ವಿಜಿ ಗೋಕುಲಕ್ಕೆ ಮೂರೇ ಹಾಡು ಬಾಕಿ
ಖುಷಿ, ರಿಷಿ, ಮಿಲನದಂತಹ ಯಶಸ್ವಿ ಚಿತ್ರಗಳನ್ನು ನೀಡಿದ ಪ್ರಕಾಶ್ ಅವರ ನಿರ್ಮಾಣ ನಿರ್ದೇಶನದ 'ಗೋಕುಲ' ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ನಿರಂತರ ಚಿತ್ರೀಕರಣ ನಡೆಸಿ, ಇದೀಗ ಅಂತಿಮ ಹಂತಕ್ಕೆ ಬಂದಿದ್ದಾರೆ. ಈಗಾಗಲೇ ಚಿತ್ರದ ಮಾತಿನ ಭಾಗ ಹಾಗೂ 2 ಹಾಡುಗಳ ಚಿತ್ರೀಕರಣವನ್ನು ಮುಗಿಸಿದ್ದು, ಉಳಿದ 3 ಹಾಡುಗಳ ಚಿತ್ರೀಕರಣವನ್ನು ಇದೇ 17ರಿಂದ ಪ್ರಾರಂಭಿಸಲಾಗುವುದು.
ಎರಡು ಹಾಡುಗಳನ್ನು ಬೆಂಗಳೂರಿನಲ್ಲಿ ಹಾಗೂ 1 ಹಾಡನ್ನು ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು ಎಂದು ನಿರ್ಮಾಪಕ, ನಿರ್ದೇಶಕ ಪ್ರಕಾಶ್ ಅವರು ತಿಳಿಸಿದ್ದಾರೆ. ಅಭಯ್ ಸೂರ್ಯ ಕ್ರಿಯೇಷನ್ಸ್ ಲಾಂಛನದಲ್ಲಿ ಅಶ್ವಿನಿ ಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ ಪ್ರಕಾಶ್.
ಮನೋಮೂರ್ತಿ ಅವರ ಸಂಗೀತ ಸಂಯೋಜನೆ, ಸತ್ಯ ಹೆಗಡೆ ಛಾಯಾಗ್ರಹಣ, ರವಿವರ್ಮರ ಸಾಹಸ ಸಂಯೋಜನೆ, ಎಂ.ಎಸ್. ರಮೇಶ್ ಸಂಭಾಷಣೆ, ಜಯಂತ್ ಕಾಯ್ಕಿಣಿ, ಧನಂಜಯರ ಸಾಹಿತ್ಯ ಇದ್ದು, ವಿಜಯ ರಾಘವೇಂದ್ರ, ಪೂಜಾ ಗಾಂಧಿ, ಯಶ್, ನಕ್ಷತ್ರ, ಶ್ರೀನಿವಾಸಮೂರ್ತಿ, ಸುಮಿತ್ರಾ, ಪವನ್, ರಘುರಾಜ್ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











