»   » ಚಿತ್ರರಂಗಕ್ಕೆ 500 ಕೋಟಿ ರು. ವೆಚ್ಚದ ಫಿಲಂ ಸಿಟಿ

ಚಿತ್ರರಂಗಕ್ಕೆ 500 ಕೋಟಿ ರು. ವೆಚ್ಚದ ಫಿಲಂ ಸಿಟಿ

Subscribe to Filmibeat Kannada


ಬೆಂಗಳೂರು, ಜ.18: ಮೈಸೂರು ರಸ್ತೆಯ ಬಿಡದಿ ಬಳಿ 500 ಕೊಟಿ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸುಮಾರು 14 ಲಕ್ಷ ಚದರ ಅಡಿ ವಿಸ್ತೀರ್ಣದ ಫಿಲಂ ಸಿಟಿ ತಲೆಯೆತ್ತಲಿದೆ. ಇದನ್ನು ಇನ್ನೋವೇಟಿವ್ ಸ್ಟುಡಿಯೋಸ್ ನಿರ್ಮಿಸುತ್ತಿದೆ.

ಬಿಡದಿಯಿಂದ ಕೂಗಳತೆ ದೂರದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಸುಮಾರು 50 ಎಕರೆ ವಿಸ್ತೀರ್ಣದಲ್ಲಿ ಹಬ್ಬಿರುವ ಈ ಪ್ರದೇಶದಲ್ಲಿ ಫಿಲಂ ಸಿಟಿಯನ್ನು ನಿರ್ಮಿಸಲಾಗುತ್ತಿದ್ದು, ಇದು ಎಲ್ಲಾ ವಯೋಮಾನದವರಿಗೂ ಮನರಂಜನೆಯ ತಾಣವಾಗಲಿದೆ. ಇಲ್ಲಿ ವಸ್ತು ಸಂಗ್ರಹಾಲಯ, ಪ್ರಖ್ಯಾತ ತಾರೆಯರ ಮೇಣದ ಪ್ರತಿಮೆಗಳು, ನೈಸರ್ಗಿಕ ಪರಿಸರದ ಹಿನ್ನಲೆಯಲ್ಲಿ ಘರ್ಜಿಸುವ ಡೈನೋಸಾರ್‌ಗಳ ಪ್ರತಿಮೆಗಳು, ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಚಿತ್ರಮಂದಿರ, ವಿವಿಧ ನಮೂನೆಯ ಮೀನುಗಳ ಲೋಕ, ಥಾಯ್ ಬೀಚ್, ಕಾರ್ ಮತ್ತು ದೋಣಿ ವಿಹಾರ ಸೌಲಭ್ಯವಿರುವ ಕಾರ್ಟೂನ್ ಸಿಟಿ, ವಾಣಿಜ್ಯ ಮಳಿಗೆಗಳು ಇನ್ನೂ ಮುಂತಾದ ಮನರಂಜನೆಯ ಸೌಲಭ್ಯಗಳು ಫಿಲಂ ಸಿಟಿಯಲ್ಲಿ ಇರುತ್ತವೆ.

5,000 ಪ್ರೇಕ್ಷಕರು ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಬಯಲು ರಂಗಮಂದಿರ, ಅತ್ಯಾಧುನಿಕ ಜೀವನ ಶೈಲಿಗೆ ಹೊಂದುವ ಸರ್ವೀಸ್ ಅಪಾರ್ಟ್‌ಮೆಂಟ್‌ಗಳು, ಮತ್ತಿತರ ಐಷಾರಾಮಿ ಸೌಲಭ್ಯಗಳು ಫಿಲಂ ಸಿಟಿಯಲ್ಲಿ ದೊರೆಯಲಿವೆ. ಏಪ್ರಿಲ್ ತಿಂಗಳಲ್ಲಿ ಸಾರ್ವಜನಿಕರ ಭೇಟಿಗೆ ಮುಕ್ತವಾಗುವ ಫಿಲಂ ಸಿಟಿಗೆ ಪ್ರತಿದಿನ 10 ರಿಂದ 20 ಸಾವಿರ ಪ್ರೇಕ್ಷಕರು ಭೇಟಿ ಕೊಡುವ ನಿರೀಕ್ಷೆ ಇದೆ ಎಂದು ಇನ್ನೋವೇಟಿವ್ ಸ್ಟುಡಿಯೋಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸರವಣ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.

ಭಾರತೀಯ ಚಿತ್ರೋದ್ಯಮಕ್ಕೆ ಅನುಕೂಲವಾಗುವಂತೆ ಅತ್ಯಾಧುನಿಕ ಫಿಲಂ ಸ್ಟುಡಿಯೋ ನಿರ್ಮಿಸುವುದು ನಮ್ಮ ಉದ್ದೇಶವಾಗಿತ್ತು. ಜತೆಗೆ ಇಡೀ ಕುಟುಂಬಕ್ಕೆ ವಿಭಿನ್ನ ಬಗೆಯ ಮನರಂಜನೆ ಸೌಲಭ್ಯ ಒದಗಿಸುವುದೂ ನಮ್ಮ ಗುರಿಯಾಗಿತ್ತು. ಮೊದಲ ವರ್ಷದಲ್ಲಿ ಸುಮಾರು ಆರು ದಶಲಕ್ಷ ಜನರು ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ 2,000 ಕಾರುಗಳು ಅದಕ್ಕಿಂತಲೂ ಹೆಚ್ಚಿನ ದ್ವಿಚಕ್ರ ವಾಹನಗಳ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಸಾದ್ ತಿಳಿಸಿದರು.

ಇದರ ನಿರ್ಮಾಣಕ್ಕಾಗಿ ಅಮೆರಿಕ, ಬ್ರಿಟನ್, ಉಕ್ರೇನ್, ಚೀನಾ, ಆಸ್ಟ್ರೇಲಿಯಾ ಮತ್ತು ಜರ್ಮನಿ ದೇಶಗಳು ಕೈಜೋಡಿಸಿವೆ. ಇದನ್ನು ರಾಜ್ಯ ಸರ್ಕಾರ ಪ್ರಮುಖ ಪ್ರವಾಸಿ ತಾಣ ಎಂದು ಗುರುತಿಸಿದೆ. ಕನ್ನಡ ಚಿತ್ರಗಳಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಸರವಣ ಪ್ರಸಾದ್ ತಿಳಿಸಿದ್ದಾರೆ.

(ದಟ್ಸ್‌ ಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada