ಡೆಡ್ಲಿ ಸೋಮನ ಬೆನ್ನತ್ತಿದ ರವಿ ಶ್ರೀವತ್ಸ!
ರವಿ ಶ್ರೀವತ್ಸ ಮತ್ತೆ ಆಕ್ಷನ್, ಕಟ್ ಹೇಳಲಿದ್ದಾರೆಯೇ? ಹೌದು ಎನ್ನುತ್ತವೆ ಗಾಂಧಿನಗರ ಮೂಲಗಳು. 'ಡೆಡ್ಲಿ ಸೋಮ' ಚಿತ್ರ ರವಿ ಶ್ರೀವತ್ಸ ನಿರ್ದೇಶನದ ಮೊದಲ ಚಿತ್ರ. ನಂತರ ಬಂದ ರವಿ ಶ್ರೀವತ್ಸ ಅವರ ರಾಜೀವ್, ಗಂಡ ಹೆಂಡತಿ ಮತ್ತು ಮಾದೇಶ ಚಿತ್ರಗಳು ಬಾಕ್ಸಾಫೀಸಲ್ಲಿ ಮಕಾಡೆ ಮಲಗಿದ್ದು ಇತಿಹಾಸ. ಓಂ ಚಿತ್ರ ಮತ್ತೆ ಮಾಡುತ್ತೇನೆ. ರಾಜ್ ಮಕ್ಕಳನ್ನು ಒಂದೇ ಸಿನಿಮಾದಲ್ಲಿ ತೋರಿಸುತ್ತೇನೆ ಎಂದಿದ್ದರು ರವಿಶ್ರೀವತ್ಸ. ಆದರೆ ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲೇ ಇಲ್ಲ.
ಅದಾದ ಬಳಿಕ 'ಮುತ್ತು ನಮ್ಮಪ್ಪ' ಚಿತ್ರವನ್ನು ಮಾಡ್ತೀನಿ ಎಂದು ಹೇಳಿಕೊಂಡಿದ್ದ ರವಿ ಶ್ರೀವತ್ಸ ಅದ್ಯಾಕೋ ಸುಮ್ಮನಾದರು. ಇದೀಗ ಡೆಡ್ಲಿ ಸೋಮ ಭಾಗ 2 ಮಾಡಲು ಅಣಿಯಾಗಿದ್ದಾರೆ ರವಿ. ರೌಡಿಯೊಬ್ಬನ ಕತೆಯಾಧಾರಿತ 'ಡೆಡ್ಲಿ ಸೋಮ'(2005) ಚಿತ್ರ ತೆರೆಕಂಡು ನಾಲ್ಕು ವರ್ಷಗಳೇ ಕಳೆದುಹೋಗಿವೆ. ನಿರ್ದೇಶಕ ರವಿ ಶ್ರೀವತ್ಸ ಅವರಿಗೆ 'ಡೆಡ್ಲಿ ಸೋಮ' ಅಪಾರ ಖ್ಯಾತಿಯನ್ನೂತಂದುಕೊಟ್ಟ ಚಿತ್ರ.
ಡೆಡ್ಲಿ ಸೋಮ ಚಿತ್ರದ ಮೊದಲ ಭಾಗವನ್ನು ಶೋಭಾ ರಾಜಣ್ಣ ಮತ್ತು ಜಾಕ್ ಮಂಜ ನಿರ್ಮಿಸಿದ್ದರು. ಈ ಬಾರಿ ಜಾಕ್ ಮಂಜ ಒಬ್ಬರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಸುದ್ದಿಯಿದೆ. ನಾಯಕ ನಟ ಆದಿತ್ಯ ಸೇರಿದಂತೆ ಬಹುತೇಕ ಮೊದಲ ಭಾಗದಲ್ಲಿ ನಟಿಸಿದ್ದ ಕಲಾವಿದರು ಮತ್ತು ತಂತ್ರಜ್ಞರು ಇಲ್ಲೂ ನಟಿಸಲಿರುವುದು ವಿಶೇಷ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











