»   » ‘ಒಂದೇ ಒಂದು ಅವಕಾಶ ಕೊಡಿ’ - ಎ.ಟಿ.ರಘು

‘ಒಂದೇ ಒಂದು ಅವಕಾಶ ಕೊಡಿ’ - ಎ.ಟಿ.ರಘು

Posted By:
Subscribe to Filmibeat Kannada
  • ದಟ್ಸ್‌ ಕನ್ನಡ ಸಿನಿಡೆಸ್ಕ್‌
ಪ್ರೇಕ್ಷಕರಿಗೆ ಅದರಲ್ಲೂ ಗಾಂಧಿನಗರಕ್ಕೆ ಮರೆವು ಜಾಸ್ತಿ. ಒಂದು ಕಾಲದಲ್ಲಿ ಅಂಬರೀಷ್‌ರ ಬಹುಪಾಲು ಚಿತ್ರಗಳ ನಿರ್ದೇಶಿಸಿ ಚಲಾವಣೆಯಲ್ಲಿದ್ದ ಎ.ಟಿ.ರಘು ಈವರೆಗೆ ಅಜ್ಞಾತ ವಾಸದಲ್ಲಿದ್ದರು. ಈಗಲೂ ಮುಗಿದಿದೆಯೋ ಇಲ್ಲವೋ ಗೊತ್ತಿಲ್ಲ. ‘ಒಂದೇ ಒಂದು ಅವಕಾಶ ನೀಡಿ...’ ಎಂದು ಕೇಳುವ ಮುಜುಗರದ ಪರಿಸ್ಥಿತಿ ಅವರದಾಗಿದೆ.

ಕೆಲಸವಿಲ್ಲದೇ ಮನೆಯಲ್ಲಿ ಕೂತಿದ್ದ ರಘು ಅವರಿಗೆ ಕೆಲಸವೊಂದು ಸಿಕ್ಕಿದೆ. ನಿರ್ದೇಶಕರಾಗಿ ಅಲ್ಲ. ನಟರಾಗಿ. ಗುಡ್‌ಲಕ್‌ ಚಿತ್ರದ ನಂತರ ಮುಂದೇನು ಎಂಬ ಪ್ರಶ್ನೆ ಅವರ ಮನದಲ್ಲಿದೆ.

ನಿಮಗೆ ನೆನಪಿರಬಹುದು, ಶಿವಸೈನ್ಯ ಚಿತ್ರದಲ್ಲಿ ಸೂರ್ಯಸ್ವಾಮಿ ಪಾತ್ರದಲ್ಲಿ ರಘು ಹಿಂದೆ ನಟಿಸಿದ್ದರು. ಒಂದು ಕಾಲದಲ್ಲಿ ಯಶಸ್ವಿ ಚಿತ್ರಗಳನ್ನು ನೀಡಿದ ರಘು, ಬೆಳೆದಷ್ಟೇ ವೇಗವಾಗಿ ಬದಿಗೆ ಸರಿದರು. ‘ಒಂದೇ ಒಂದು ಅಪಯಶಸ್ಸು, ಹತ್ತಾರು ಯಶಸ್ಸುಗಳನ್ನು ಮೂಲೆ ಗುಂಪು ಮಾಡುತ್ತದೆ’ ಎನ್ನುವ ಮಾತು ಇವರ ವಿಚಾರದಲ್ಲಿ ನಿಜವಾಗಿದೆ.

ಕಳೆದ 35ವರ್ಷಗಳಿಂದ ರಘು ಚಿತ್ರರಂಗದಲ್ಲಿದ್ದಾರೆ. ಮಂಡ್ಯದ ಗಂಡು, ಮೈಸೂರು ಜಾಣ, ಆಶಾ, ಕಾಡಿನ ರಾಜ, ಅಂತಿಮತೀರ್ಪು, ಪದ್ಮವ್ಯೂಹ ಸೇರಿದಂತೆ 32 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈ ಮೂವತ್ತೆರಡು ಚಿತ್ರಗಳ ಪೈಕಿ ಇಪ್ಪತ್ತೆೈದು ಚಿತ್ರಗಳಲ್ಲಿ ಅಂಬರೀಷ್‌ ನಾಯಕ ನಟರಾಗಿ ಅಭಿನಯಿಸಿದ್ದಾರೆ.

ಅಂಬರೀಷ್‌ಗೆ ಮಂಡ್ಯದ ಗಂಡು ಎಂಬ ಹೆಸರು ಬಂದದ್ದು, ಇವರು ನಿರ್ದೇಶಿಸಿದ ಚಿತ್ರದಿಂದಲೇ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಮಂಡ್ಯದ ಗಂಡು ನಂತರ ರಘು ಚಿತ್ರಗಳು ಮುಗ್ಗರಿಸಿದವು. ಕೂಡಲೇ ನಿರ್ಮಾಪಕರು ಗೆಲ್ಲುವ ಕುದುರೆಯತ್ತ ಹೆಜ್ಜೆ ಹಾಕಿದರು. ರಘು ಅವರನ್ನು ಮರೆತುಬಿಟ್ಟರು.

‘ಚಿತ್ರರಂಗ ಬಿಟ್ಟು ರಘು ತಮ್ಮ ಹಳ್ಳಿಗೆ ಹೋಗಿ ತೋಟ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿವೆ. ಆದರೆ ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಬಸವೇಶ್ವರ ನಗರದಲ್ಲಿ ನಮ್ಮ ಮನೆಯಿದೆ’ ಎಂದು ವಿಳಾಸ ಹೇಳುವ ದುರಂತ ರಘು ಅವರದು.

ಅವಕಾಶಗಳ ನಿರೀಕ್ಷೆಯಲ್ಲಿ, ಅದೂ ಅಂಬರೀಷ್‌ ಕರೆದು ಅವಕಾಶ ನೀಡುತ್ತಾರೆ ಎಂಬ ಕನಸಿನಲ್ಲಿರುವ ರಘುಗೆ ‘ಗುಡ್‌ಲಕ್‌’ ಅನ್ನೋಣವೇ?

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X