»   » ಟಿಕೆಟ್ ಭರಾಟೆಯಲ್ಲಿ ಮೇಲಕ್ಕೇರಿದ ಗಾಳಿಪಟ

ಟಿಕೆಟ್ ಭರಾಟೆಯಲ್ಲಿ ಮೇಲಕ್ಕೇರಿದ ಗಾಳಿಪಟ

Subscribe to Filmibeat Kannada

ಯೋಗರಾಜಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೋಡಿಯ ಬಹುನಿರೀಕ್ಷಿತ ಚಿತ್ರ, ಗಾಳಿಪಟ ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ ನಗರದ ಅಪರ್ಣ, ಪ್ರಮೋದ್, ಪ್ರಸನ್ನ ಹಾಗೂ ನವರಂಗ್ ಚಿತ್ರ ಮಂದಿರಗಳಲ್ಲಿ ಟಿಕೆಟ್‌ಗಾಗಿ ನೂಕು ನುಗ್ಗಲು ಶುರುವಾಗಿದೆ.

  • ದಟ್ಸ್ ಕನ್ನಡ ಸಿನಿ ಡೆಸ್ಕ್
ನಗರದ ಯುವಕರ ಯುವತಿಯರ ದಂಡು ಚಿತ್ರಮಂದಿರಗಳ ಸುತ್ತ ಸುತ್ತುತ್ತಿದೆ. ಇದಲ್ಲದೆ ಕಾರ್ಪೋರೇಟ್ ವಲಯದ ಯುವ ಜನತೆಗಾಗೇ ಇರುವ ಪಿವಿಆರ್, ಇನೋಕ್ಸ್,ಫನ್ ಸಿನಿಮಾಸ್‌ನಲ್ಲಿ ವಾರದವರೆಗೂ ಟಿಕೆಟ್ ಬುಕ್ ಆಗಿದೆ. ಮುಂಗಾರುಮಳೆಯ ಯಶಸ್ಸಿನ ರುಚಿ ಕಂಡಿರುವ ಪಿವಿಆರ್ ಸಿನಿಮಾಸ್ ಗುರುವಾರ ಮಧ್ಯರಾತ್ರಿವರೆಗೂ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಬಗ್ಗೆ ಸುಳಿವು ಕೊಡದೆ, ಬಹಳಷ್ಟು ಜನಕ್ಕೆ ನಿರಾಶೆ ಮೂಡಿಸಿದರೂ, ಸಾಲುಗಟ್ಟಿ ನಿಂತು ತಂಡೋಪತಂಡವಾಗಿ ಈ ದುಬಾರಿ ಚಿತ್ರ ಮಂದಿರಗಳತ್ತ ಜನ ಲಗ್ಗೆ ಹಾಕುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 60ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಗಾಳಿಪಟ, ಈ ಬಾರಿ ಹೈದ್ರಾಬಾದ್ ನ ಐಮ್ಯಾಕ್ಸ್, ಚೆನ್ನೈನ ಕ್ಯಾಸಿನೊ, ಮುಂಬಯಿಯ ಲಿಬರ್ಟಿ, ಪಿವಿಆರ್ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವುದು ವಿಶೇಷ.

ಚಿತ್ರಕ್ಕೆ ಸುರಿದಿರುವ ಹಣ ಸರಿ ಸುಮಾರು 8 ಕೋಟಿ. ಗ್ರಾಫಿಕ್ಸ್‌ಗಾಗಿ ಸುಮಾರು 75ಲಕ್ಷ ಖರ್ಚು ಮಾಡಲಾಗಿದೆ. ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ರಿಚ್‌ನೆಸ್ ಚಿತ್ರಕ್ಕೆ ಸಿಕ್ಕಿದೆ. ಗಾಳಿಪಟ ಚಿತ್ರಕ್ಕೆ ಸುಮಾರು 70 ಪ್ರಿಂಟ್ ಗಳನ್ನು ಹಾಕಿಸಲಾಗಿದ್ದು, ಪ್ರತಿ ದಿನ ಸುಮಾರು 300 ಪ್ರದರ್ಶನವಾಗಲಿದೆ. ಹೊರರಾಜ್ಯಗಳಲ್ಲೂ ಭಾರೀ ಬೇಡಿಕೆ ಬಂದಿದೆ ಎಂದು ಗಾಂಧಿನಗರದಲ್ಲಿ ನಿರ್ದೇಶಕನಾಗಿ ನೆಲೆಯೂರಲು ಹೆಣಗಾಡಿದ ದಯಾಳ್ ಪದ್ಮನಾಭನ್ ಹೇಳಿದರು. ದಯಾಳ್ ಈ ಚಿತ್ರದ ಕಾರ್ಯಕಾರಿಣಿ ನಿರ್ಮಾಪಕರಲ್ಲದೆ, ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ವಿಶೇಷಗಳು:

  • 35 MM ತಂತ್ರಜ್ಞಾನ ಹೊಂದಿದ ಕ್ಯಾಮೆರಾ ಬಳಸಿ ಪೂರ್ಣ ಚಿತ್ರವನ್ನು ಚಿತ್ರೀಕರಣ ಮಾಡಲಾಗಿದ್ದು, ಇದಕ್ಕೆ ಸುಮಾರು 1 ಕೋಟಿ ರು ವೆಚ್ಚ ತಗುಲಿದೆ.
  • ಎಸ್ ಪಿ ಆರ್ ಗ್ರೂಪ್ ನಿರ್ಮಾಣದ, 8 ಕೋಟಿ ವೆಚ್ಚದ ಈ ಚಿತ್ರದ ಪ್ರಮುಖ ಆಕರ್ಷಣೆಯಾದ ಹಂದಿ(ಗ್ರಾಫಿಕ್ಸ್)ಗಾಗಿ 75 ಲಕ್ಷ ರು ಖರ್ಚು ಮಾಡಲಾಗಿದೆ.
  • ಮೇಗರವಳ್ಳಿ, ಮಾನ್ವಿ ಅಣೇಕಟ್ಟು, ತೀರ್ಥಹಳ್ಳಿ, ಕುಂದಾಂದ್ರಿ ಬೆಟ್ಟ , ಕೆಳಗೂರು ಟೀ ಹಾಗೂ ಕಾಫಿ ಎಸ್ಟೇಟ್, ಬಾನೂರು ಎಸ್ಟೇಟ್, ಹನಿವ್ಯಾಲಿ ಎಸ್ಟೇಟ್, ಕಳಸ, ಸಕಲೇಶಪುರ, ಶಿವನಸಮುದ್ರ, ಬೆಂಗಳೂರು, ಮೈಸೂರು, ಮೇಲುಕೋಟೆ, ವೇಣುಗೋಪಾಲಸ್ವಾಮಿ ಬೆಟ್ಟ, ಕಾಸರಗೋಡು, ಮಡಿಕೇರಿ ಹಾಗೂ ಕೊಡಚಾದ್ರಿಯ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
  • ಯೋಗರಾಜ ಭಟ್ಟರ ನಿರೂಪಣೆ, ಜಯಂತ್ ಕಾಯ್ಕಿಣಿ ಸಾಹಿತ್ಯ್ಯ, ಹರಿಕೃಷ್ಣರವರ ಅಗತ್ಯಕ್ಕೆ ತಕ್ಕ ಸಂಗೀತ, ಗೋಲ್ಡನ್ ಸ್ಟಾರ್ ಗಣೇಶ್ ಅವರ ಒಂದು ವಾಕ್ಯದ ಡೈಲಾಗ್‌ಗಳು, ದಿಗಂತ್ ಅವರ ಪ್ರಬುದ್ಧ ಅಭಿನಯ, ಮೌನ ಮರೆಯಲ್ಲಿ ಮಾತಾಡುವ ರಾಜೇಶ್ ಕೃಷ್ಣನ್ ಒಂದು ರೀತಿ ಸೆಳೆಯುತ್ತದೆ.
  • ಉಳಿದಂತೆ ಅನಂತ್‌ನಾಗ್, ಚಿಕ್ಕ ಪಾತ್ರದಲ್ಲಿ ಬರುವ ರಂಗಾಯಣ ರಘು, ಪದ್ಮಜಾ ರಾವ್, ಸುಧಾ ಬೆಳವಾಡಿ ಪೋಷಕ ಪಾತ್ರದಲ್ಲಿದ್ದಾರೆ. ಮೂವರು ನಾಯಕಿರು ಸೈ ಎನಿಸಿಕೊಂಡ ಮೊದಲ ಚಿತ್ರ ಇದೇ ಅನ್ನಬಹುದು. ಡೈಸಿ ಬೋಪಣ್ಣ ಕಣ್ಣಿನಲ್ಲೇ ಮಾತಾಡಿದರೆ, ನೀತಾ ಡೈಲಾಗ್‌ಗಳು ಖುಷಿ ಕೊಡುತ್ತವೆ, ನರ್ತಕಿ ಭಾವನರಾವ್ ತಮ್ಮ ಆಯ್ಕೆ ಯನ್ನು ಸಮರ್ಥಿಸಿಕೊಂಡಿದ್ದಾರೆ.
  • ತಾಂತ್ರಿಕ ವರ್ಗದಲ್ಲಿ ಆರ್. ರತ್ನವೇಲು ಅದ್ಭುತ ದೃಶ್ಯಗಳನ್ನು ಮನಸ್ಸಿಗೆ ಹಿತವಾಗುವಂತೆ ಸೆರೆ ಹಿಡಿದಿದ್ದಾರೆ. ಸುರೇಶ್ ಅರಸ್ ಅವರ ಸಂಕಲನ, ಶಶಿಧರ ಅಡಪ ಅವರ ಕಲೆ ಕೂಡ ಈ ಚಿತ್ರದ ಪ್ರಮುಖ ಹೈ ಲೈಟ್ ಅನ್ನಬಹುದು.
ಒಟ್ಟಿನಲ್ಲಿ ಎಲ್ಲರ ಮನದ ಮುಗಿಲಲ್ಲಿ ಮೊಹಬ್ಬತ್ ಮೂಡಿಸುವುದರಲ್ಲಿ ಗಾಳಿಪಟ ಯಶಸ್ವಿಯಾಗುವ ಎಲ್ಲ ಸೂಚನೆಗಳು ಕಾಣಿಸುತ್ತಿದೆ.

ಗಾಳಿಪಟ ಚಿತ್ರದ ಗ್ಯಾಲರಿ ಒಮ್ಮೆ ನೋಡಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada