ಕಾಲುಗಳ ಸ್ವಾಧೀನವನ್ನೇ ಕಳೆದುಕೊಂಡಿದ್ದ ಆತ ಗೇಟಿನ ಬಳಿ ಊರುಗೋಲು ಹಿಡಿದು ತೆವಳಿಕೊಂಡು ಬರುತ್ತಿದ್ದ. ಅದನ್ನು ಪುನೀತ್ ಗಮನಿಸಿದರು. ಕೂಡಲೆ ವಿಕಲಚೇತನನ ಬಳಿಗೆ ಹೋಗಿ ಮಾತನಾಡಿಸುತ್ತಾರೆ.
"ಟಿಕೆಟ್ ಸಿಗಲಿಲ್ಲಣ್ಣ. ಬ್ಲ್ಯಾಕ್ ಟಿಕೆಟ್ ತಗೊಳ್ಳೋಣ ಅಂದ್ರೆ ಅಷ್ಟೊಂದು ದುಡ್ಡಿಲ್ಲ. ಮ್ಯಾಟ್ನಿವರೆಗೂ ಕಾದು ನೋಡಿ ಹೋಯ್ತೀನಿ..." ಎಂಬ ಆತನ ಅಸಾಹಕತೆಯನ್ನು ನೊಡಿ ಪುನೀತ್ ಕೂಡಲೆ ಆತನಿಗೆ ಟಿಕೆಟ್ ಕೊಡಿಸಿದ್ದಾರೆ. ಅಭಿಮಾನಿಯ ಮನದಾಸೆಯನ್ನು ಪೂರೈಸಿದ್ದಾರೆ.
ಬಳಿಕ ಆತನ ಆಸೆಯಂತೆ ಆತನ ಜೊಗೆ ಫೋಟೋ ತೆಗೆಸಿಕೊಂಡಿದ್ದಾರೆ. ಪುನೀತ್ ತಮ್ಮ ಕೂಲಿಂಗ್ ಗ್ಲಾಸ್ ನೀಡಿ ಫೋಟೋ ತೆಗೆಸಿಕೊಳ್ಳಲು ಹೇಳಿದ್ದಾರೆ. " ಇದು ಹಾಕ್ಕೊಂಡ್ರೆ ನನ್ನ ಮುಖ ಗೊತ್ತಾಗುವುದಿಲ್ಲ ಅಣ್ಣಾ" ಎಂದು ವಿಕಲಚೇತನ ಚಮಕ್ ನೀಡಿದ್ದಾನೆ. ಸರಿ ಏನ್ ಕೆಲಸ ಮಾಡ್ತೀಯ ಎಂದು ಪುನೀತ್ ಆತನ ಪೂರ್ವಾಪರಗಳನ್ನು ವಿಚಾರಿಸಿ ತಮ್ಮ ಆಫೀಸ್ ಕಡೆಗೆ ಒಮ್ಮೆ ಬರುವಂತೆ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.
ಸಿನಿಮಾ ಮುಗಿಸಿಕೊಂಡು ಸೀದಾ ಕಚೇರಿಗೆ ಹೋದ ಆತನನ್ನು ಪುನೀತ್ ಆದರದಿಂದ ಬರಮಾಡಿಕೊಂಡು, ಕವರ್ ವೊಂದರಲ್ಲಿ ಹಣ ನೀಡಿ ಏನಾದರೊಂದು ಸಣ್ಣ ವ್ಯಾಪಾರ ಮಾಡು ಎಂದು ಹೇಳಿ ಕಳುಹಿಸಿದ್ದಾರೆ. ಅವರಾಯಿತು ಅವರ ಕೆಲಸ ಆಯಿತು ಎಂಬುವವರೇ ಹೆಚ್ಚು. ಆದರೆ ಪುನೀತ್ ಒಂದು ಹೆಜ್ಜೆ ಮುಂದಿಟ್ಟು ಉಳಿದೆಲ್ಲ ನಟರಿಗಿಂತ ತಾವು ಕೊಂಚ ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.


Click it and Unblock the Notifications











