»   » 'ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ' ವೆಬ್ ಲೋಕಾರ್ಪಿತ

'ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ' ವೆಬ್ ಲೋಕಾರ್ಪಿತ

Subscribe to Filmibeat Kannada

ಓಂಕಾರ್ ನಿರ್ದೇಶನದ 'ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ' ಚಿತ್ರದ ಅಂತರ್ಜಾಲ ತಾಣವನ್ನು ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮಿಗಳು ಏ.17ರಂದು ಉದ್ಘಾಟಿಸಿದರು. ಮೇ.1 ಕಾರ್ಮಿಕರ ದಿನ 'ಜ್ಞಾನಜ್ಯೋತಿ...' ಚಿತ್ರ ತೆರೆ ಕಾಣಲಿದೆ. ಶಿವಕುಮಾರ ಸ್ವಾಮಿಗಳು ಲ್ಯಾಪ್‌ಟಾಪ್‌ನ ಗುಂಡಿ ಒತ್ತಿ ಉದ್ಘಾಟಿಸುವ ಮೂಲಕ ಅಂತರ್ಜಾಲ ತಾಣ ಲೋಕರ್ಪಣೆಯಾಯಿತು. ಇದೇ ಕಾರ್ಯಕ್ರಮದಲ್ಲಿ 'ಜ್ಞಾನಜ್ಯೋತಿ ಶ್ರೀ ಸಿದ್ಧಗಂಗಾ' ಚಿತ್ರದ ನಿರ್ಮಾಪಕ, ವಿತರಕ, ಪ್ರದರ್ಶಕ ಎನ್.ಕುಮಾರ್ ಅವರ ಅಂತರ್ಜಾಲ ತಾಣವನ್ನು ಶಿವಕುಮಾರ ಸ್ವಾಮಿಗಳು ಉದ್ಘಾಟಿಸಿದರು.

ಚಿತ್ರ ನಿರ್ಮಾಪಕ ಓಂಕಾರ್ ಅಚ್ಚುಕಟ್ಟಾಗಿ ಶಿವಕುಮಾರ ಸ್ವಾಮಿಗಳ ಜೀವನ ಚರಿತ್ರೆ ಹಾಗೂ ತುಮಕೂರು ಸಿದ್ಧಗಂಗಾ ಕ್ಷೇತ್ರದ ಮಹಾತ್ಮೆಯನ್ನು ಬೆಳ್ಳಿತೆರೆಗೆ ತರುತ್ತಿದ್ದಾರೆ. 700 ವರ್ಷಗಳಷ್ಟು ಸುದೀರ್ಘ ಇತಿಹಾಸ ಹೊಂದಿರುವ ಸಿದ್ಧಗಂಗಾ ಕ್ಷೇತ್ರದ ಮಹಾತ್ಮೆ ಬೆಳ್ಳಿತೆರೆ ಬೆಳಗಲಿದೆ. 'ಜ್ಞಾನಜ್ಯೋತಿ ಶ್ರೀ ಸಿದ್ದಗಂಗ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ 'ಯು' ಅರ್ಹತಾಪತ್ರವನ್ನು ನೀಡಿದೆ. ಮಂಡಲಿಯ ಅಧ್ಯಕ್ಷ ಚಂದ್ರಶೇಖರ್ ಅವರು ಇದೊಂದು ಅದ್ಭುತ ಚಿತ್ರ ಎಂದು ಬಣ್ಣಿಸಿರುವುದಲ್ಲದೇ ನಿರ್ದೇಶಕರನ್ನು ಪ್ರಶಂಸಿಸಿದ್ದಾರೆ. ಶಿವಕುಮಾರ ಸ್ವಾಮಿಗಳು ಸೇರಿದಂತೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಹಾಗೂ ಡಾ.ವಿಷ್ಣುವರ್ಧನ್ ದಂಪತಿಗಳ ಅಭಿನಯವಿರುವ ಈ ಚಿತ್ರವನ್ನು ಓಂಕಾರ್.ಬಿ.ಎ ಅವರು ಕಥೆ, ಚಿತ್ರಕಥೆ ಬರೆಯುವುದರೊಂದಿಗೆ ನಿರ್ದೇಶಿಸಿದ್ದಾರೆ. ಶಿವಗಂಗೆ, ಸಿದ್ದಗಂಗೆಯ ಸುಂದರ ಪರಿಸರವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಛಾಯಾಗ್ರಾಹಕ ಪಿ ಕೆ ಎಚ್ ದಾಸ್.

ಸಿದ್ಧಗಂಗಾ ಮಠದಲ್ಲಿ ಆಶ್ರಯ ಪಡೆದಿರುವ 20,000ಕ್ಕೂ ಹೆಚ್ಚು ಮಕ್ಕಳು ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷ. ಉಳಿದಂತೆ ಯುವರಾಜ್ ಸಂಗೀತ, ಜಿ.ಮೂರ್ತಿ ಕಲೆಯಿರುವ ಚಿತ್ರದ ತಾರಾಬಳಗದಲ್ಲಿ ಶ್ರೀಧರ್, ಶ್ರೀನಿವಾಸಮೂರ್ತಿ, ವಿನಯಾಪ್ರಕಾಶ್, ಚೇತನ್, ಶಿವಧ್ವಜ್, ರಮೇಶ್‌ಭಟ್, ಸುಚೇಂದ್ರ ಪ್ರಸಾದ್, ಜಿ.ಕೆ.ಗೋವಿಂದರಾವ್, ಸುಂದರರಾಜ್, ತಾರಾ ಹಾಗೂ ಮಾಷ್ಟರ್ ಕಿಶನ್ ಇದ್ದಾರೆ. ಚಿತ್ರದಲ್ಲಿನ ಒಟ್ಟು ಒಂಬತ್ತು ಹಾಡುಗಳನ್ನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ, ಶಂಕರ್ ಮಹಾದೇವನ್, ಶಮಿತಾ, ಯುವರಾಜ್ ಮತ್ತಿತರು ಹಾಡಿದ್ದಾರೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada