ಹೆಸರು ಸಿದ್ಲಿಂಗು ರೋಹಿಣಿ ನಕ್ಷತ್ರ, ವೃಷಭ ರಾಶಿ
ವಿಭಿನ್ನ ಜಾಹೀರಾತಿನ ಮೂಲಕ ಗಮನಸೆಳೆಯುತ್ತಿರುವ ಚಿತ್ರ 'ಸಿದ್ಲಿಂಗು'. ಲೂಸ್ ಮಾದ ಖ್ಯಾತಿಯ ಯೋಗೇಶ್ ಜೊತೆಗೆ ಇದೇ ಮೊದಲ ಬಾರಿಗೆ ರಮ್ಯಾ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ. ಪತ್ರಿಕೆಗಳಲ್ಲಿ ಬರುತ್ತಿರುವ ಚಿತ್ರ ಪ್ರಚಾರತಂತ್ರ ಕ್ರಿಯಾಶೀಲತೆಯಿಂದ ತುಂಬಿದೆ.
"ದಸರಾಗೆ ಎಲ್ರೂ ಗೊಂಬೆಗಳನ್ನು ತಂದ್ರೆ, ಸಿದ್ಲಿಂಗು ನಿಮ್ಗೆ ಅಂತ ಸೋಪು, ಪೇಸ್ಟು, ಶಾಂಪೂ ತರ್ತಾವ್ನೆ..." ಎಂಬ ಬರಹದೊಂದಿಗೆ ಸಿದ್ಲಿಂಗು ಚಿತ್ರ ಗಮನಸೆಳೆಯುತ್ತದೆ. ಸ್ಯಾಮಿ ಆಸೋಸಿಯೇಟ್ಸ್ ಲಾಂಛನದಲ್ಲಿ ಟಿ.ಪಿ.ಸಿದ್ದರಾಜು ಅವರು ನಿರ್ಮಿಸುತ್ತಿರುವ 'ಸಿದ್ಲಿಂಗು ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.
ದೇವರ ಮೇಲೆ ಸೆರೆ ಹಿಡಿಯಲಾದ ಚಿತ್ರದ ಪ್ರಥಮ ಸನ್ನಿವೇಶಕ್ಕೆ ನಿರ್ಮಾಪಕ ಕೆ.ಮಂಜು ಆರಂಭ ಫಲಕ ತೋರಿದರು. ಉದ್ಯಮದ ಗಣ್ಯರು ಹಾಗೂ ಚಿತ್ರತಂಡದವರು ಈ ಸಂದರ್ಭದಲ್ಲಿ ಹಾಜರಿದ್ದರು. ರಂಗಾಯಣರಘು, ಅಚ್ಯುತಕುಮಾರ್ ಸೇರಿದಂತೆ ಅನುಭವಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರದ ನಿರ್ದೇಶಕರು ವಿಜಯಪ್ರಸಾದ್. ಸಿಲ್ಲಿಲಲ್ಲಿ, ಪಾಪಪಾಂಡು ಮುಂತಾದ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿರುವ ನಿರ್ದೇಶಕರಿಗೆ ಹಿರಿತೆರೆಯಲ್ಲಿ ಇದು ಚೊಚ್ಚಲ ಚಿತ್ರ. ಡಿಸಂಬರ್‌ನಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಐದು ಹಾಡುಗಳಿರುವ ಈ ಚಿತ್ರಕ್ಕೆ ಅನೂಪ್‌ಸೀಳಿನ್ ಗಟ್ಟಿಮೇಳ ಬಾರಿಸಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ಅರಸು ಅಂತಾರೆ, ವಿಜಯಪ್ರಸಾದ್ ಗೀತರಚನೆ, ಕತ್ರಿ ಪ್ರಯೋಗ (ಸಂಕಲನ)ಉದಯರವಿಹೆಗಡೆ, ಮಧುಗಿರಿ ಪ್ರಕಾಶ್ ಆಡು ಆಟ ಆಡು (ನಿರ್ಮಾಣ ನಿರ್ವಹಣೆ) ಹಾಗೂ ಹೊಸ್ಮನೆ ಮೂರ್ತಿ ಮೊಳೆ ಸುತ್ತಿಗೆ (ಕಲಾ ನಿರ್ದೇಶನ) 'ಸಿದ್ಲಿಂಗು' ಚಿತ್ರಕ್ಕಿದೆ.


Click it and Unblock the Notifications











